Mekedatu Project: ಮೇಕೆದಾಟು ಯೋಜನೆ ತಡೆಯುವಂತೆ ಇಂದು ರಾಷ್ಟ್ರಪತಿಗೆ ಮನವಿ ಮಾಡಲಿರುವ ಎಂ.ಕೆ. ಸ್ಟಾಲಿನ್

ಸ್ಟಾಲಿನ್ ತಮಿಳುನಾಡು ಸಿಎಂ ಆದ ಬಳಿಕ ಮೊದಲ ಸಲ ರಾಷ್ಟ್ರಪತಿ ಭೇಟಿ ಆಗುತ್ತಿದ್ದು ಮೊದಲ ಭೇಟಿಯಲ್ಲೇ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ.‌

ಎಂಕೆ ಸ್ಟಾಲಿನ್

ಎಂಕೆ ಸ್ಟಾಲಿನ್

  • Share this:
ನವದೆಹಲಿ(ಜು. 19): ಬೆಂಗಳೂರು ಮಹಾ ನಗರಕ್ಕೆ ನೀರುಣಿಸುವ ಸಲುವಾಗಿ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಉದ್ದೇಶಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಆರಂಭದಿಂದಲೂ ವಿರೋಧ ಮಾಡುತ್ತಿರುವ ತಮಿಳುನಾಡು ಸರ್ಕಾರ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ 'ಮೇಕೆದಾಟು ಯೋಜನೆ ತಡೆಯುವಂತೆ' ಮನವಿ ಮಾಡಲಿದೆ.  ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.‌ ಸ್ಟಾಲಿನ್ ಇಂದು ಮಧ್ಯಾಹ್ನ 12.15ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ನಿಲ್ಲಿಸಲು ಸೂಚನೆ ನೀಡುವಂತೆ ಮನವಿ ಮಾಡಲಿದ್ದಾರೆ.

ಎಂ.ಕೆ.‌ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಆಗುತ್ತಿದ್ದಾರೆ. ಮೊದಲ ಭೇಟಿಯಲ್ಲೇ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.‌ ಇದೇ ರೀತಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜೂನ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗಲೂ ಮೊದಲ ಭೇಟಿ ವೇಳೆಯಲ್ಲೇ ಮೇಕೆದಾಟು ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಇತಿಹಾಸದಲ್ಲೇ ವಿಶೇಷ ರೀತಿಯ ಎಕ್ಸಾಮ್​ ನಡೆಸಲು ಮುಂದಾದ ಸರ್ಕಾರ

ಇದಾದ ಮೇಲೆ ಜುಲೈ 7ರಂದ ತಮಿಳುನಾಡಿನ ಜಲಸಂಪನ್ಮೂಲ ಸಚಿವ ಸಚಿವ ದೊರೈ ಮುರುಗನ್ ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು.

ಬಳಿಕ ಜುಲೈ 12ರಂದು ಸರ್ವ ಪಕ್ಷಗಳ ಸಭೆ ನಡೆಸಲಾಗಿತ್ತು. ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿ ಒಟ್ಟು 13 ಪಕ್ಷಗಳು ಭಾಗವಹಿಸಿದ್ದ ಸಭೆಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿರುವ ನಿರ್ಧಾರಕ್ಕೆ ವಿರೋಧ ಮಾಡಬೇಕು. ಸರ್ವ ಪಕ್ಷಗಳ ನಿಯೋಗ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಅಣೆಕಟ್ಟು ನಿರ್ಮಾಣಕ್ಕೆ ‌ಒಪ್ಪಿಗೆ ನೀಡದಂತೆ ಒತ್ತಡ ಹೇರಬೇಕು ಹಾಗೂ ಯೋಜನೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಬೇಕು ಎಂಬ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.

ಈ ನಿರ್ಣಯಗಳ ಪ್ರಕಾರ ಜುಲೈ 16ರಂದು ತಮಿಳುನಾಡಿನ ಸರ್ವಪಕ್ಷ ನಿಯೋಗವು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿತ್ತು.

ಇದನ್ನೂ ಓದಿ:Bigg Boss 8 Elimination: ಬಿಗ್ ಬಾಸ್​ ಮನೆಯಿಂದ ಹೊರ ಹೋಗುತ್ತಾ ಚಕ್ರವರ್ತಿಗೆ ಶಾಕ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್

ಈಗ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.‌ ಸ್ಟಾಲಿನ್ ಅವರೇ ಖುದ್ದಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆ ನಿಲ್ಲಿಸಲು ಒಕ್ಕೂಟ ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ. ಈ ಮೂಲಕ ಒಕ್ಕೂಟ ಸರ್ಕಾರದ ಮೇಲೆ ಮೇಕೆದಾಟು ಯೋಜನೆಗೆ ಸಹಕಾರ ನೀಡಬೇಡಿ ಎಂಬ ಒತ್ತಡವನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.

ಮೇಕೆದಾಟು ಯೋಜನೆ ವಿವಾದ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆ ಆರಂಭಿಸುವುದು ಕಷ್ಟ. ಆದರೂ ಕರ್ನಾಟಕ ಮತ್ತು ತಮಿಳುನಾಡು ರಾಜಕೀಯವಾಗಿ ವಿವಾದ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: