ಚೆನ್ನೈ: ಜಿಮ್‌ನಲ್ಲಿ (Gym) ವರ್ಕೌಟ್ ಮಾಡುವಾಗ ಜಿಮ್ ಟ್ರೈನರ್ (Gym Trainer) ಒಬ್ಬ ರಕ್ತ ವಾಂತಿ ಮಾಡಿಕೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. 25 ವರ್ಷದ ಆಕಾಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಜಿಮ್ ಪ್ರಿಯರಲ್ಲಿ ಆತಂಕ ಮೂಡಿಸುತ್ತಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಾಗಿ ಆಕಾಶ್ ಕಠಿಣ ತರಬೇತಿ ಪಡೆದಿದ್ದ, ಆತ ಕಳೆದ ಒಂದು ವರ್ಷದಿಂದ ಸ್ಟಿರಾಯ್ಡ್ ಚುಚ್ಚುಮದ್ದು ಪಡೆದುಕೊಳ್ಳುತ್ತಿದ್ದ ಎನ್ನಲಾಗಿದ್ದು, ಇದರಿಂದ 2 ಕಿಡ್ನಿಗಳು ವೈಫಲ್ಯಗೊಂಡು (Kidney Failure) ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಚೆನ್ನೈನ ಆವಡಿ ಎಂಬ ಸ್ಥಳದಲ್ಲಿ ವಾಸವಾಗಿದ್ದ ದಿನಗೂಲಿ ನೌಕರನ ಮಗನಾಗಿದ್ದ ಆಕಾಶ್ ಶಾಲಾ ದಿನಗಳಿಂದಲೇ ಜಿಮ್ ವರ್ಕೌಟ್ ಬಗ್ಗೆ ಹೆಚ್ಚು ಆಸಕ್ತಿಯನ್ನ ಹೊಂದಿದ್ದ ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಜಿಮ್ ಟ್ರೈನರ್ ಆಗಿಯೂ ಆಕಾಶ್ ಕಾರ್ಯ ನಿರ್ವಹಿಸುತ್ತಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಗೆ ತಯಾರಿ
ಹಲವು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದ ಆಕಾಶ್ ರಾಜ್ಯಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಹವಣಿಸುತ್ತಿದ್ದ. ಅದಕ್ಕಾಗಿಯೇ ಜಿಮ್‌ನಲ್ಲಿ ಇತರರಿಗೆ ತರಬೇತಿ ನೀಡುವುದರ ಜೊತೆಗೆ ತಾನೂ ಕೂಡ ದೇಹವನ್ನೂ ದಂಡಿಸುತ್ತಿದ್ದರು. ವರ್ಕೌಟ್ ಜೊತೆಗೆ ದೇಹವನ್ನು ಸದೃಢಗೊಳಿಸಿಕೊಳ್ಳಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಅತಿಯಾಗಿ ಸ್ಟಿರಾಯ್ಡ್ ತೆಗೆದುಕೊಂಡಿದ್ದೇ ಸಾವಿಗೆ ಕಾರಣ
ಆಗಸ್ಟ್ 22 ರಂದು ಆಕಾಶ್ ವರ್ಕೌಟ್ ಮಾಡುವಾಗ ಕುಸಿದುಬಿದ್ದಿದ್ದಾರೆ. ಈ ವೇಳೆ ರಕ್ತ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕಾಶ್ ಬುಧವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಎರಡೂ ಕಿಡ್ನಿ ವೈಫಲ್ಯ
ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಹಠ ಇಟ್ಟುಕೊಂಡಿದ್ದ ಆಕಾಶ್ ರಕ್ತ ವಾಂತಿ ಮಾಡಿಕೊಂಡು ಸಾಯಲು ಅತಿಯಾದ ಸ್ಟಿರಾಯ್ಡ್ ತೆಗೆದುಕೊಂಡಿರುವುದೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಆಕಾಶ್ ದೇಹವನ್ನ ದಂಡಿಸುವುದರ ಜೊತೆಗೆ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದರಿಂದ ಆತನ ಎರಡೂ ಕಿಡ್ನಿಗಳು ಸಂಪೂರ್ಣವಾಗಿ ವೈಫಲ್ಯ ಆಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
" ಸ್ಟಿರಾಯ್ಡ್‌ಗಳ ಅತಿಯಾದ ಬಳಕೆಯು ಬಹು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಹೃದಯ, ಮೂತ್ರಪಿಂಡಗಳು ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಿದೆ " ಎಂದು ವೈದರು ಹೇಳಿದ್ದಾರೆ.
ಒಂದು ವರ್ಷದಿಂದ ಸ್ಟಿರಾಯ್ಡ್ ಸೇವನೆ
ರಾಜ್ಯ ಮಟ್ಟದ ಸ್ಪರ್ಧೆಗಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದಆಕಾಶ್ ಕಳೆದ ಒಂದು ವರ್ಷದಿಂದ ಸ್ಟಿರಾಯ್ಡ್ ಪಡೆದುಕೊಳ್ಳುತ್ತಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ. ಕೆಲವು ದಿನಗಳಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಆಕಾಶ್ ಇದರ ಬಗ್ಗೆ ತಮ್ಮ ಟ್ರೈನರ್ಗೆ ಹೇಳಿಕೊಂಡಿದ್ದಾರೆ.
" ನನಗೆ ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಉಸಿರಾಡಲು ಕಷ್ಟವಾಗುತ್ತಿದೆ. ನಾನು ಕನಿಷ್ಠ ಒಂದು ಗಂಟೆ ಟ್ರೆಡ್‌ಮಿಲ್ ಮಾಡುತ್ತಿದ್ದೆ, ಆದರೆ ಈ ದಿನಗಳಲ್ಲಿ ನಾನು ಹತ್ತು ನಿಮಿಷಗಳಿಗೆ ಸುಸ್ತಾಗುತ್ತಿದ್ದೇನೆ, ನನಗೆ ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನನ್ನ ಲಾಲಾರಸದಲ್ಲಿ ರಕ್ತವನ್ನು ಕಂಡು ನಾನು ನಿದ್ರೆ ಬರುತ್ತಿಲ್ಲ. ನಾನು ತಾತ್ಕಾಲಿಕವಾಗಿ ಈ ತಿಂಗಳು ತರಬೇತಿಯನ್ನು ನಿಲ್ಲಿಸುತ್ತೇನೆ " ಎಂದು ಟ್ರೈನರ್ ಬಳಿ ಹೇಳಿಕೊಂಡಿದ್ದ. ಟ್ರೈನರ್ ಕೂಡ ವ್ಯಾಯಾಮ ಮಾಡುವುದನ್ನು ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಹೋಗುವಂತೆ ಸಲಹೆ ನೀಡಿದ್ದರು ಎಂದು ಸ್ನೇಹಿತ ತಿಳಿಸಿದ್ದಾನೆ.
ಇದನ್ನೂ ಓದಿ: Shocking News: ಆಫೀಸ್‌ನಲ್ಲಿ ಕುರ್ಚಿ ವಿಚಾರಕ್ಕೆ ಫೈಟ್, ಸಹೋದ್ಯೋಗಿಯನ್ನೇ ಶೂಟ್ ಮಾಡಿದ ಕ್ರೂರಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ