• Home
  • »
  • News
  • »
  • national-international
  • »
  • PM Modi: ಮೋದಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕವನ್ನು ಉಡುಗೊರೆ ನೀಡಿದ ತಮಿಳುನಾಡು ಸಿಎಂ!

PM Modi: ಮೋದಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕವನ್ನು ಉಡುಗೊರೆ ನೀಡಿದ ತಮಿಳುನಾಡು ಸಿಎಂ!

ಪ್ರಧಾನಿ ಮೋದಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕವನ್ನು ಉಡುಗೊರೆ ನೀಡಿದ ಸ್ಟಾಲಿನ್

ಪ್ರಧಾನಿ ಮೋದಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕವನ್ನು ಉಡುಗೊರೆ ನೀಡಿದ ಸ್ಟಾಲಿನ್

ಲೈಕಾ ಪ್ರೊಡಕ್ಷನ್ಸ್​ ಮತ್ತು ಮದ್ರಾಸ್​ ಟಾಕೀಸ್​ ಮೂಲಕ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ತಯಾರಾಗಿದೆ. ಈ ಚಿತ್ರ ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಪ್ಯಾನ್​ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಿತ್ತು.

  • Share this:

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್(Tamil Nadu CM MK Stalin) ಅವರು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಸ್ವಾಗತಿಸಿ ತಮಿಳುನಾಡಿನಾದ್ಯಂತ ಮನೆಮಾತಾಗಿರುವ ಪೊನ್ನಿಯಿನ್ ಸೆಲ್ವನ್(Ponniyin Selvan) ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.


ಮೋದಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕ ಉಡುಗೊರೆ


ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ್ ರೂರಲ್ ಇನ್‌ಸ್ಟಿಟ್ಯೂಟ್ (ಜಿಆರ್‌ಐ) 36ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ತಮಿಳುನಾಡಿಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಧಾನಿಗೆ ಶಾಲು ಹೊದಿಸಿ, ತಮಿಳು ಕಾದಂಬರಿ "ಪೊನ್ನಿಯಿನ್ ಸೆಲ್ವನ್" ನ ಇಂಗ್ಲಿಷ್ ಅನುವಾದವನ್ನು ಉಡುಗೊರೆಯಾಗಿ ನೀಡಿದರು.


ಪೊನ್ನಿಯಿನ್ ಸೆಲ್ವನ್ (ಪಿಎಸ್) ಲೇಖಕ ಕಲ್ಕಿ ಕೃಷ್ಣಮೂರ್ತಿ ಅವರ ಅದ್ಭುತ ಕೃತಿಯಾಗಿದ್ದು, ಇದು ತಮಿಳುನಾಡಿನಲ್ಲಿ ತಲೆಮಾರುಗಳ ಓದುಗರನ್ನು ಹಿಡಿದಿಟ್ಟುಕೊಂಡಿದೆ. ಕಲ್ಕಿ ಕೃಷ್ಣಮೂರ್ತಿ ಅವರ ‘ಪೊನ್ನಿಯಿನ್ ಸೆಲ್ವನ್’ ಐತಿಹಾಸಿಕ ಪುಸ್ತಕ ಈಗಾಗ್ಲೇ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ‘ಪೊನ್ನಿಯಿನ್ ಸೆಲ್ವನ್ 1 ಚಿತ್ರವಾಗಿ ಮೂಡಿಬಂದಿದ್ದು ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಮತ್ತು ಒಟಿಟಿಯಲ್ಲಿ ಐದು ವಿಭಿನ್ನ ಭಾಷೆಗಳಲ್ಲಿ ಸದ್ದು ಮಾಡಿದೆ. ಹಾಗಾದರೆ ಸಿನಿಮಾ ಮತ್ತು ಪುಸ್ತಕದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.


ʼಪೊನ್ನಿಯಿನ್ ಸೆಲ್ವನ್ 1' ಸಿನಿಮಾ


ʼಪೊನ್ನಿಯಿನ್ ಸೆಲ್ವನ್ 1' ಸಿನಿಮಾದಲ್ಲಿ ನಾಟಕೀಯತೆ, ಆಕ್ಷನ್, ಮೈನವಿರೇಳಿಸುವ ದೃಶ್ಯಗಳು, ಅದ್ಭುತ ನಟನೆ ಜೊತೆಗೆ ಕುತೂಹಲವೂ ಇದೆ. ಆದಿತ್ಯ ಕರಿಕಾಳನ್ ಪಾತ್ರದಲ್ಲಿ ವಿಕ್ರಂ, ವಂತಿಯತೇವನ್‌ ಪಾತ್ರದಲ್ಲಿ ನಟಿಸಿರುವ ಕಾರ್ತಿ, ಜಯಂ ರವಿ, ನಟಿ ಐಶ್ವರ್ಯಾ ರೈ ನಂದಿನಿ ಪಾತ್ರದಲ್ಲಿ ರಾಣಿಯಾಗಿ, ಕುಂದವೈ ಪಾತ್ರದಲ್ಲಿ ತ್ರಿಶಾ ಅದ್ಭುತವಾಗಿ ನಟಿಸಿದ್ದಾರೆ.


‘ಪೊನ್ನಿಯಿನ್ ಸೆಲ್ವನ್ ’ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆ ಮತ್ತು 10 ನೇ ಶತಮಾನದ ಪ್ರಕ್ಷುಬ್ಧ ಚೋಳ ಸಾಮ್ರಾಜ್ಯದ ಸಮಯದಲ್ಲಿ ಅಧಿಕಾರದ ಹೋರಾಟವನ್ನು ವಿವರಿಸಿದೆ. ಪೊನ್ನಿಯಿನ್ ಸೆಲ್ವನ್ ಎಂದರೆ ಪೊನ್ನಿಯ (ಕಾವೇರಿ ನದಿ) ಮಗ ಎಂದರ್ಥ. ಶ್ರೀಲಂಕಾದಲ್ಲಿ ಯುದ್ಧದಲ್ಲಿದ್ದಾಗ ಪ್ರಸಿದ್ಧ ರಾಜರಾಜ ಚೋಜ I ಆಗುವ ನಾಮಸೂಚಕ ಪೊನ್ನಿಯಿನ್ ಸೆಲ್ವನ್‌ನೊಂದಿಗೆ ಕಥೆಯು ತೆರೆದುಕೊಳ್ಳುತ್ತದೆ. ಏತನ್ಮಧ್ಯೆ, ಅನಾರೋಗ್ಯದಿಂದ ಬಳಲುತ್ತಿರುವ ಸುಂದರ ಚೋಜರ್ ಅವರ ನಿಧನದ ನೀರೀಕ್ಷೆಯಲ್ಲಿರುವ ಆಸ್ಥಾನಿಕರು ಸಿಂಹಾಸನದ ಮೇಲೆ ಹಕ್ಕು ಸಾಧಿಸಲು ತಯಾರಿ ನಡೆಸುತ್ತಿರುತ್ತಾರೆ. ಇದು ರಾಜಮನೆತನದಲ್ಲಿ ಕೋಲಾಹಲಕ್ಕೆ ಕಾರಣವಾಗುತ್ತದೆ. ಹೀಗೆ ಅದ್ಭುತವಾಗಿ ಸಾಗುವ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.


ಲೈಕಾ ಪ್ರೊಡಕ್ಷನ್ಸ್​ ಮತ್ತು ಮದ್ರಾಸ್​ ಟಾಕೀಸ್​ ಮೂಲಕ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ತಯಾರಾಗಿದೆ. ಈ ಚಿತ್ರ ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಪ್ಯಾನ್​ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಿತ್ತು. ಸದ್ಯ ಒಟಿಟಿಯಲ್ಲಿ ಸ್ಟ್ರೀಮ್‌ ಆಗಿದೆ.


ಪೊನ್ನಿಯಿನ್ ಸೆಲ್ವನ್ ಪುಸ್ತಕ


ಈ 20ನೇ ಶತಮಾನದ 2400 ಪುಟದ ತಮಿಳು ಐತಿಹಾಸಿಕ ಕಾದಂಬರಿಯನ್ನು ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದಾರೆ. ಈ ಕಾದಂಬರಿ 1950-54 ರಿಂದ ತಮಿಳು ನಿಯತಕಾಲಿಕೆ ‘ಕಲ್ಕಿ’ಯಲ್ಲಿ ವಾರಕ್ಕೊಮ್ಮೆ ಧಾರಾವಾಹಿಯಾಗಿ ಪ್ರಕಟವಾಗುತಿತ್ತು. ಇದನ್ನು ನಂತರ 1955 ರಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಯಿತು. ಕಾದಂಬರಿಯ ನಿರಂತರ ಜನಪ್ರಿಯತೆಯು ಚೋಳ ಆಳ್ವಿಕೆಯ ಸುತ್ತ ಹೆಣೆಯಲಾದ ನಿರೂಪಣೆಯ ಮೂಲಕ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯೊಂದಿಗಿ ಸಂಬಂಧಿಸಿದೆ. ಈಗಲೂ ಸಹ ಅತಿಹೆಚ್ಚಾಗಿ ಮಾರಾಟವಾಗುತ್ತಿರುವ ಪುಸ್ತಕ ಎಂಬ ಖ್ಯಾತಿಗೂ ಸಹ ಪೊನ್ನಿಯಿನ್ ಸೆಲ್ವನ್ ಪಾತ್ರವಾಗಿದೆ.


ಇಂಗ್ಲಿಷ್‌ಗೆ ಅನುವಾದ


ಇನ್ನೂ ಮೋದಿಗೆ ಉಡುಗೊರೆಯಾಗಿ ನೀಡಿದ ಕಾದಂಬರಿಯನ್ನು ಇಂಗ್ಲಿಷ್‌ಗೆ ಸಿವಿ ಕಾರ್ತಿಕ್ ನಾರಾಯಣನ್, ಇಂದ್ರ ನೀಲಮೇಗಂ, ವರಲೊಟ್ಟಿ ರೆಂಗಸಾಮಿ, ಸುಮೀತಾ ಮಣಿಕಂದನ್ ಮತ್ತು ಪವಿತ್ರಾ ಶ್ರೀನಿವಾಸನ್ ಎಂಬುವವರುಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

Published by:Latha CG
First published: