ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಭಾರತದಲ್ಲಿ "ಇಮ್ಮೆರ್ಸಿಂಗ್ ವಿತ್ ಇಂಡಿಯನ್ ಥಾಟ್ಸ್ (Immersing with Indian thoughts" ) ಎಂಬ ನಾಲ್ಕು ದಿನಗಳ ಆನ್‌ಲೈನ್ ಕೋರ್ಸ್ ಅನ್ನು ಇಂದಿನಿಂದ ಆಯೋಜಿಸಿದ್ದು, ಇತರೆ ದೇಶಗಳಿಗೂ ಆಹ್ವಾನ ನೀಡಿದ್ದು, ಅವು ಕೂಡ ವರ್ಚುವಲ್ (Virtual) ಕಾರ್ಯಕ್ರಮದಲ್ಲಿ ಭಾಗವಹಿಸಿವೆ. ಕೋಳಿಕ್ಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management) ನಡೆಸಲಿರುವ ಈ ನಾಲ್ಕು ದಿನಗಳ ಕಾರ್ಯಗಾರಕ್ಕೆ ಹಲವಾರು ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದು, ಜೊತೆಗೆ ವಿಶೇಷವಾಗಿ ಕೋರ್ಸ್‌ನಲ್ಲಿ ತಾಲಿಬಾನ್ (Taliban) ಆಡಳಿತವಿರುವ ಅಫ್ಘಾನಿಸ್ತಾನ ಕೂಡ ಭಾಗವಹಿಸಲಿದೆ.
2021 ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅದರ ಆಡಳಿತವನ್ನು ಗುರುತಿಸಲು ಮತ್ತು ಗುಂಪಿನೊಂದಿಗೆ ತೊಡಗಿಸಿಕೊಳ್ಳುವಲ್ಲಿ ಭಾರತವು ಒಂದು ಹೆಜ್ಜೆ ಇಟ್ಟಿದೆ.
ಕೋರ್ಸ್ ಏನು?
ಇಂದಿನಿಂದ ಪ್ರಾರಂಭವಾಗುವ ಈ ಆನ್‌ಲೈನ್ ಕೋರ್ಸ್, ಭಾರತದ ಆರ್ಥಿಕ ಪರಿಸರ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಹಿನ್ನೆಲೆ ಮತ್ತು ಅದರ ಬಗ್ಗೆ ಹೆಚ್ಚಿನದ್ದನ್ನು ಕಲಿಯಲು ಅವಕಾಶವನ್ನು ನೀಡುತ್ತದೆ.
ಏತಕ್ಕಾಗಿ ಈ ಕೋರ್ಸ್?
ಭಾರತವು ಏಕತೆಯಲ್ಲಿ ವಿವಿಧತೆ ಹೊಂದಿರುವ ದೇಶ. ಈ ಕಾರ್ಯಕ್ರಮದ ಮೂಲಕ ವಿದೇಶಿ ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕರಿಗೆ ಆಳವಾದ ತಿಳುವಳಿಕೆಯನ್ನು ನೀಡುವುದು ಕೋರ್ಸ್‌ನ ಉದ್ದೇಶ.
ಒಟ್ಟಾರೆ ಈ ಕೋರ್ಸ್ ಭಾಗವಹಿಸುವವರಿಗೆ ಭಾರತದ ಆರ್ಥಿಕ ಪರಿಸರ, ನಿಯಂತ್ರಕ ಪರಿಸರ ವ್ಯವಸ್ಥೆ, ನಾಯಕತ್ವದ ಒಳನೋಟಗಳು, ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ, ಕಾನೂನು ಮತ್ತು ಪರಿಸರದ ಭೂದೃಶ್ಯ, ಗ್ರಾಹಕರ ಮನಸ್ಥಿತಿ ಮತ್ತು ವ್ಯಾಪಾರ ಅಪಾಯಗಳ ಬಗ್ಗೆ ಗ್ರಹಿಸಲು ಮತ್ತು ಕಲಿಯಲು ಅವಕಾಶವನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಯಾರೆಲ್ಲಾ ಭಾಗವಹಿಸಲಿದ್ದಾರೆ?
ಸುಮಾರು 30 ದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳು, ವ್ಯಾಪಾರ ಮುಖಂಡರು, ಕಾರ್ಯನಿರ್ವಾಹಕರು ಮತ್ತು ಉದ್ಯಮಿಗಳು ಕೋರ್ಸ್‌ಗೆ ಹಾಜರಾಗಲಿದ್ದಾರೆ.
ಈ ನಾಲ್ಕು ದಿನಗಳಲ್ಲಿ ಭಾರತೀಯ ಚಿಂತನೆಗಳು, ಭಾರತದ ಸಾಮಾಜಿಕ ಮತ್ತು ಐತಿಹಾಸಿಕ ಮೌಲ್ಯಮಾಪನ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ನಾಯಕತ್ವದ ಒಳನೋಟಗಳ ಬಗ್ಗೆ ಸೆಷನ್‌ಗಳು ನಡೆಯಲಿವೆ.
ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸೇರಬಹುದು ಎಂದು ಅಫ್ಘಾನಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೊಮಸಿ ಡಾರಿಯಲ್ಲಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಕಾರ್ಯಕ್ರಮಕ್ಕೆ ತಾಲಿಬಾನ್‌ಗೆ ಆಹ್ವಾನ ನೀಡಿದ್ದಕ್ಕೆ ಪ್ರತಿಪಕ್ಷಗಳು ಮೋದಿಯನ್ನು ಟೀಕೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕ ಗುಂಪನ್ನು ಬೆಂಬಲಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ:Taliban: ಭಾರತದಂತೆ ನಾವೂ ನಿಮ್ಮ ಮೇಲೆ ಯುದ್ಧ ಮಾಡಬೇಕಾಗುತ್ತದೆ! ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದಿಂದ ಖಡಕ್ ಎಚ್ಚರಿಕೆ
"ಭಾರತವು ತಾಲಿಬಾನ್ ಆಡಳಿತವನ್ನು ಗುರುತಿಸುವುದಿಲ್ಲ ಆದರೆ MEA ತಾಲಿಬಾನ್ ಅಧಿಕಾರಿಗಳಿಗೆ ಕೋರ್ಸ್‌ಗಳನ್ನು ನಡೆಸುತ್ತಿದೆ. ಅಧಿಕೃತವಾಗಿ ನರೇಂದ್ರ ಮೋದಿ ತಾಲಿಬಾನ್‌ನಿಂದ ದೂರವಿರುತ್ತಾರೆ ಆದರೆ ಅನಧಿಕೃತವಾಗಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಾರೆ" ಎಂದು ಕಾಂಗ್ರೆಸ್ ವಕ್ತಾರ ಡಾ. ಶಾಮಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನ-ಭಾರತ
ಕಳೆದ ವಾರವಷ್ಟೇ ಭಾರತವು ಇರಾನ್‌ನ ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಿತ್ತು. ಈ ಮೂಲಕ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನದ ಜೊತೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ನೋಡುತ್ತಿದೆ. ಭಾರತ ಈ ಹಿಂದೆಯೂ ಅಫ್ಘಾನಿಸ್ತಾನಕ್ಕೆ ನೆರವು ನೀಡಿದೆ.
ಅಫ್ಘಾನಿಸ್ತಾನಕ್ಕೆ ಭಾರತವು ಔಷಧಿಗಳು, ಲಸಿಕೆಗಳು ಮತ್ತು ಆಹಾರವನ್ನು ನೀಡುವ ಮೂಲಕ ಮಾನವೀಯ ನೆರವನ್ನು ನೀಡುತ್ತಲೇ ಬಂದಿದೆ. ಜೂನ್ 2022 ರಲ್ಲಿ, ನಡೆದ ಭೂಕಂಪದಲ್ಲಿ ಅಫ್ಘಾನಿಸ್ತಾನದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ವೇಳೆ ಕೂಡ ಅಫಘಾನಿಗಳಿಗೆ ಭಾರತವು ಸಹಾಯಸ್ತ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ