Tamil Nadu Governor- ನಿವೃತ್ತ ಐಪಿಎಸ್ ಅಧಿಕಾರಿ ಆರ್ ಎನ್ ರವಿ ತಮಿಳುನಾಡು ರಾಜ್ಯಪಾಲರಾಗಿ ನೇಮಕ

New Governors- ನಿವೃತ್ತ ಪೊಲೀಸ್ ಅಧಿಕಾರಿ ಆರ್ ಎನ್ ರವಿ ಅವರನ್ನ ತಮಿಳುನಾಡಿನ ರಾಜ್ಯಪಾಲರಾಗಿ ಕರೆ ತರಲಾಗಿದೆ. ನಿವೃತ್ತ ಸೇನಾಧಿಕಾರಿ ಲೆ| ಜ| ಗುರ್ಮೀತ್ ಸಿಂಗ್ ಅವರನ್ನ ಉತ್ತರಾಖಂಡ್ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

ಆರ್ ಎನ್ ರವಿ

ಆರ್ ಎನ್ ರವಿ

 • News18
 • Last Updated :
 • Share this:
  ನವದೆಹಲಿ, ಸೆ. 10: ತಮಿಳುನಾಡು ರಾಜ್ಯಕ್ಕೆ ನೂತನ ರಾಜ್ಯಪಾಲರು ನೇಮಕವಾಗಿದ್ದಾರೆ. ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಆರ್ ಎನ್ ರವಿ (Ret IPS officer RN Ravi) ಅವರನ್ನ ತಮಿಳುನಾಡು ರಾಜ್ಯಪಾಲರಾಗಿ (Tamil Nadu Governor) ವರ್ಗಾಯಿಸಲಾಗಿದೆ. ಅಸ್ಸಾಮ್ ರಾಜ್ಯಪಾಲ ಪ್ರೊ| ಜಗದೀಶ್ ಮುಖಿ (Jagadish Mukhi) ಅವರಿಗೆ ನಾಗಾಲ್ಯಾಂಡ್ ರಾಜ್ಯಪಾಲ ಸ್ಥಾನದ ಹೆಚ್ಚುವರಿ ಜವಾಬ್ದಾರಿ ಕೊಡಲಾಗಿದೆ. ಅಸ್ಸಾಮ್ ಅಥವಾ ನಾಗಾಲ್ಯಾಂಡ್​ಗೆ ಪೂರ್ಣಪ್ರಮಾಣದ ರಾಜ್ಯಪಾಲರ ನೇಮಕ ಆಗುವರೆಗೂ ಜಗದೀಶ್ ಮುಖಿ ಅವರು ಎರಡೂ ರಾಜ್ಯಗಳ ರಾಜ್ಯಪಾಲರಾಗಿ ಕರ್ತವ್ಯ ನಿಭಾಯಿಸಲಿದ್ದಾರೆ. ರಾಷ್ಟ್ರಪತಿ ಭವನದಿಂದ ನಿನ್ನೆ ತಡರಾತ್ರಿ ಈ ಸಂಬಂಧ ಪ್ರಕಟಣೆ ಬಂದಿದೆ.

  ತಮಿಳುನಾಡು ರಾಜ್ಯಪಾಲರಾಗಿದ್ದ ಬನ್ವರಿ ಲಾಲ್ ಪುರೋಹಿತ್ ಅವರು ಪಂಜಾಬ್ ರಾಜ್ಯಪಾಲ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರು. ಈಗ ಅವರನ್ನ ಪೂರ್ಣಪ್ರಮಾಣದಲ್ಲಿ ಪಂಜಾಬ್ ರಾಜ್ಯಪಾಲರಾಗಿ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಆರ್ ಎನ್ ರವಿ ಅವರನ್ನು ತಮಿಳುನಾಡು ರಾಜ್ಯಪಾಲರ ಸ್ಥಾನಕ್ಕೆ ತರಲಾಗಿದೆ. ಆರ್ ಎನ್ ರವಿ ಅವರು ಕಳೆದ ಕೆಲ ವರ್ಷಗಳಿಂದ ನಾಗಾಲ್ಯಾಂಡ್​ನಲ್ಲಿ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಯನ್ನ ನಿಭಾಯಿಸಿದ್ದರು.

  ಬೇಬಿ ರಾಣಿ ಮೌರ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಉತ್ತರಾಖಂಡ್ ರಾಜ್ಯಪಾಲ ಸ್ಥಾನಕ್ಕೆ ನಿವೃತ್ತ ಸೇನಾಧಿಕಾರಿ ಲೆ| ಜ| ಗುರ್ಮೀತ್ ಸಿಮಗ್ ಅವರನ್ನ ನೇಮಕ ಮಾಡಲಾಗಿದೆ. ಗುರ್ಮೀತ್ ಸಿಂಗ್ 2016ರವರೆಗೂ ಸೇನೆಯಲ್ಲಿ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಯ ಉಪ ಮುಖ್ಯಸ್ಥ ಸ್ಥಾನವನ್ನೂ ಅವರು ಅಲಂಕರಿಸಿದ್ದರು. ಕಾಶ್ಮೀರ ಮತ್ತು ಚೀನಾ ವಿಚಾರಗಳಲ್ಲಿ ಅವರಿಗೆ ಸಾಕಷ್ಟು ಪರಿಣಿತಿ ಇದೆ. ಕಾಶ್ಮೀರದ ಎಲ್​ಒಸಿಯ ಮೇಲೆ ಹದ್ದಿನ ಕಣ್ಣಿಡುವ XV ಕಾರ್ಪ್ಸ್ ಪಡೆಯ ಕಮಾಂಡರ್ ಆಗಿದ್ದವರು. ಚೀನಾ ಸಂಬಂಧಿತ ವಿಚಾರವನ್ನು ನಿಭಾಯಿಸಲು ಅವರು ಹೆಚ್ಚುವರಿ ಮಹಾನಿರ್ದೇಶಕರಾಗಿ ಕೆಲಸ ಮಾಡಿದ್ಧಾರೆ. ಈಗ ರಾಷ್ಟ್ರಪತಿಗಳು ಗುರ್ಮೀತ್ ಸಿಂಗ್ ಅವರನ್ನ ಉತ್ತರಾಖಂಡ್ ರಾಜ್ಯಪಾಲರಾಗಿ ನೇಮಕ ಮಾಡಿ ಅದೇಶ ಹೊರಡಿಸಿದ್ಧಾರೆ. ಈಗ ನೇಮಕವಾಗಿರುವವರೆಲ್ಲರೂ ಕರ್ತವ್ಯಕ್ಕೆ ಹಾಜರಾದ ದಿನ ನೇಮಕಾತಿ ಚಾಲನೆಗೊಳ್ಳಲಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಇದನ್ನೂ ಓದಿ: BRICS: ಅಫ್ಘಾನ್ ಬಿಕ್ಕಟ್ಟು; ತಾಲಿಬಾನಿಗಳು ನೆರೆಯ ದೇಶಗಳಿಗೆ ಬೆದರಿಕೆಯಾಗಬಾರದು; ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ

  ತಮಿಳುನಾಡಿಗೆ ನೂತನ ರಾಜ್ಯಪಾಲರಾಗಿರುವ ನಾಗಾಲ್ಯಾಂಡ್​ನ ಎನ್​ಎಸ್​ಸಿಎಂ-ಐಎಂ ಗುಂಪು ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಧಾನಕಾರರಾಗಿ ಕೆಲಸ ಮಾಡಿದ್ದರು. ಆದರೆ, ರವಿ ಅವರ ಕೆಲಸವನ್ನು ನಾಗಾ ಗುಂಪು ವಿರೋಧಿಸಿತ್ತು. ರವಿ ಅವರನ್ನ ಹೊರಹಾಕುವವರೆಗೂ ಶಾಂತಿ ಸಂಧಾನ ಯಶಸ್ವಿಯಾಗುವುದಿಲ್ಲ ಎಂದು ಎನ್​ಎಸ್​ಸಿಎನ್-ಐಎಂ ಸ್ಪಷ್ಟವಾಗಿ ಹೇಳಿತ್ತು. ಅದಕ್ಕೆ ಮುನ್ನ ನಿವೃತ್ತ ಐಪಿಎಸ್ ಅಧಿಕಾರಿ ರವಿ ಅವರು ಒಂದೂವರೆ ವರ್ಷದ ಹಿಂದೆ ನಾಗಾಲ್ಯಾಂಡ್​ನಲ್ಲಿ ಕಾನೂನು ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ನಾಗಾಲ್ಯಾಂಡ್ ಮುಖ್ಯಮಂತ್ರಿಗೆ ಪತ್ರ ಬರೆದು ತಿಳಿಸಿದ್ದರು. ಸಶಸ್ತ್ರ ಗುಂಪುಗಳು ರಾಜ್ಯದಲ್ಲಿ ಪರ್ಯಾಯ ಆಡಳಿತ ನಡೆಸುತ್ತಿವೆ. ರಾಜ್ಯದಲ್ಲಿ ಸರ್ಕಾರಕ್ಕೆ ಇದು ಸವಾಲು ಆಗಿದೆ ಎಂದು ಅವರು ಆರೋಪಿಸಿದ್ದರು. ಆದರೆ, ಮುಖ್ಯಮಂತ್ರಿ ನೇಫಿಯು ರಿಯೋ ಅವರು ಈ ಅಭಿಪ್ರಾಯವನ್ನು ತಿರಸ್ಕರಿಸಿದ್ದರು. ಅದಾದ ಬಳಿಕ ನಾಗಾ ಗುಂಪುಗಳು ರವಿಯನ್ನ ಹೊರಹಾಕುವಂತೆ ಒತ್ತಾಯ ಹೇರಿವೆ. ಈಗ ತಮಿಳುನಾಡಿಗೆ ರವಿ ಅವರು ವರ್ಗಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಗಾಲ್ಯಾಂಡ್​ನಲ್ಲಿ ಶಾಂತಿ ಪ್ರಕ್ರಿಯೆಗೆ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ.

  ಇನ್ನು, ಪಂಜಾಬ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅದರತ್ತ ಪೂರ್ಣ ಗಮನ ಕೊಡುವ ರಾಜ್ಯಪಾಲರ ಅಗತ್ಯ ಇದ್ದರಿಂದ ಬನ್ವರಿಲಾಲ್ ಪುರೋಹಿತ್ ಅವರಿಂದ ತಮಿಳುನಾಡಿನ ಹೆಚ್ಚುವರಿ ಜವಾಬ್ದಾರಿ ನೀಗಿಸಲಾಗಿದೆ.
  Published by:Vijayasarthy SN
  First published: