ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ (BJP president) ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K. Annamalai) ಅವರಿಗೆ Z ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಮಾವೋವಾದಿಗಳು ಮತ್ತು ಉಗ್ರಗಾಮಿಗಳಿಂದ ಬೆದರಿಕೆಗಳು ಬರುತ್ತಿವೆ ಎಂದು ಗುಪ್ತಚರ ಇಲಾಖೆ (Intelligence Bureau) ವರದಿ ನೀಡಿರುವ ಹಿನ್ನಲೆ Z ಶ್ರೇಣಿಯ ಭದ್ರತೆ ನೀಡಲಾಗಿದೆ. ಅಣ್ಣಾಮಲೈಗೆ Z ಶ್ರೇಣಿ ಭದ್ರತೆ (Z scale of security) ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಒಟ್ಟು 33 ಕಮಾಂಡೋಗಳು ಅವರ ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಬಿಜೆಪಿ ನಾಯಕನಿಗೆ 'ವೈ' ಶ್ರೇಣಿ ಭದ್ರತೆಯನ್ನು ನೀಡಲಾಗಿತ್ತು.
ಅಣ್ಣಾಮಲೈಗೆ ಇರುವ ಜೀವ ಬೆದರಿಕೆ ಬಗ್ಗೆ ಪರಿಶೀಲನೆ ನಡೆಸಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು Z ಶ್ರೇಣಿ ಭದ್ರತೆ ಒದಗಿಸಲು ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು. ಇದಕ್ಕೆ ಗೃಹಸಚಿವಾಲಯ ಕೂಡ ಒಪ್ಪಿಗೆ ನೀಡಿದೆ. ಇದೀಗ ತಮಿಳುನಾಡು ಬಿಜೆಪಿ ನಾಯಕನ ರಕ್ಷಣೆಯ ಜವಾಬ್ದಾರಿಯನ್ನು ಸಿಆರ್ಪಿಎಫ್ ಕಮಾಂಡೋಸ್ಗಳ ತಂಡ ನಿರ್ವಹಿಸಲಿದೆ. ಅವರ ನಿವಾಸ, ಕಚೇರಿ ಮತ್ತು ಪ್ರವಾಸದ ಸಮಯದಲ್ಲಿ ಉಳಿದುಕೊಳ್ಳುವ ಸ್ಥಳದಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳು ಇರಲಿದ್ದಾರು. ಬೆಂಗಾವಲು ವಾಹನಗಳನ್ನು ರಾಜ್ಯ ಪೊಲೀಸ್ ಇಲಾಖೆಯೇ ಒದಗಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Annamalai: ಅಣ್ಣಾಮಲೈ ವಿರುದ್ಧ ಸಿಡಿದೆದ್ದ ನಟಿ! ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಆರೋಪಿಸಿ ಬಿಜೆಪಿಗೆ ಗುಡ್ ಬೈ
ಕೇಂದ್ರ ಗೃಹ ಇಲಾಖೆ ಕಳೆದ ವರ್ಷ ಏಪ್ರಿಲ್ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ವೈಯಕ್ತಿಕ ಭದ್ರತಾ ಅಧಿಕಾರಿಗಳೊಂದಿಗೆ ಅಣ್ಣಾಮಲೈ ಅವರ ಭದ್ರತೆಯನ್ನು X ಸ್ಕೇಲ್ನಿಂದ Y ಸ್ಕೇಲ್ಗೆ ಹೆಚ್ಚಿಸಿತ್ತು.
ಬೆದರಿಕೆಯ ವಿವರ ಲಭ್ಯವಾಗಿಲ್ಲ
ಗುಪ್ತಚರ ಸಂಸ್ಥೆಗಳಿಂದ ಅಣ್ಣಾಮಲ್ಲೈ ಅವರಿಗೆ ಇರುವ ನಿರ್ದಿಷ್ಟ ಬೆದರಿಕೆಯ ವಿವರಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ 2022ರ ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ನಂತರ, ತಮಿಳುನಾಡಿನಲ್ಲಿ ಧಾರ್ಮಿಕ ಮೂಲಭೂತವಾದದ ವಿರುದ್ಧ ಅಣ್ಣಾಮಲೈ ಸಕ್ರಿಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಕೆಲವು ತಿಂಗಳುಗಳಲ್ಲಿ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯ ಮುಖಂಡರ ಕಚೇರಿಗಳು, ವಾಸಸ್ಥಾನಗಳ ಮೇಲೆ ಸರಣಿ ದಾಳಿಗಳಿಗೆ ರಾಜ್ಯವು ಸಾಕ್ಷಿಯಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ, ಚೆನ್ನೈನ ಟಿ.ನಗರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಾದ 'ಕಮಲಾಲಯ'ದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಗಿತ್ತು.
234 ಕ್ಷೇತ್ರಗಳಲ್ಲಿ ಪಾದಯಾತ್ರೆ
ಆಡಳಿತಾರೂಢ ಡಿಎಂಕೆ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವ ಅಣ್ಣಾಮಲೈ ಏಪ್ರಿಲ್ನಲ್ಲಿ ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಪಾದಯಾತ್ರೆಯು ಸುಮಾರು ಒಂದು ವರ್ಷದವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಐಪಿಎಎಸ್ ಹುದ್ದೆಗೆ ರಾಜೀನಾಮೆ
2011ರ ಬ್ಯಾಚ್ನ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿ ಸೇರುವ ಮುನ್ನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು 2019ರಲ್ಲಿ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವಾದ ಬಳಿಕ ಅವರು ಬಿಜೆಪಿ ಪಕ್ಷ ಸೇರಿ ರಾಜಕೀಯ ಪ್ರವೇಶಿಸಿದ್ದರು.
ಮೊದಲು ತಮಿಳುನಾಡು ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆ ಬಳಿಕ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ತಮಿಳುನಾಡು ವಿಧಾನಸಭೆ ಚುನಾವಣೆಗೆ ಅವರು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದು ಸೋಲು ಕಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ಅಣ್ಣಾಮಲೈ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ