ಹರ್ಬಲ್ ಮೈಸೂರ್ ಪಾಕ್​ನಿಂದ ಕೊರೋನಾ ಗುಣವಾಗುತ್ತೆ ಎಂದ ಸ್ವೀಟ್​ ಅಂಗಡಿ ಬಾಗಿಲಿಗೆ ಬೀಗ!

Coronavirus Medicine: ತಮ್ಮ ಅಂಗಡಿಯಲ್ಲಿ ಸಿಗುವ ಹರ್ಬಲ್ ಮೈಸೂರ್ ಪಾಕ್​ ತಿಂದರೆ ಒಂದೇ ದಿನದಲ್ಲಿ ಕೊರೋನಾ ರೋಗ ಗುಣವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮಿಳುನಾಡಿನ ಕೊಯಮತ್ತೂರಿನ ಸ್ವೀಟ್​ ಸ್ಟಾಲ್​ ಅನ್ನು ಸೀಲ್ ಮಾಡಲಾಗಿದೆ.

Sushma Chakre | news18-kannada
Updated:July 9, 2020, 12:18 PM IST
ಹರ್ಬಲ್ ಮೈಸೂರ್ ಪಾಕ್​ನಿಂದ ಕೊರೋನಾ ಗುಣವಾಗುತ್ತೆ ಎಂದ ಸ್ವೀಟ್​ ಅಂಗಡಿ ಬಾಗಿಲಿಗೆ ಬೀಗ!
ಸಾಂದರ್ಭಿಕ ಚಿತ್ರ
  • Share this:
ಚೆನ್ನೈ (ಜು. 9): ಕೊರೋನಾ ವಿಶ್ವದೆಲ್ಲೆಡೆ ಹರಡುತ್ತಿದ್ದಂತೆ ಹಲವಾರು ಜನರು ಕೊರೋನಾಗೆ ನಾನಾ ರೀತಿಯ ಔಷಧಗಳ ಸಲಹೆ ನೀಡುತ್ತಿದ್ದಾರೆ. ಮನೆಮದ್ದುಗಳನ್ನು ಬಳಸುವುದರಿಂದ ಕೊರೋನಾ ಬಾರದಂತೆ ತಡೆಗಟ್ಟಹುದು ಎಂದು ಕೂಡ ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ. ಆದರೆ, ತಮಿಳುನಾಡಿನ ಕೊಯಮತ್ತೂರಿನ ಸ್ವೀಟ್​ ಸ್ಟಾಲ್​ ಒಂದರ ಮಾಲೀಕ ತಮ್ಮಲ್ಲಿ ಸಿಗುವ ಹರ್ಬಲ್ ಮೈಸೂರ್ ಪಾಕ್ ತಿಂದರೆ ಕೊರೋನಾ ಗುಣವಾಗುತ್ತದೆ ಎಂದು ಅಂಗಡಿಯ ಎದುರು ಬೋರ್ಡ್​ ಹಾಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆ ಅಂಗಡಿಯನ್ನು ಸೀಲ್ ಮಾಡಲಾಗಿದೆ.

ಕೊಯಮತ್ತೂರಿನ 45 ವರ್ಷದ ಶ್ರೀರಾಮ್ ಎಂಬುವವರು 8 ಸ್ವೀಟ್​ ಸ್ಟಾಲ್​ಗಳನ್ನು ನಡೆಸುತ್ತಿದ್ದಾರೆ. ನೆಲ್ಲೈ ಲಾಲಾ ಸ್ವೀಟ್ಸ್​ ಎಂಬ ಹೆಸರಿನಲ್ಲಿರುವ ಇವರ ಸ್ವೀಟ್​ ಸ್ಟಾಲ್​ನಲ್ಲಿ ದೊರೆಯುವ ಹರ್ಬಲ್ ಮೈಸೂರ್ ಪಾಕ್​ಗಳನ್ನು ತಿಂದರೆ ಕೊರೋನಾ ವಾಸಿಯಾಗುತ್ತದೆ ಎಂದು ಅವರು ಜಾಹೀರಾತುಗಳನ್ನು ನೀಡಿದ್ದರು. ತಮಿಳುನಾಡಿನಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದ ಅವರ ಅಂಗಡಿಯ ಮೈಸೂರ್ ಪಾಕ್​ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ, ಅಂಗಡಿಯ ಮೈಸೂರ್ ಪಾಕ್​ಗೆ ಭಾರೀ ಬೇಡಿಕೆ ಬಂದಿತ್ತು.

ಇದನ್ನೂ ಓದಿ: Kodagu Rain: ಭಾರೀ ಮಳೆಯಿಂದ ತುಂಬಿ ಹರಿಯುತ್ತಿರುವ ಕಾವೇರಿ; ಕೊಡಗಿನಲ್ಲಿ ರೆಡ್ ಅಲರ್ಟ್​ ಘೋಷಣೆ

ತಮ್ಮ ಅಂಗಡಿಯಲ್ಲಿ ಸಿಗುವ ಮೈಸೂರ್ ಪಾಕ್ ತಿಂದರೆ ಒಂದೇ ದಿನದಲ್ಲಿ ಕೊರೋನಾ ವಾಸಿಯಾಗುತ್ತದೆ ಎಂದು ಅವರು ತಮ್ಮ ಅಂಗಡಿಯ ಎದುರು ಜಾಹೀರಾತು ಹಾಕಿದ್ದರು. ಹರ್ಬಲ್ ವಸ್ತುಗಳಿಂದ ಮಾಡಿರುವ ಮೈಸೂರ್ ಪಾಕ್ ಕೊರೋನಾಗೆ ರಾಮಬಾಣ ಎಂದು ಅವರು ಪ್ರಚಾರ ಮಾಡಿದ್ದರು. ತಮ್ಮ ಅಂಗಡಿಯ ಮೈಸೂರ್ ಪಾಕ್ ತಿಂದವರಿಗೆ ಕೊರೋನಾ ಗುಣವಾಗಿದೆ ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೆ, ಮನೆಯಲ್ಲೇ ಕುಳಿತು ಕೊರೋನಾ ವಾಸಿಯಾಗಬೇಕೆಂದರೆ ನಮ್ಮ ಅಂಗಡಿಯ ಮೈಸೂರ್ ಪಾಕ್ ಆರ್ಡರ್ ಮಾಡಿ, ಸ್ವೀಟ್ ಅನ್ನು ಹೋಂ ಡೆಲಿವರಿ ನೀಡುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು.

ಅಲ್ಲದೆ, ಈ ಮೈಸೂರ್ ಪಾಕ್​ನಿಂದ ಕೊರೋನಾ ವಾಸಿಯಾಗುವುದು ಖಚಿತ. ಹೀಗಾಗಿ, ಈ ಮೈಸೂರ್ ಪಾಕ್​ನ ಪೇಟೆಂಟ್ ಅನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಮಾತನಾಡುತ್ತೇವೆ ಎಂದು ಕೂಡ ಹೇಳಿಕೊಂಡಿದ್ದರು. ಯಾವುದೇ ಆರೋಗ್ಯಾಧಿಕಾರಿಗಳ ಅನುಮತಿಯಿಲ್ಲದೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಕ್ಕೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಅಲ್ಲದೆ, ಈ ಸ್ವೀಟ್​ ಸಿದ್ಧಗೊಳ್ಳುತ್ತಿದ್ದ ಸ್ಥಳ, ಆ ಸ್ವೀಟ್​ಗೆ ಬಳಸುತ್ತಿದ್ದ ವಸ್ತುಗಳನ್ನು ಸೀಜ್ ಮಾಡಲಾಗಿದೆ.
Published by: Sushma Chakre
First published: July 9, 2020, 12:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading