ಜಲಾಲಬಾದ್​ನಲ್ಲಿ ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳ ಗುಂಡಿನ ದಾಳಿ; ಮೂವರು ಬಲಿ

ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಶಾಂತಿ ಕಾಪಾಡುತ್ತೇವೆ ಎಂದೆಲ್ಲಾ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ತಾಲಿಬಾನಿಗಳು ಅದಾಗಿ ಒಂದೇ ದಿನದಲ್ಲಿ ಮೂವರು ವ್ಯಕ್ತಿಗಳನ್ನ ಗುಂಡಿಟ್ಟು ಕೊಂದಿದೆ.

ಜಲಾಲಬಾದ್​ನಲ್ಲಿ ಜನರ ಪ್ರತಿಭಟನೆ

ಜಲಾಲಬಾದ್​ನಲ್ಲಿ ಜನರ ಪ್ರತಿಭಟನೆ

 • Share this:
  ಕಾಬೂಲ್, ಆ. 18: ಆಫ್ಘಾನಿಸ್ತಾನದಲ್ಲಿ ಇಪತ್ತು ವರ್ಷಗಳ ಬಳಿಕ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವ ತಾಲಿಬಾನ್ ತಾನು ಯಾರನ್ನೂ ಹಿಂಸಿಸುವುದಿಲ್ಲ. ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಉದಾರೀ ಸಂದೇಶವನ್ನು ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಆದರೆ, ಅದಾಗಿ ಒಂದೇ ದಿನದಲ್ಲಿ ತಾಲಿಬಾನ್​ನ ನಿಜಸ್ವರೂಪ ಮತ್ತೊಮ್ಮೆ ಜಗಜ್ಜಾಹೀರು ಮಾಡುವಂತಹ ಘಟನೆ ಜಲಾಲಬಾದ್​ನಲ್ಲಿ ನಡೆದಿದೆ. ತಾಲಿಬಾನ್ ಆಕ್ರಮಣವನ್ನು ವಿರೋಧಿಸಿ ಜಲಾಲಬಾದ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಪ್ರತಿಭಟನಾಕಾರರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಆಫ್ಘಾನಿಸ್ತಾನದ ಪೂರ್ವಭಾಗದಲ್ಲಿರುವ ಈ ನಗರದಲ್ಲಿ ನಡೆದ ತಾಲಿಬಾನ್ ಗುಂಡಿನ ದಾಳಿಗೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ.

  ರಾಜಧಾನಿ ಕಾಬೂಲ್​ನಿಂದ ಪೂರ್ವಕ್ಕೆ 150 ಕಿಮೀ ದೂರದಲ್ಲಿರುವ ಜಲಾಲಬಾದ್ ನಗರದ ಪ್ರದೇಶವೊಂದರಲ್ಲಿ ಸ್ಥಳೀಯ ಜನರು ಆಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜದ ಆರೋಹಣ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ತಾಲಿಬಾನ್ ಉಗ್ರರು ಸ್ಥಳಕ್ಕೆ ಆಗಮಿಸಿ ಧ್ವಜ ಹಾರಿಸುತ್ತಿದ್ದ ಜನರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

  ಆಫ್ಘಾನಿಸ್ತಾನದಲ್ಲಿ 20 ವರ್ಷಗಳ ಹಿಂದೆ ಆಡಳಿತದಲ್ಲಿದ್ದ ತಾಲಿಬಾನ್ ಸರ್ಕಾರವನ್ನ ಅಮೆರಿಕ ಕಿತ್ತೊಗೆದಿತ್ತು. ಇಪತ್ತು ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಪಡೆ ಭದ್ರತೆ ಒದಗಿಸುತ್ತಾ ಬಂದಿತ್ತು. ಪಾಕಿಸ್ತಾನ ಇತ್ಯಾದಿ ವಿವಿಧೆಡೆ ಅಡಗಿಕೊಂಡಿದ್ದ ತಾಲಿಬಾನಿಗಳು ಆಫ್ಘಾನಿಸ್ತಾನದಿಂದ ಅಮೆರಿಕದ ಸೇನೆ ವಾಪಸ್ ಹೋಗುತ್ತಿದ್ದಂತೆಯೇ ಸಕ್ರಿಯರಾಗಿದ್ದಾರೆ. ಕೇವಲ ಒಂಬತ್ತು ದಿನದಲ್ಲಿ ಇಡೀ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ಧಾರೆ. ಆಫ್ಘಾನಿಸ್ತಾನದ ಸರ್ಕಾರೀ ಸೈನಿಕರು ಮತ್ತು ಪೊಲೀಸರೂ ಕೂಡ ತಾಲಿಬಾನ್ ಪಡೆಯನ್ನ ಸೇರಿಕೊಂಡು ಸರ್ಕಾರದಿಂದ ಒಂದಿಷ್ಟೂ ಪ್ರತಿರೋಧ ಸಾಧ್ಯವಾಗದಂತಾಗಿಹೋಗಿದೆ.

  ಇದನ್ನೂ ಓದಿ: ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿದ ತಾಲಿಬಾನ್​; ಅರಬ್​ ರಾಷ್ಟ್ರದಲ್ಲಿ ಅಡಗಿಕೊಂಡಿರುವ ಅಧ್ಯಕ್ಷ ಘನಿ

  ತಾಲಿಬಾನ್ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಆಫ್ಘಾನಿಸ್ತಾನದಲ್ಲಿದ್ದ ವಿದೇಶಿಗರು ಹಾಗೂ ಕೆಲ ಸ್ಥಳೀಯರು ದೇಶ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅಮೆರಿಕದ ಸೇನಾ ವಿಮಾನವೊಂದರ ರೆಕ್ಕೆ, ಚಕ್ರಗಳನ್ನ ಹಿಡಿದು ನೇತಾಡಿಕೊಂಡು ಜನರು ಸಾಗುತ್ತಿದ್ದ ದೃಶ್ಯವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅಷ್ಟರಮಟ್ಟಿಗೆ ಅಲ್ಲಿನ ಕೆಲ ಜನರು ತಾಲಿಬಾನ್​ಗೆ ಭಯಪಡುತ್ತಿದ್ದಾರೆ.

  ಆದರೆ, ತಾಲಿಬಾನ್ ಸಂಘಟನೆ ತಾನು ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಇಸ್ಲಾಮ್ ನಿಯಮಾವಳಿಗಳ ಚೌಕಟ್ಟಿನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಗೌರವ ನೀಡುತ್ತೇವೆ. ಹಜಾರ ಮುಸ್ಲಿಮರಿಗೆ ತೊಂದರೆ ಕೊಡುವುದಿಲ್ಲ. ಅಲ್ಪಸಂಖ್ಯಾತರು, ಪತ್ರಕರ್ತರು ಕ್ಷೇಮವಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿತ್ತು.

  ಇದೇ ವೇಳೆ, ಆಫ್ಘಾನಿಸ್ತಾನದ ಸೇನಾ ಪಡೆಯ ಯೋಧರು ಹಾಗೂ ಮಾಜಿ ಪೈಲಟ್​ಗಳನ್ನ ತಾಲಿಬಾನ್ ಸಂಘಟನೆಗೆ ಸೇರಿಕೊಳ್ಳುವಂತೆ ಆಹ್ವಾನಿಸಲಾಗಿದೆ. ಹಾಗೆಯೇ, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇರವಾಗಿ ಆಡಳಿತ ನಡೆಸುವ ಬದಲು ಆಡಳಿತ ಮಂಡಳಿಯನ್ನ ನಿಯುಕ್ತಗೊಳಿಸುವ ಸಾಧ್ಯತೆ ಇದೆ. ತಾಲಿಬಾನ್​ನ ಹೈಬತುಲ್ಲಾ ಅಖುಂದ್​ಜಾದ ಅವರು ಸರ್ವೋಚ್ಚ ನಾಯಕರಾಗಿ ಆಡಳಿತ ಮಂಡಳಿಯನ್ನ ನಿಯಂತ್ರಿಸಲಿದ್ದಾರೆ. 1996ರಿಂದ 2001ರವರೆಗೆ ತಾನು ಆಡಳಿತ ನಡೆಸುತ್ತಿದ್ದ ಮಾದರಿಯಲ್ಲೇ ಈ ಬಾರಿಯೂ ತಾಲಿಬಾನ್ ಆಡಳಿತ ರೂಪುರೇಖೆ ಸಿದ್ಧವಾಗಿದೆ. ಆಗ ಮುಲ್ಲಾ ಒಮರ್ ಅವರು ಸರ್ವೋಚ್ಚ ನಾಯಕರಾಗಿದ್ದರು. ಈಗ ಹೈಬತುಲ್ಲಾ ಅಖುಂಡ್​ಝಾದ ಅವರು ಆ ಅಧಿಕಾರ ಉಪಯೋಗಿಸಲಿದ್ದಾರೆನ್ನಲಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: