ಚೆನ್ನೈ (ಏ.18) : ಆತ ತಮಿಳಿನ ಹೆಸರಾಂತ ನಟ ಹೆಸರು ಶಿವಕಾರ್ತಿಕೇಯನ್. ಚುನಾವಣೆಯಲ್ಲಿ ಮತ ಚಾಲಾಯಿಸಲು ಇಂದು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ಇಲ್ಲ. ಕೊನೆಗೂ ನಾಲ್ಕು ಗಂಟೆಯ ಸತತ ಹೋರಾಟದ ಬಳಿಕ ತನ್ನ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚೆನ್ನೈನ ವಳಸರವಾಕ್ಕಂ ಭಾಗದಲ್ಲಿ ನಿವಾಸ ಹೊಂದಿರುವ ನಟ ಪಕ್ಕದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅಧಿಕಾರಿಗಳು ಅವರಿಗೆ ಮತದಾನ ನೀಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ : ವಾರಣಾಸಿಗೆ ಬಾರದ ಅಚ್ಚೆದಿನ ಭಾರತಕ್ಕೆ ಬಂದೀತೆ?; ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನೆ
ಆದರೆ, ನಟ ಇಷ್ಟಕ್ಕೆ ಸುಮ್ಮನಾಗದೆ ಚುನಾವಣಾ ಅಧಿಕಾರಿಯನ್ನು ಸಂಪರ್ಕಿಸಿ ಮಾತನಾಡಿ ಸುಮಾರು 4 ಗಂಟೆಗಳ ಹೋರಾಟದ ನಂತರ ಕೊನೆಗೂ ಶಿವಕಾರ್ತಿಕೇಯನ್ ತಮ್ಮ ಹಕ್ಕನ್ನು ಹಿಂಪಡೆದಿದ್ದಾರೆ. ಅಲ್ಲದೆ ಈ ಕುರಿತು ಟ್ವಿಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, “ಮತ ಚಲಾಯಿಸುವುದು ನಿಮ್ಮ ಹಕ್ಕು. ನಿಮ್ಮ ಹಕ್ಕಿಗಾಗಿ ಹೋರಾಡಿ,” ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ತಮಿಳು ನಟ ರಮೇಶ್ ಖನ್ನ ಹೆಸರು ಸಹ ಮತದಾರರ ಪಟ್ಟಿಯಿಂದ ಕಾಣೆಯಾಗಿದೆ. ಹೀಗಾಗಿ ಬೆಳಗ್ಗೆಯೇ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ರಮೇಶ್ ಖನ್ನಾ ಮತ ಚಲಾಯಿಸದೆ ಮನೆಗೆ ಹಿಂದಿರುಗಿದ್ದರು.
ಸಾಮಾನ್ಯರಿಗೂ ಏಕಿಲ್ಲ ಈ ಸೌಲಭ್ಯ? : ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ಬರುವ ಹಲವಾರು ಜನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ಮತ್ತೆ ಮನೆಗೆ ಹಿಂದಿರುಗುವುದು ಸಾಮಾನ್ಯ ಸಂಗತಿಯಾಗಿದೆ. ಈ ಕುರಿತು ಭಾರತದಾದ್ಯಂತ ಎಲ್ಲಾ ಮತಗಟ್ಟೆಗಳಲ್ಲೂ ವರದಿಯಾಗುತ್ತಲೇ ಇದೆ. ಆದರೂ ಭಾರತೀಯ ಚುನಾವಣಾ ಆಯೋಗ ಇದಕ್ಕೆ ಯಾವುದೇ ಪರಿಹಾರ ಕಂಡುಕೊಂಡಿಲ್ಲ.
ಇದನ್ನೂ ಓದಿ : 'ಸಂಜೆಯೊಳಗೆ ಮಂಡ್ಯದಿಂದ ಟೂರಿಂಗ್ ಟಾಕೀಸ್ ಟೆಂಟ್ ಖಾಲಿಯಾಗಲಿದೆ'; ಸುಮಲತಾ ವಿರುದ್ಧ ಮತ್ತೆ ಕಿಡಿಕಾರಿದ ಶಿವರಾಮೇಗೌಡ
ಇಂದು ತಮಿಳುನಾಡಿನ ಖ್ಯಾತ ನಟನಿಗೂ ಇದೇ ಪರಿಸ್ಥಿತಿ ಉಂಟಾಗಿದೆ. ಆದರೆ, ಆತ ಇಷ್ಟಕ್ಕೆ ಸುಮ್ಮನಾಗದೆ ಚುನಾವಣಾ ಅಧಿಕಾರಿಗಳ ಬಳಿ ಹೋರಾಟ ನಡೆಸಿ ಮತ್ತೆ ತನ್ನ ಹಕ್ಕನ್ನು ವಾಪಾಸ್ ಪಡೆದಿದ್ದಾರೆ, ಮತ ಚಲಾಯಿಸಿದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ. ಆದರೆ ಇಂತಹ ಸೌಲಭ್ಯ ಮತ ಕಳೆದುಕೊಂಡ ಸಾಮಾನ್ಯ ಮತದಾರನಿಗೆ ಏಕಿಲ್ಲ? ಎಂಬುದು ಪ್ರಮುಖ ಪ್ರಶ್ನೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ