Mekedatu Project: ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ನಿಯೋಗದಿಂದ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ!

ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನೇತೃತ್ವದ ನಿಯೋಗವು ಇಂದು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಮನವಿ ಮಾಡಿಕೊಳ್ಳಲಿದೆ.

ಮೇಕದಾಟು

ಮೇಕದಾಟು

  • Share this:
ದೆಹಲಿ(ಜೂ. 22): ಬೆಂಗಳೂರು (Bengaluru) ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ಯೋಜನೆಯ ವಿಸ್ತ್ರತ ಯೋಜನಾ ವರದಿಗೆ (Detail Project Report) ಅನುಮತಿ ನೀಡುವ ಬಗ್ಗೆ ಜೂನ್ 23ರಂದು ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಸಭೆಯಲ್ಲಿ ಚರ್ಚೆ ಆಗಲಿದೆ. ಕರ್ನಾಟಕದ ಮನವಿ ಮೇರೆಗೆ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಡಿಪಿಆರ್ ವಿಷಯವನ್ನು ಸೇರಿಸಲಾಗಿದೆ. ಇದನ್ನು ವಿರೋಧಿಸಿ ಇಂದು ತಮಿಳುನಾಡಿನ (Tamil Nadu) ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವ
(Minister of Water Resources) ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಲಿದೆ.


ತಮಿಳುನಾಡು ಆಕ್ಷೇಪ

ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ವಿಸ್ತೃತ ಯೋಜನಾ ವರದಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಹಿಂದಿನ‌ ಹಲವು ಸಭೆಗಳಲ್ಲಿ ಮೇಕೆದಾಟು ಡಿಪಿಆರ್ ವಿಚಾರದ ಚರ್ಚೆಗೆ ಅವಕಾಶ ಕೇಳಿತ್ತು‌.

ಆದರೆ ತಮಿಳುನಾಡಿನ ವಿರೋಧದಿಂದಾಗಿ ಪ್ರಾಧಿಕಾರವು ಸಭೆಯ ಅಜೆಂಡಾಕ್ಕೆ ಮೇಕೆದಾಟು ಡಿಪಿಆರ್ ವಿಷಯವನ್ನು ಸೇರಿಸಿರಲಿಲ್ಲ‌. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೆಹಲಿಗೆ ಬಂದು ಮಾಡಿದ ಮನವಿಗೆ ಸ್ಪಂದಿಸಿರುವ ಪ್ರಾಧಿಕಾರವು ನಾಳಿನ ಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೀಗ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿದೆ‌.

ದೊರೈ ಮುರುಗನ್ ನೇತೃತ್ವದ ನಿಯೋಗ

ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನೇತೃತ್ವದ ನಿಯೋಗವು ಇಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ನಾಳಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಮನವಿ ಮಾಡಿಕೊಳ್ಳಲಿದೆ.

ಇದನ್ನೂ ಓದಿ: Mekedatu Project: ಜೂ 23ಕ್ಕೆ CWMA ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ, ಸ್ಟಾಲಿನ್ ಆಕ್ರೋಶ

ಮೇಕೆದಾಟು ಡಿಪಿಆರ್ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇದೆ. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಸ ಸಭೆಯಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ ಆದುದರಿಂದ ಮೇಕೆದಾಟು ಡಿಪಿಆರ್ ವಿಷಯವನ್ನು ಸಭೆಯ ಅಜೆಂಡಾ ಕೈಬಿಡುವಂತೆ ಮನವಿ ಮಾಡಲಿದೆ.

ಕೇಂದ್ರದ ನಿರ್ಧಾರಕ್ಕೆ ಸ್ಟಾಲಿನ್ ವಿರೋಧ

ಕೇಂದ್ರ ಸರ್ಕಾರವು ಜೂನ್ 23ರಂದು ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಕರ್ನಾಟಕದ ಮನವಿ ಮೇರೆಗೆ ಮೇಕೆದಾಟು ಡಿಪಿಆರ್ ಗೆ ಅನುಮೋದನೆ ನೀಡುವ ಬಗೆಗಿನ ಅಜೆಂಡಾವನ್ನು ಸೇರಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಕರಣ ಇತ್ಯರ್ಥ ಆಗುವವರೆಗೆ  ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡಬಾರದು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ: Mekedatu: ಮೇಕೆದಾಟು ಯೋಜನೆ ಬಗ್ಗೆ ಸಚಿವ ಕಾರಜೋಳ ಚರ್ಚೆ, ಶೀಘ್ರವೇ ಸಿಗುತ್ತಾ ಕೇಂದ್ರದ ಗ್ರೀನ್‌ ಸಿಗ್ನಲ್?

ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ ಮಾಡುವ ಅಧಿಕಾರ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಾರಿಯ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್ ಹೇಳಿಕೆಯನ್ನು ಸ್ಟಾಲಿನ್ ಖಂಡಿಸಿದ್ದಾರೆ.

ಪ್ರಧಾನಿಗೆ ಪತ್ರ ಬರೆದಿದ್ದ ಸ್ಟಾಲಿನ್

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಡಿಪಿಆರ್ ಗೆ ಅನುಮೋದನೆ ನೀಡುವ ಬಗ್ಗೆ ಚರ್ಚಿಸುವ ಅಜೆಂಡಾವನ್ನು ಸೇರಿಸಬಾರದು ಎಂದು ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನ ಮಂತ್ರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಪತ್ರ ಬರೆದಿದ್ದರು.
Published by:Divya D
First published: