ಚೆನ್ನೈ: ಕೆಲವು ವರ್ಷಗಳ ಹಿಂದೆ ಕುಟುಂಬ ಸಮೇತರಾಗಿ ಬೇರೆ ಊರಿಗೆ ಹೋದರೆ ಮನೆಯ ಕೀ ಅನ್ನ ನೆರೆಮನೆಯವರ (Neighbour) ಕೈಯಲ್ಲಿ ಕೊಟ್ಟು ಹೋಗುತ್ತಿದ್ದರು. ನಗರ-ಪಟ್ಟಣಗಳಲ್ಲಿ ಈ ರೀತಿ ನಡೆಯದಿದ್ದರೂ ಹಳ್ಳಿಗಳಲ್ಲಿ (Villages) ಈಗಲೂ ಮನೆಯ ಕೀಗಳನ್ನು ಕೊಟ್ಟು ಹೋಗುತ್ತಾರೆ. ಏಕೆಂದರೆ ನೆರೆಹೊರೆಯವರ ಮೇಲೆ ಪರಸ್ಪರ ನಂಬಿಕೆ ಇರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ನೆರೆಮನೆಯವರು ಹೊರ ಹೋಗುವುದನ್ನೇ ಕಾಯುತ್ತಾ, ಮನೆಗೆ ನುಗ್ಗಿ ಕಳ್ಳತನ (Theft) ಮಾಡುತ್ತಿದ್ದ. ಶೋಕಿಗಾಗಿ ಹಣ ಸಂಪಾದಿಸಲು ಯುವಕ ಈ ಮಾರ್ಗ ಅನುಸರಿಸಿದ್ದ. ಕೊನೆಗೆ ದಂಪತಿ ಮಾಡಿದ ಪ್ಲಾನ್ನಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಕಂಬಿ ಹಿಂದೆ ಸೇರಿದ್ದಾನೆ.
ಮೂರು ಬಾರಿ ಕಳ್ಳತನ
ಚೆನ್ನೈನ ರಾಮಾಪುರದ 4ನೇ ಬೀದಿಯ ಅಣ್ಣೈ ಸತ್ಯನಗರದ ನಲ್ಲಶಿವಂ (30) ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಗೆ ಹೋಗಿದ್ದರು, ರಾತ್ರಿ ಮನೆಗೆ ಬಂದಾಗ ಮನೆಯಲ್ಲಿ 5 ಸಾವಿರ ಕಾಣೆಯಾಗಿತ್ತು. ಅದೇ ರೀತಿ ಅವರ ಮನೆಯಲ್ಲಿ ಸತತ 3 ಬಾರಿ ಸುಮಾರು 20 ಸಾವಿರದವರೆಗೆ ಹಣ ಕಳ್ಳತನವಾಗಿದೆ.
ಬಾಗಿಲು ಮುರಿಯದೇ ಕಳ್ಳತನ
ಮನೆಯಲ್ಲಿದ್ದ ಹಣ ನಾಪತ್ತೆಯಾದ ಕಾರಣ ಮೊದಲಿಗೆ ನಲ್ಲಶಿವ ಮತ್ತು ಆತನ ಪತ್ನಿ ಪರಸ್ಪರ ಅನುಮಾನಗೊಂಡಿದ್ದರು. ವಿಚಿತ್ರವೆಂದರೆ ಒಂದು ಬಾರಿಯೂ ಮನೆಯ ಬಾಗಿಲಿನ ಬೀಗ ಮುರಿದಿರಲಿಲ್ಲ. ಆದರೆ ಮನೆಯಲ್ಲಿದ್ದ ಹಣ ಮಾತ್ರ ಕಾಣೆಯಾಗುತ್ತಿತ್ತು. ಆದರೆ ನಿರಂತರವಾಗಿ ಹಣ ನಾಪತ್ತೆಯಾಗುತ್ತಿರುವುದರಿಂದ ಹೊರಗಿನಿಂದ ಬಂದ ನಿಗೂಢ ವ್ಯಕ್ತಿಯೊಬ್ಬ ಕಳ್ಳತನ ಮಾಡುತ್ತಿರಬಹುದು ಎಂಬ ಅನುಮಾನ ಮೂಡಿದೆ. ನಲ್ಲ ಶಿವಂ ಡಕಾಯಿತನನ್ನು ಹಿಡಿಯಬೇಕು ಎಂದು ಯೋಚಿಸಿ ಪತ್ನಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ದರೋಡೆಕೋರನನ್ನು ಹಿಡಿಯಲು ಯೋಜನೆ ರೂಪಿಸಿದ್ದರು.
ಪ್ಲಾನ್ ಮಾಡಿ ಕಳ್ಳನನ್ನು ಹಿಡಿದ ದಂಪತಿ
ದಂಪತಿ ಪ್ಲಾನ್ನಂತೆ ಒಂದು ದಿನ ನಲ್ಲಶಿವಂ ಮನೆಯೊಳಗೆ ಬಚ್ಚಿಟ್ಟುಕೊಂಡು ಪತ್ನಿಗೆ ಮನೆ ಬಾಗಿಲು ಹಾಕಿಕೊಂಡು ಹೊರಗೆ ಹೋಗುವಂತೆ ಹೇಳಿದ್ದಾನೆ. ಅದರಂತೆ ಎಂದಿನಂತೆ ಆತನ ಪತ್ನಿ ಏನೂ ತಿಳಿಯದವರಂತೆ ಮನೆ ಬಾಗಿಲು ಹಾಕಿಕೊಂಡು ಹೊರಗೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದ ನಿಗೂಢ ವ್ಯಕ್ತಿಯೊಬ್ಬ ಬೀಗ ಮುರಿಯದೇ ಬಾಗಿಲು ತೆರೆದು ಮನೆಯೊಳಗೆ ನುಗ್ಗಿದ್ದಾನೆ. ರಾಡ್ ಉಪಯೋಗಿಸಿ ಬಾಗಿಲನ್ನು ತೆಗೆದು ಬರುತ್ತಿದ್ದ ಎಂಬುದು ಬಹಿರಂಗಗೊಂಡಿದೆ.
ಕಳ್ಳ ಒಳಗೆ ಬರುತ್ತಿದ್ದಂತೆ ಮನೆಯೊಳಗೆ ಅಡಗಿ ಕುಳಿತಿದ್ದ ನಲ್ಲಶಿವಂಂ ಕಳ್ಳ ಬರುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಮನೆಯೊಳಗೆ ಯಾರೋ ಇರುವುದನ್ನು ಕಂಡ ದರೋಡೆಕೋರ ಪರಾರಿಯಾಗಲು ಯತ್ನಿಸಿದ್ದಾನೆ. ಕಳ್ಳ ತಪ್ಪಿಸಿಕೊಳ್ಳುತ್ತಾನೆ ಎಂಬ ಉನ್ಮಾದದಲ್ಲಿ ನಲ್ಲ ಶಿವಂ ಓಡಿ ಬಂದು ಕಳ್ಳನನ್ನು ಹಿಡಿದು ಥಳಿಸಿದ ಕೂಗಿಕೊಂಡಿದ್ದಾನೆ. ಶಬ್ಧ ಕೇಳಿದ ಅಕ್ಕಪಕ್ಕದವರು ಅಲ್ಲಿ ಜಮಾಯಿಸಿ ಬಂದ ಕಳ್ಳನನ್ನು ಥಳಿಸಿದ್ದಾರೆ.
ಇದನ್ನೂ ಓದಿ: Crime News: ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಹೊಡೆದು ಕೊಂದ ಬಾಲಕನ ಬಂಧನ!
ಕಳ್ಳನನ್ನು ನೋಡಿ ಎಲ್ಲರಿಗೂ ಶಾಕ್
ಸಿಕ್ಕಿಬಿದ್ದ ಕಳ್ಳನನ್ನು ನೋಡಿ ಅಲ್ಲಿದ್ದವರು ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ. ದರೋಡೆಯಲ್ಲಿ ಭಾಗಿಯಾಗಿರುವ ವ್ಯಕ್ತಿ ಪಕ್ಕ ಮನೆಯಲ್ಲಿ ವಾಸಿಸುತ್ತಿದ್ದ ಮಣಿಕಂದನ್ ಎಂದು ತಿಳಿದುಬಂದಿದೆ. ನಂತರ ಆ ವ್ಯಕ್ತಿಯನ್ನು ರಾಮಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿಬಿದ್ದ ಕಳ್ಳ ಶೋಕಿಗಾಗಿ ಖರ್ಚು ಮಾಡಲು ದರೋಡೆ ಮಾಡುತ್ತಿದ್ದ ಎಂದು ರಾಮಪುರಂನ ಇನ್ಸ್ಪೆಕ್ಟರ್ ಗೋವಿಂದರಾಜ್ ತಿಳಿಸಿದ್ದಾರೆ
ನಲ್ಲಶಿವಂ ಕುಟುಂಬ ಮನೆಯಿಂದ ಬೀಗ ಹಾಕಿ ಹೊರಗೆ ಹೋದಾಗ ಮಣಿಕಂದನ್ ಬೀಗವನ್ನು ಮುರಿಯದೆ ರಾಡ್ ಬಳಸಿ ಬಾಗಿಲು ತೆರೆಯುತ್ತಿದ್ದ, ಮೊದಲ ಬಾರಿ ಕಳ್ಳತನ ಮಾಡಲು ಯಶಸ್ವಿಯಾಗಿದ್ದ ಅತನ ಮೂರು ಬಾರಿ ಕಳ್ಳತನ ಮಾಡಿದ್ದ. ಕದ್ದ ಹಣದಲ್ಲಿ ಹೊಸ ಸೆಲ್ ಫೋನ್ ಖರೀದಿಸಿದ್ದ. ಆರೋಪಿ ಮಣಿಕಂದನ್‌ನಿಂದ ರೂ.5000 ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ