ಬೆಂಗಳೂರು: ವಿಶ್ವದಾದ್ಯಂತ ಟೆಕ್ ವಲಯ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಪ್ರತಿ ರಾಜ್ಯವೂ ತನ್ನ ತಂತ್ರಜ್ಞಾನ ವಲಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ ಮತ್ತು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳು ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ಈಗಾಗಲೇ ಭಾರತದಲ್ಲಿ ಆ್ಯಪಲ್ ಐಫೋನ್ಗಳನ್ನು (Apple iPhone) ತಯಾರಿಸುವ ಅತಿದೊಡ್ಡ ಘಟಕವನ್ನು ಬೆಂಗಳೂರು (Bengaluru) ಸಮೀಪ ತಮಿಳುನಾಡಿನ ಹೊಸೂರಿನಲ್ಲಿ (Hosur) ಆರಂಭಿಸುವ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದೆ.
500 ಎಕರೆಯ 'ಟೆಕ್ ಸಿಟಿ'
ಈಗ ಇದರ ಬೆನ್ನಲ್ಲೇ ತಮಿಳುನಾಡು ರಾಜ್ಯ ಹೊಸೂರಿನಲ್ಲಿ 500 ಎಕರೆಯ 'ಟೆಕ್ ಸಿಟಿ' ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳು (ಇವಿ) ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯ ಕೇಂದ್ರವಾಗಿ ಹೊರಹೊಮ್ಮಿರುವ ಹೊಸೂರಿನಲ್ಲಿ, ಐಟಿ/ಐಟಿಇಎಸ್ ಸಂಸ್ಥೆಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಆಯೋಜಿಸಲು 500 ಎಕರೆ ಪ್ರದೇಶದಲ್ಲಿ 'ಟೆಕ್ ಸಿಟಿ' ಅನ್ನು ಶೀಘ್ರದಲ್ಲೇ ನಿರ್ಮಿಸಲು ಇಲ್ಲಿನ ಸರ್ಕಾರ ಯೋಜನೆ ರೂಪಿಸಿದೆ.
ಭೂಮಿ ಗುರುತಿಸಲು ಸೂಚನೆ
ಬೆಂಗಳೂರಿನ ಹೊರಭಾಗದಲ್ಲಿರುವ ಕೈಗಾರಿಕಾ ನಗರವಾದ ಹೊಸೂರಿನಲ್ಲಿ ಹೊಸ ಯೋಜನೆಗೆ ಅಡಿಪಾಯ ಹಾಕಿಕೊಳ್ಳುವ ಬಗ್ಗೆ ಎಲ್ಲಾ ರೀತಿಯ ಕೆಲಸಗಳು ನಡೆಯುತ್ತಿವೆ. ರಾಜ್ಯ ಸರ್ಕಾರವು ತಮಿಳುನಾಡು ರಾಜ್ಯ ಕೈಗಾರಿಕೆಗಳ ಉತ್ತೇಜನಾ ನಿಗಮಕ್ಕೆ ಉತ್ತಮ ಭೂಮಿಯನ್ನು ಗುರುತಿಸಲು ಸೂಚಿಸಿದೆ ಎನ್ನಲಾಗಿದೆ. ಹೊಸೂರನ್ನು ವೈವಿಧ್ಯಗೊಳಿಸುವುದು ಮತ್ತು ಎಲ್ಲಾ ರೀತಿಯ ಕ್ಷೇತ್ರಗಳಿಗೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿಕೊಂಡಿದೆ.
ಏನೆಲ್ಲಾ ಒಳಗೊಂಡಿರುತ್ತದೆ ಹೊಸೂರಿನ ಟೆಕ್ ಸಿಟಿ?
ಐಟಿ ಕಂಪನಿಗಳನ್ನು ಸ್ಥಾಪಿಸಲು ಕೆಲವು ಕಟ್ಟಡಗಳನ್ನು ಮಾತ್ರವಲ್ಲದೆ ಸ್ವಯಂ-ಒಳಗೊಂಡಿರುವ ನಗರವನ್ನು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ. ಭಾರತಕ್ಕೆ ಕಾಲಿಡುತ್ತಿರುವ ಐಟಿ/ಐಟಿಇಎಸ್ ಸಂಸ್ಥೆಗಳು ಮತ್ತು ಜಿಸಿಸಿಗಳಿಗೆ 'ಎ' ದರ್ಜೆಯ ಕಚೇರಿ ಸ್ಥಳವನ್ನು ಒದಗಿಸುವ ಟೆಕ್ ಸಿಟಿ ನಿರ್ಮಿಸುವುದು, ಅಲ್ಲಿ ಕೆಲಸ ಮಾಡುವವರಿಗೆ ಅಗತ್ಯವಿರುವ ಎಲ್ಲವನ್ನೂ 20 ನಿಮಿಷಗಳಲ್ಲಿ ದೊರಕಿಸಿ ಕೊಡುವಂತೆ ನಿರ್ಮಿಸಲಾಗುವುದು ಎಂದು ಸರ್ಕಾರದ ಮೂಲಗಳು ಯೋಜನೆ ಕುರಿತು ತಿಳಿಸಿವೆ.
ಮೆಟ್ರೋ ಸೌಲಭ್ಯ
ಹೋಟೆಲ್‌ಗಳಿಂದ ಹಿಡಿದು ಕನ್ವೆನ್ಷನ್ ಹಾಲ್‌ಗಳು, ಮನರಂಜನಾ ಸೌಲಭ್ಯಗಳು, ಪ್ಲಾಜಾಗಳು, ಶಾಲೆಗಳು ಮತ್ತು ಹೆಲಿಪ್ಯಾಡ್ ವ್ಯವಸ್ಥೆ ಇಲ್ಲಿ ಲಭ್ಯವಿರುತ್ತದೆ. ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸಂಪರ್ಕವನ್ನು ಸಹ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಶಿಪ್ಪಿಂಗ್ ಸಂಸ್ಥೆ ಯುನೈಟೆಡ್ ಪಾರ್ಸೆಲ್ ಸರ್ವಿಸ್ (UPS) ಭಾರತದಲ್ಲಿ ತನ್ನ ಮೊದಲ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲು ಚೆನ್ನೈ ಅನ್ನು ಆಯ್ಕೆ ಮಾಡಿದ ಬೆನ್ನಲ್ಲೇ, ಉತ್ತಮ ವಾಯು ಮಾರ್ಗ, ರೈಲು ಸಂಪರ್ಕ ಹೊಂದಿರುವ ಹೊಸೂರು ಕೂಡ ಜಿಸಿಸಿಗಳನ್ನು ಕೈಗಾರಿಕಾ ನಗರಕ್ಕೆ ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ದೊಡ್ಡ ಭರವಸೆಯಲ್ಲಿ ರಾಜ್ಯ ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಶೀಘ್ರದಲ್ಲೇ ಟೆಕ್ ಸಿಟಿ ನಿರ್ಮಾಣಕ್ಕೆ ಭೂಮಿ ಸ್ವಾಧೀನ
“ಯಾವುದೇ ಉತ್ಪಾದನಾ ಪ್ರಕ್ರಿಯೆಯು ಸಹ ಈಗ ಐಟಿ ಮೇಲೆ ಅವಲಂಬಿತವಾಗಿದೆ. ಎಲ್ಲಾ ರೀತಿಯ ಮತ್ತು EV ಗಳ ಉತ್ಪಾದನಾ ಸಂಸ್ಥೆಗಳಿಗೆ ಹೆಸರುವಾಸಿಯಾಗಿರುವ ಹೊಸೂರಿನಲ್ಲಿ ಟೆಕ್ ಸಿಟಿಯು ತುಂಬಾ ನಿರ್ಣಾಯಕ ಪಾತ್ರ ವಹಿಸುತ್ತದೆ. ನಾವು ಶೀಘ್ರದಲ್ಲೇ ಸ್ಟೇಟ್ ಇಂಡಸ್ಟ್ರೀಸ್ ಪ್ರಮೋಷನ್ ಕಾರ್ಪೊರೇಷನ್ ಆಫ್ ತಮಿಳುನಾಡು ಲಿಮಿಟೆಡ್ (SIPCOT) ನಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ. ಹೊಸ ನಗರ ನಿರ್ಮಾಣದ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತೇವೆ" ಎಂದು ಅಧಿಕೃತ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ತಮಿಳುನಾಡು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ ಕಿಸ್‌ಫ್ಲೋ ಸಿಇಒ ಸುರೇಶ್ ಸಂಬಂಧಮ್, "ಹೊಸೂರು ಬೆಂಗಳೂರಿಗೆ ಅವಳಿ ನಗರವಾಗಿ ಅಭಿವೃದ್ಧಿ ಹೊಂದಬೇಕು. ಐಟಿ ರಾಜಧಾನಿ ಬೆಂಗಳೂರಿಗೆ ಇದು ಹತ್ತಿರವಿರುವುದರಿಂದ ಮತ್ತಷ್ಟು ಪ್ರಯೋಜನವನ್ನು ಈ ಯೋಜನೆ ಪಡೆದುಕೊಳ್ಳಲಿದೆ. ಪ್ರಪಂಚದಾದ್ಯಂತದ ಟೆಕ್ ಕಂಪನಿಗಳನ್ನು ಆಕರ್ಷಿಸಲು ಕಟ್ಟಡಗಳು ವರ್ಲ್ಡ್ ಟ್ರೇಡ್ ಸೆಂಟರ್ (ಇಟಿಸಿ) ಗೆ ಸಮನಾಗಿರಬೇಕು" ಎಂದು ಹೇಳಿದ್ದಾರೆ.
ʻಇಂಡಸ್ಟ್ರಿಯಲ್ ಸಿಟಿʼ ಹೊಸೂರು
ಹೊಸೂರು ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿರುವ ಕೈಗಾರಿಕಾ ನಗರ, ಹೂಡಿಕೆದಾರರ ನೆಚ್ಚಿನ ವಿಳಾಸಗಳಲ್ಲಿ ಒಂದಾಗಿದೆ. ಹೊಸೂರು-ಕೃಷ್ಣಗಿರಿ-ಧರ್ಮಪುರಿ (HKD) ಪ್ರದೇಶವು ಈಗಾಗಲೇ EV ಉತ್ಪಾದಕರಾದ Ola, ಮತ್ತು Ather, ಮತ್ತು ಬೃಹತ್ ಉತ್ಪಾದನಾ ಸೌಲಭ್ಯಗಳನ್ನು ನಿರ್ಮಿಸಿದ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ಗೆ ನೆಲೆಯಾಗಿದೆ.
ವಿಷುಯಲ್ ಕ್ಯಾಪಿಟಲಿಸ್ಟ್ ಪ್ರಕಟಿಸಿದ 2021ರ ವಿಶ್ವದ ಅತ್ಯಂತ ವೇಗವಾಗಿ ಜನಸಂಖ್ಯೆಯ ಬೆಳವಣಿಗೆಯ ನಗರಗಳ ಪಟ್ಟಿಯಲ್ಲಿ ಹೊಸೂರು 13 ನೇ ಸ್ಥಾನದಲ್ಲಿದೆ. ಓಲಾ ಜೊತೆಗೆ, ಅಥರ್ ಮತ್ತು ಟಿವಿಎಸ್ ಮೋಟಾರ್ ಕಂಪನಿಗಳು ಹೊಸೂರು ಮತ್ತು ಸುತ್ತಮುತ್ತಲಿನ ತಮ್ಮ ಸ್ಥಾವರಗಳಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತವೆ.
ಸಿಂಪಲ್ ಎನರ್ಜಿ ಧರ್ಮಪುರಿ ಜಿಲ್ಲೆಯಲ್ಲಿ ಟೆಸ್ಟಿಂಗ್ ಟ್ರ್ಯಾಕ್ ಸೇರಿದಂತೆ ಬೃಹತ್ ಸ್ಥಾವರವನ್ನು ನಿರ್ಮಿಸುತ್ತಿದ್ದು, ಶ್ರೀ ವರು ಮೋಟಾರ್ಸ್ ಮತ್ತು ಇನ್ನೊಂದು ಸ್ಟಾರ್ಟ್ ಅಪ್ ಭಾರತ್ ಆಲ್ಟ್ ಫ್ಯೂಯಲ್ (ಬಿಎಎಫ್) ಈ ಪ್ರದೇಶದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲು ವಾಗ್ದಾನ ಮಾಡಿದೆ.
ಇದನ್ನೂ ಓದಿ: Yellow Watermelon: ಹಳದಿ ಕಲ್ಲಂಗಡಿ ಬೆಳೆದ ರೈತ, ಹೊಸ ತಳಿಯ ಹಣ್ಣಿನಿಂದ ದುಪ್ಪಟ್ಟು ಲಾಭ!
ನುರಿತ ಉದ್ಯೋಗಿಗಳ ಲಭ್ಯತೆ, ಅಗ್ಗದ ಭೂಮಿ ಬೆಲೆಗಳು ಮತ್ತು 3,000 ಕ್ಕೂ ಹೆಚ್ಚು ವೈವಿಧ್ಯಮಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಉಪಸ್ಥಿತಿಯು ಹೊಸೂರ್ ಅನ್ನು ಹೂಡಿಕೆದಾರರಿಗೆ ಬೇಡಿಕೆಯ ತಾಣವಾಗಿ ಪರಿವರ್ತಿಸಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ