Transgender: ತಮಿಳುನಾಡಿನ ಪ್ರಥಮ ತೃತೀಯ ಲಿಂಗಿ ಪಂಚಾಯತ್ ಕಾರ್ಯದರ್ಶಿಯಾಗಿ ನೇಮಕವಾದ ದಾಕ್ಷಾಯಿಣಿ..!

ತಮಿಳುನಾಡಿನ (Tamil Nadu)  ತಿರುವಳ್ಳೂರ್ ಜಿಲ್ಲೆಯ ಪಂಚಾಯತ್ ಕಾರ್ಯದರ್ಶಿಯಾಗಿ ಪ್ರಪ್ರಥಮ ಬಾರಿಗೆ ಲಿಂಗ ಪರಿವರ್ತಿತ ಮಹಿಳೆಯೊಬ್ಬರು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ದಾಕ್ಷಾಯಿಣಿ

ದಾಕ್ಷಾಯಿಣಿ

  • Share this:
ಹಿಂದೆಲ್ಲಾ ತೃತೀಯ ಲಿಂಗಿಯರು (Transgender) ಕೇವಲ ಅವರ ರೂಢಿಗತ ಕೆಲಸದಲ್ಲಷ್ಟೇ ತೊಡಗಿಕೊಳ್ಳುತ್ತಿದ್ದರು. ಆದರೆ ಇಂದು ಆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಗಿದೆ ಎನ್ನಬಹುದು. ಅವರುಗಳು ನಾನಾ ವಿಧದ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ, ಫ್ಯಾಷನ್ (Fashion) ಜಗತ್ತಿನಲ್ಲಂತೂ ತಮ್ಮದೇ ಆದ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಆದರೂ, ಸಮಾಜ ಅವರನ್ನು ನೋಡುವ ದೃಷ್ಟಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬಂದಿಲ್ಲ ಎಂಬುವುದು ಕೂಡ ವಿಪರ್ಯಾಸದ ಸಂಗತಿ. ಅಂತದ್ದೇ ತೃತೀಯ ಲಿಂಗಿ ಅಥವಾ ಲಿಂಗ ಪರಿವರ್ತಿತ ಮಹಿಳೆಯೊಬ್ಬರು, ಪಂಚಾಯತ್ ಕಾರ್ಯದರ್ಶಿಯಾಗಿ ನೇಮಕಗೊಂಡ ಸಂಗತಿ ಇಲ್ಲಿದೆ. ಹೌದು, ತಮಿಳುನಾಡಿನ (Tamil Nadu)  ತಿರುವಳ್ಳೂರ್ ಜಿಲ್ಲೆಯ ಪಂಚಾಯತ್ ಕಾರ್ಯದರ್ಶಿಯಾಗಿ ಪ್ರಪ್ರಥಮ ಬಾರಿಗೆ ಲಿಂಗ ಪರಿವರ್ತಿತ ಮಹಿಳೆಯೊಬ್ಬರು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ದಾಕ್ಷಾಯಿಣಿ ಎಂಬ ಹೆಸರಿನ ತೃತಿಯ ಲಿಂಗಿಯೊಬ್ಬರು 2010 ರಲ್ಲಿ ಅವರು ಚಂದನ್‍ರಾಜ್ ಎಂಬ ಹೆಸರಿನ ಪುರುಷನಾಗಿ ಪಂಚಾಯತ್ ಕಾರ್ಯದರ್ಶಿ ಆಗಿದ್ದರು. ಆದರೆ ತಮ್ಮ ಲೈಂಗಿಕ ಗುರುತಿನ ಕಾರಣದಿಂದ ಮಾನಸಿಕ ವೇದನೆ ಅನುಭವಿಸಿ ಅವರು, ಆ ಕೆಲಸಕ್ಕೆ ರಾಜಿನಾಮೆ ನೀಡಿದ್ದರು.

ರಾಜ್ಯದ ಮೊಟ್ಟ ಮೊದಲ ಲಿಂಗ ಪರಿವರ್ತಿತ ಮಹಿಳಾ ಪಂಚಾಯತ್ ಕಾರ್ಯದರ್ಶಿ:

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆರು ವರ್ಷಗಳ ಬಳಿಕ, 2022 ರ ಮಾರ್ಚ್ 24 ರಂದು, 30 ವರ್ಷ ವಯಸ್ಸಿನ ಅವರು ರಾಜ್ಯದ ಮೊಟ್ಟ ಮೊದಲ ಲಿಂಗ ಪರಿವರ್ತಿತ ಮಹಿಳಾ ಪಂಚಾಯತ್ ಕಾರ್ಯದರ್ಶಿಯಾಗಿ , ಕೋಡಿವೇಲಿ ಪಂಚಾಯತ್‍ಗೆ ನೇಮಕಗೊಂಡರು.

ಇದನ್ನೂ ಓದಿ: Puberty: ತೃತೀಯಲಿಂಗಿ ಮಗಳ ಮುಟ್ಟಿನ ಮದುವೆ..! ಮಾದರಿಯಾದ್ರು ಈ ಪೋಷಕರು

ನನ್ನ ದೇಹದಲ್ಲಿ ಆಗುತ್ತಿರುವ ರೂಪಾಂತರದ ಬಗ್ಗೆ ಅರಿವಿತ್ತು:

ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿರುವ ದಾಕ್ಷಾಯಿಣಿ ಅವರು, 2010-2015 ರ ವರೆಗೆ ಪೂಣಮಲ್ಲಿ ಯೂನಿಯನ್‍ಗೆ ಒಳಪಡುವ ಅಣ್ಣಂಪೇಡು ಪಂಚಾಯತ್‍ನಲ್ಲಿ ಕಾರ್ಯದರ್ಶಿಯಾಗಿದ್ದರು. ಅವರು ಕೇವಲ 4 ವರ್ಷದವರಿದ್ದಾಗ, ತಂದೆ ಅವರ ಕುಟುಂಬವನ್ನು ತೊರೆದು ಹೋಗಿದ್ದರು. ತಂದೆಯ ಆಸರೆ ಇಲ್ಲದ ಅವರು ಸಾಮಾಜಿಕ ಒತ್ತಡದ ಕಾರಣದಿಂದ ಪುರುಷನಾಗಿಯೇ ಮುಂದುವರೆಯಬೇಕಾಯಿತು. ನನ್ನ ಹದಿಹರೆಯಲ್ಲಿ ನನ್ನ ದೇಹದಲ್ಲಿ ಆಗುತ್ತಿರುವ ರೂಪಾಂತರದ ಬಗ್ಗೆ ನನಗೆ ಅರಿವಿತ್ತು. ಆದರೆ ನಾನು ಅದನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ.ನಾನು ವಾರದ ದಿನಗಳಲ್ಲಿ ಹುಡುಗನಂತೆ ಬದುಕುತಿದ್ದೆ. ವಾರಾಂತ್ಯದಲ್ಲಿ ನಾನು ಸೀರೆ ಉಡುತ್ತಿದ್ದೆ ಮತ್ತು ನನಗೆ ಇಷ್ಟವಿದ್ದ ರೀತಿ ಬದುಕುತ್ತಿದ್ದೆ. ಕ್ರಮೇಣ, ಅದು ಹೆಚ್ಚಾಯಿತು ಮತ್ತು ನಾನು ಮನೆಯಿಂದ ಓಡಿ ಹೋಗಬೇಕು ಮತ್ತು ಲಿಂಗಪರಿವರ್ತಿತ ಮಹಿಳೆಯಾಗಿ ಬದುಕಬೇಕು ಎಂದು ನಿರ್ಧರಿಸಿದೆ” ಎಂದು ದಾಕ್ಷಾಯಿಣಿ ಹೇಳಿಕೊಂಡಿದ್ದಾರೆ.

ಮತ್ತೆ ಕುಟುಂಬ ಸೇರಿಕೊಂಡ ದಾಕ್ಷಾಯಿಣಿ:

2015 ರಿಂದ ಅವರು ಮುಂಬೈ ಮತ್ತು ನೇಪಾಳದಲ್ಲಿ ಸುತ್ತಾಡಿದರು ಹಾಗೂ ಚೆನ್ನೈಗೆ ಮರಳಿದರು. ನಾನು ದೇವಾಲಯದ ಅರ್ಚಕನಾಗಿ ಕೆಲಸ ಮಾಡಿದೆ ಮತ್ತು ಸಣ್ಣಪುಟ್ಟ ವೃತ್ತಿಗಳನ್ನು ನಿರ್ವಹಿಸಿದೆ. ನನ್ನ ತೃತೀಯ ಲಿಂಗೀಯ ಸಮಾಜವು ನನ್ನನ್ನು ಬೆಂಬಲಿಸಿತು ಮತ್ತು 2016 ರಲ್ಲಿ ಕಿಲ್‍ಪಾವ್ಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ನನಗೆ ಸಹಾಯ ಮಾಡಿದೆ ಎಂದು ದಾಕ್ಷಾಯಿಣಿ ಹೇಳಿದ್ದಾರೆ. 2020 ರಲ್ಲಿ ದಾಕ್ಷಾಯಿಣಿಯನ್ನು ಗುರುತಿಸಿದ ಕುಟುಂಬದ ಸ್ನೇಹಿತರೊಬ್ಬರು, ಆಕೆಯನ್ನು ಕುಟುಂಬದೊಂದಿಗೆ ಮರು ಸಂಪರ್ಕ ಮಾಡಿಸಲು ಬಯಸಿದರು.

ಅವರು ನನ್ನನ್ನು ಸ್ವೀಕರಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನ್ನ ತಂದೆ ನಿಧನರಾದರು ಎಂಬುದನ್ನು ನಾನು ತಿಳಿದುಕೊಂಡೆ. ನನ್ನ ಕಿರಿಯ ಸಹೋದರ ಎಸಿ ಮೆಕ್ಯಾನಿಕ್ ಉದ್ಯೋಗಕ್ಕೆ ಸೇರಿಕೊಂಡಿದ್ದ. ನನ್ನ ತಾಯಿ ನನಗೆ ಬೆಂಬಲವಾಗಿ ನಿಂತರು ಮತ್ತು ಅದು ನನಗೆ ಕೆಲಸಕ್ಕೆ ಮರು ಅರ್ಜಿ ಸಲ್ಲಿಸುವ ಧೈರ್ಯವನ್ನು ನೀಡಿತು ಎಂದು ಹೇಳುತ್ತಾರೆ ದಾಕ್ಷಾಯಿಣಿ.

ತೃತೀಯ ಲಿಂಗೀಯ ಸಮುದಾಯಕ್ಕೆ ಹೆಮ್ಮೆ:

ದಾಕ್ಷಾಯಿಣಿ , ಕೆಲಸಕ್ಕೆ ದೀರ್ಘಾವಧಿಯ ಗೈರು ಹಾಜರಾಗಿದ್ದನ್ನು ಕ್ರಮಬದ್ಧಗೊಳಿಸುವಂತೆ ಮತ್ತು ತನ್ನನ್ನು ಪುನಃ ನೇಮಿಸಿಕೊಳ್ಳುವಂತೆ ಸರಕಾರಕ್ಕೆ ಪತ್ರವನ್ನು ಬರೆದರು. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಆಕೆ ಹಲವಾರು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬಳಿಕ ದಾಕ್ಷಾಯಿಣಿ ಅವರನ್ನು ಸಹಾನುಭೂತಿಯ ಆಧಾರದ ಮೇಲೆ ಪುನಃ ನೇಮಿಸಲಾಯಿತು.

ಇದನ್ನೂ ಓದಿ: Business on Facebook: ತೃತೀಯ ಲಿಂಗಿಯೊಬ್ಬರು ಯಶಸ್ವಿ ಉದ್ಯಮಿಯಾಗೋಕೆ ಫೇಸ್ಬುಕ್ ಕಾರಣವಾಗಿದೆ, ಯಾರು ಬೇಕಿದ್ರೂ ಈ ಟ್ರಿಕ್ ಟ್ರೈ ಮಾಡ್ಬಹುದು

ಲಿಂಗ ಪರಿವರ್ತನೆಯ ನಂತರ ತಾನು ಮತ್ತೆ ಪಂಚಾಯತ್ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ತನ್ನ ಇಡೀ ತೃತೀಯ ಲಿಂಗೀಯ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ದಾಕ್ಷಾಯಿಣಿ ಅವರು ಹೇಳಿದ್ದಾರೆ. ತನ್ನ ಜೀವನದಲ್ಲಿ , ವೃತ್ತಿಗೆ ಸಂಬಂಧಿಸಿದಂತೆ ಆಗಿರುವ ಈ ಬದಲಾವಣೆ, LGBTQ+ ಸಮುದಾಯದ ಇತರ ಸದಸ್ಯರಿಗೂ ಕೂಡ ಅನೇಕ ಉದ್ಯೋಗಾವಕಾಶಗಳನ್ನು ತೆರೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.
Published by:shrikrishna bhat
First published: