ಚೆನ್ನೈ (ಜೂನ್ 16); ಮಾರಣಾಂತಿಕ ಕೊರೋನಾ ಎರಡನೇ ಅಲೆಗೆ ಎಲ್ಲಾ ರಾಜ್ಯಗಳಂತೆ ತಮಿಳುನಾಡು ಸಹ ಸಾಕಷ್ಟು ಸಂಕಷ್ಟ ಎದುರಿಸಿತ್ತು. ಲಾಕ್ಡೌನ್ನಿಂದ ರಾಜ್ಯದ ಆರ್ಥಿಕತೆ ಕುಸಿದಿದೆ ಎಂದು ಹೇಳಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೊರೋನಾ ವಿರುದ್ಧ ಹೋರಾಡಲು ಜನ ಸಾಮಾನ್ಯರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದ್ದರು. ಸ್ಟಾಲಿನ್ ಮನವಿಯ ಮೇರೆಗೆ ಪ್ರಭಾವಿ ನಟ-ನಟಿಯರು ಸೇರಿದಂತೆ ಅನೇಕರು ಲಕ್ಷಾಂತರ ರೂ ದೇಣಿಗೆ ನೀಡಿದ್ದರು. ಈ ವೇಳೆ ತಮಿಳುನಾಡಿನಲ್ಲಿ ಕೋವಿಡ್ ಪರಿಹಾರಕ್ಕಾಗಿ 23 ವರ್ಷದ ಯುವತಿ ತನ್ನ ಚಿನ್ನದ ಸರವನ್ನು ದಾನ ಮಾಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಚಿನ್ನದ ಸರ ದಾನ ಮಾಡಿದ್ದ ಯುವತಿಗೆ ಸರ್ಕಾರ ಉದ್ಯೋಗ ನೀಡುವುದಾಗಿ ಸ್ಟಾಲಿನ್ ಭರವಸೆ ನೀಡಿದ್ದರು. ಇಂದು ಸಿಎಂ ತಾವು ಹೇಳಿದಂತೆ ಆಕೆಗೆ ಉದ್ಯೋಗ ನೀಡಿ ತಾವು ಹೇಳಿದ್ದ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಪೊತ್ತನೇರಿ ಗ್ರಾಮದ ಎಂಜಿನಿಯರಿಂಗ್ ಪದವೀಧರರಾದ ಆರ್.ಸೌಮ್ಯಾ ಅವರು ಸೇಲಂ ಬಳಿಯ ಮೆಟ್ಟೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಂ.ಕೆ.ಸ್ಟಾಲಿನ್ ಅವರಿಗೆ ಚಿನ್ನದ ಸರವನ್ನು ದೇಣಿಗೆ ನೀಡುವ ಜೊತೆಗೆ ಉದ್ಯೋಗದ ಅರ್ಜಿಯನ್ನು ನೀಡಿದ್ದರು.
ಕಳೆದ ವರ್ಷ ನ್ಯುಮೋನಿಯಾದಿಂದಾಗಿ ತನ್ನ ತಾಯಿ ಸಾವನ್ನಪ್ಪಿದ್ದಾರೆ. ತಮ್ಮ ತಂದೆಗೆ ಬರುವ 7,000 ರೂಪಾಯಿ ಪಿಂಚಣಿ ಹಣದಿಂದ ಕುಟುಂಬವನ್ನು ಪೂರೈಸಲು ಹೆಣಗಾಡುತ್ತಿದ್ದೇವೆ. ಮದುವೆಯಾಗಿರುವ ಇಬ್ಬರು ಹಿರಿಯ ಸಹೋದರಿಯರು ಆರ್ಥಿಕವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ, ನಾನು ಉದ್ಯೋಗ ಹುಡುಕುತ್ತಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಸೌಮ್ಯಾ ಅವರಿಗೆ ಕೆಲಸ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದರು. ಈಗ ಆಕೆಗೆ ಉದ್ಯೋಗ ನೀಡಿ, ಚಿನ್ನದ ಮನಸ್ಸಿನ ಹುಡುಗಿ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೆದಿದ್ದಾರೆ. ಸೌಮ್ಯಾ ಅವರನ್ನು ದೂರವಾಣಿ ಮೂಲಕ ಸ್ಟಾಲಿನ್ ಅಭಿನಂದಿಸಿದ್ದಾರೆ.
ಸಚಿವ ವಿ ಸೆಂಥಿಲ್ ಬಾಲಾಜಿ ಮೆಟ್ಟೂರಿನ ಸೌಮ್ಯಾ ಅವರ ಮನೆಗೆ ಭೇಟಿ ನೀಡಿ ಜೆಎಸ್‌ಡಬ್ಲ್ಯು ಸ್ಟೀಲ್ಸ್ ಲಿಮಿಟೆಡ್‌ನಿಂದ (JSW Steels Ltd) ನೇಮಕಾತಿಯ ಆದೇಶ ಪತ್ರವನ್ನು ಹಸ್ತಾಂತರಿಸಿದ್ದಾರೆ. ಆಕೆಗೆ ಮಾಸಿಕ ಒಟ್ಟು ವೇತನವಾಗಿ 17,500 ರೂಪಾಯಿ ನೀಡಲಾಗುತ್ತದೆ ಎನ್ನಲಾಗಿದೆ.
ತನಗೆ ಕೆಲಸ ಸಿಕ್ಕಿರುವ ಬಗ್ಗೆ ಸಂತೋಷ ಹಂಚಿಕೊಂಡಿರುವ ಯುವತಿ, "ಮುಖ್ಯಮಂತ್ರಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅರ್ಜಿಯನ್ನು ಪ್ರಸ್ತಾಪಿಸಿದಾಗ ಮತ್ತು ಉದ್ಯೋಗದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾಗ ನಾನು ಸಾಕಷ್ಟು ಆತಂಕದಲ್ಲಿದ್ದೆ. ಅವರ ಕೆಲಸದ ಒತ್ತಡದ ನಡುವೆಯೂ, ಅವರು ನನ್ನ ಅರ್ಜಿಯನ್ನು ನೋಡಲು ಸಮಯ ನೀಡಿರುವುದನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ. ನಾನು ನನ್ನ ಕೆಲಸವನ್ನು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಮತ್ತು ಮುಖ್ಯಮಂತ್ರಿಗಳಿಗೆ ಎಂದಿಗೂ ಕೃತಜ್ಞಳಾಗಿರುತ್ತೇನೆ" ಎಂದು ಸೌಮ್ಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ