Mekedatu Project: ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡಲು ತಮಿಳುನಾಡು ಬಲವಾಗಿ ವಿರೋಧಿಸುತ್ತಿರುವುದರಿಂದ ಮತ್ತೀಗ ಸುಪ್ರೀಂ ಕೋರ್ಟ್ ಮೆಟ್ಟಿಲನ್ಮೂ ಏರಿರುವುದರಿಂದ ಯೋಜನೆಯ ಕೆಲಸ ಆರಂಭಕ್ಕೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮೇಕೆದಾಟು, ಸುಪ್ರೀಂಕೋರ್ಟ್​

ಮೇಕೆದಾಟು, ಸುಪ್ರೀಂಕೋರ್ಟ್​

  • Share this:
ನವದೆಹಲಿ, ಜು. 11: ಬೆಂಗಳೂರು (Bengaluru) ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ಯೋಜನೆಯ ವಿಸ್ತ್ರತ ಯೋಜನಾ ವರದಿಗೆ (Detail Project Report) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಸಭೆಯು ಸುಪ್ರೀಂ ಕೋರ್ಟಿನಲ್ಲಿ (supreme courtಇರುವ ಪ್ರಕರಣ ಇತ್ಯರ್ಥ ಆಗುವವರೆಗೆ ಒಪ್ಪಿಗೆ ನೀಡಬಾರದೆಂದು ತಕರಾರು ತೆಗೆದಿರುವ ತಮಿಳುನಾಡು ಸರ್ಕಾರ (Tamilunadu Government) ಈಗ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ತಮಿಳುನಾಡಿನ‌ ಹೊಸ ವರಸೆ

ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ವಿಸ್ತೃತ ಯೋಜನಾ ವರದಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ವಿಷಯದ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ನೀಡಿ ಎಂದು ಕೇಳಿಕೊಂಡಿದ್ದಾರೆ. ಕೇಂದ್ರ ಜಲಸಂಪನ್ಮೂಲ ಇಲಾಖೆ ಮುಂದಿನ ಸಭೆಯಲ್ಲಿ ಮೇಕೆದಾಟು ಡಿಪಿಆರ್ ವಿಚಾರವನ್ನು ಸಭೆಯ ಅಜೆಂಡಾಗೆ ಸೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಹೊಸ ವರಸೆ ಶುರುಮಾಡಿದೆ.

ಜುಲೈ 19ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ

ಸುಪ್ರೀಂ ಕೋರ್ಟಿನಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ತಮಿಳುನಾಡು ಪರ ವಕೀಲರು ಈ ಹಿಂದೆಯೇ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಆಗದೇ ಇದ್ದರೂ ಕರ್ನಾಟಕ ಮೇಕೆದಾಟು ಯೋಜನೆ ಆರಂಭಿಸಲು ಅವಸರ ಮಾಡುತ್ತಿದೆ. ಯೋಜನೆಯ ಡಿಪಿಆರ್ ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಪಡೆಯಲು ಪ್ರಯತ್ನಿಸಿದೆ. ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಅಜೆಂಡಾ ಸೇರಿಸಲು ತಮಿಳುನಾಡು ಒಪ್ಪಿಗೆ ನೀಡದ ಕಾರಣಕ್ಕೆ ಈಗಾಗಲೇ ಮೂರು ಬಾರಿ ಸಭೆಯನ್ನು ಮುಂದೂಡಲಾಗಿದೆ. ಕೂಡಲೇ ಸಭೆ ಕರೆಯಬೇಕು, ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿತು. ಜುಲೈ 19ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: AIADMK Tussle: ಎಐಎಡಿಎಂಕೆ ಪಕ್ಷದ ನಾಯಕತ್ವ ಸ್ಥಾನಕ್ಕೆ ಭಾರೀ ಕಿತ್ತಾಟ; ತಮಿಳುನಾಡಲ್ಲಿ ಏನಾಗುತ್ತಿದೆ?

ಕೇಂದ್ರ ಸಚಿವರನ್ನೂ ಭೇಟಿ ಮಾಡಿದ್ದ ತಮಿಳುನಾಡು

ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನೇತೃತ್ವದ ನಿಯೋಗವು ಇತ್ತೀಚೆಗೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಒತ್ತಡ ಹೇರಿದೆ. ಮೇಕೆದಾಟು ಡಿಪಿಆರ್ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇದೆ. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಸ ಸಭೆಯಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ ಆದುದರಿಂದ ಮೇಕೆದಾಟು ಡಿಪಿಆರ್ ವಿಷಯವನ್ನು ಸಭೆಯ ಅಜೆಂಡಾ ಕೈಬಿಡಬೇಕೆಂದು ಒತ್ತಡ ಹೇರಿತ್ತು.
ಪ್ರಧಾನಿಗೆ ಪತ್ರ ಬರೆದಿದ್ದ ಸ್ಟಾಲಿನ್

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಡಿಪಿಆರ್ ಗೆ ಅನುಮೋದನೆ ನೀಡುವ ಬಗ್ಗೆ ಚರ್ಚಿಸುವ ಅಜೆಂಡಾವನ್ನು ಸೇರಿಸಬಾರದು ಎಂದು ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನ ಮಂತ್ರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಪತ್ರ ಬರೆದಿದ್ದರು.

ಇದನ್ನೂ ಓದಿ: Vijay Mallya: ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್; ಯಾವ ಕೇಸ್ ಇದು?

ಮೇಕೆದಾಟು ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ನೀಡಲು ತಮಿಳುನಾಡು ಬಲವಾಗಿ ವಿರೋಧಿಸುತ್ತಿರುವುದರಿಂದ ಮತ್ತೀಗ ಸುಪ್ರೀಂ ಕೋರ್ಟ್ ಮೆಟ್ಟಿಲನ್ಮೂ ಏರಿರುವುದರಿಂದ ಯೋಜನೆಯ ಕೆಲಸ ಆರಂಭಕ್ಕೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
Published by:Pavana HS
First published: