ಚೆನ್ನೈ (ಆಗಸ್ಟ್ 24); ಬಿಜೆಪಿ ಪಕ್ಷಕ್ಕೆ ತಮಿಳುನಾಡಿನಲ್ಲಿ ಭದ್ರವಾದ ನೆಲೆ ಕಲ್ಪಿಸಬೇಕು ಎಂಬುದು ಕೇಂದ್ರ ಬಿಜೆಪಿ ನಾಯಕರ ಮಹತ್ವಾಕಾಂಕ್ಷೆ. ಇದೇ ಕಾರಣಕ್ಕೆ ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಎದುರಿಸಿತ್ತು. ಪರಿಣಾಮ ಮೊದಲ ಬಾರಿ ತಮಿಳುನಾಡಿನ 234 ಕ್ಷೇತ್ರಗಳ ಪೈಕಿ 4 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ, ಚುನಾವಣಾ ಬೆನ್ನಿಗೆ ತಮಿಳುನಾಡು ಪಕ್ಷದಲ್ಲೂ ಮಹತ್ವದ ಬದಲಾವಣೆ ತರಲಾಗಿತ್ತು. ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಅಲ್ಲದೆ, ಹಲವು ಹೊಸ ಮುಖಗಳಿಗೆ ಪಕ್ಷದ ಆಡಳಿತದಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಮಹಿಳೆಯೊಂದಿಗೆ ವಾಟ್ಸಾಪ್ ಕಾಲ್ನಲ್ಲಿ ಬೆತ್ತಲಾಗಿ, ಅಶ್ಲೀಲ ಸಂಭಾಷಣೆ ನಡೆಸಿದ ವಿಡಿಯೊ ಯೂಟ್ಯೂಬ್ (Youtube) ಚಾನೆಲ್ನಲ್ಲಿ ಅಪ್ಲೋಡ್ ಆದ ಬಳಿಕ ಭಾರತೀಯ ಜನತಾ ಪಕ್ಷದ (bjp) ತಮಿಳುನಾಡು (Tamilnadu) ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಘವನ್ (KT Raghavan) ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಿಜೆಪಿಗೆ ಬಹುದೊಡ್ಡ ಹಿನ್ನಡೆ ಎಂದು ಹೇಳಲಾಗುತ್ತಿದೆ.
ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ತಮ್ಮದೇ ಪಕ್ಷದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಶ್ಲೀಲವಾಗಿ ಮಾತನಾಡಿದ್ದಾರೆ. ಈ ಸಂಭಾಷಣೆ ಯೂಟ್ಯೂಬ್ನಲ್ಲೂ ವೈರಲ್ ಆಗಿದೆ. ಬಿಜೆಪಿಯ ಸದಸ್ಯರೆ ಆಗಿರುವ ಮದನ್ ರವಿಚಂದ್ರನ್ ಈ ವಿಡಿಯೊ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪರಿಣಾಮ ಕೆ.ಟಿ. ರಾಘವನ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಬಿಜೆಪಿ ಸೇರಿದ್ದ ಮದನ್ ರವಿಚಂದ್ರನ್, 1,41,000 ಚಂದಾದಾರರೊಂದಿಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಆರೋಪದ ತನಿಖೆಯ ಭಾಗವಾಗಿ ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ತಮಿಳುನಾಡಿನ 15 ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಿಡಿಯೋ ಸಾಕ್ಷ್ಯವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಾಧ್ಯಮಗಳು ರಾಘವನ್ ಅವರನ್ನು ಮಿಸ್ಟರ್ ಕ್ಲೀನ್ ಎಂದು ಪ್ರಚಾರ ಮಾಡುತ್ತಿರುವುದರಿಂದ ಅವರ ವಿಡಿಯೊವನ್ನು ಮೊದಲು ಬಿಡುಗಡೆ ಮಾಡಲು ಆಯ್ಕೆ ಮಾಡಿಕೊಂಡೆ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: Mob Lynching| ರಾಜಸ್ಥಾನ; ಪಾಕಿಸ್ತಾನಕ್ಕೆ ಹೋಗು ಎಂದು ಮುಸ್ಲಿಂ ವ್ಯಕ್ತಿ ಮತ್ತು ಬಾಲಕನ ಮೇಲೆ ತೀವ್ರ ಹಲ್ಲೆ, 5 ಜನರ ಬಂಧನ
ರಾಘವನ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ಅವುಗಳನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ಹೇಳಿದ್ದಾರೆ. "ಧರ್ಮ ಗೆಲ್ಲುತ್ತದೆ ಎಂದು ಟ್ವೀಟ್ ಮಾಡಿರುವ ಅವರು, ತಮ್ಮ 30 ವರ್ಷಗಳ ವೃತ್ತಿಜೀವನವನ್ನು ಯಾವುದೇ ತೊಂದರೆಗಳಿಲ್ಲದೆ ನಡೆಸಿರುವುದಾಗಿ, ತಮ್ಮ ಇಮೇಜ್ ಅನ್ನು ಹಾಳುಮಾಡಲು ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ಜನರಿಗೆ ನಾನು ಯಾರೆಂದು ತಿಳಿದಿದೆ. ನನ್ನೊಂದಿಗೆ ಸಂಬಂಧ ಹೊಂದಿರುವವರಿಗೆ ನಾನು ಯಾರೆಂದು ತಿಳಿದಿದೆ" ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ವಿಡಿಯೊವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ ಬಳಿಕ ವಿಡಿಯೊ ಅಪ್ಲೋಡ್ ಮಾಡಿರುವುದಾಗಿ ಮದನ್ ರವಿಚಂದ್ರನ್ ಹೇಳಿದ್ದಾರೆ. ಅಣ್ಣಾಮಲೈ ಅವರನ್ನು ಭೇಟಿ ಮಾಡಿದ ನಂತರ ರಾಜೀನಾಮೆ ನೀಡಿದ್ದೇನೆ ಎಂದು ರಾಘವನ್ ಹೇಳಿದ್ದಾರೆ.
ಇದನ್ನೂ ಓದಿ: Drugs Case| ಡ್ರಗ್ಸ್ ಪ್ರಕರಣದ ಆರೋಪಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ; ಸಚಿವ ಅರಗ ಜ್ಞಾನೇಂದ್ರ ಕಿಡಿ
ಕಾಂಗ್ರೆಸ್ ಸಂಸದೆ ಜೋತಿಮಣಿ ಅವರು ರಾಘವನ್ ವಿರುದ್ಧ ಪೊಲೀಸರಿಗೆ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ. "ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದಕ್ಕೆ ವಿಡಿಯೋ ಸಾಕ್ಷ್ಯವಿದೆ. ಅದರ ಕುರಿತು ತನಿಖೆ ಮಾಡಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ