ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯ ಮಿತಿಮೀರುತ್ತಿದ್ದು ಅಲ್ಲಿನ ಸೇನೆಯು ತಾಲಿಬಾನಿಗಳನ್ನು ಹಿಮ್ಮೆಟ್ಟಿಸುವುದಕ್ಕಾಗಿ ನಿರಂತರ ಹೋರಾಟವನ್ನು ನಡೆಸುತ್ತಿದೆ. ತಾಲಿಬಾನಿಗಳಿಗೆ ಹೆದರಿ ತಮ್ಮ ತಾಯ್ನಾಡಿನಿಂದ ಸಾವಿರಾರು ಕಿ.ಮೀ. ದೂರದಲ್ಲಿ ವಾಸಿಸುತ್ತಿರುವ ನಿರಾಶ್ರಿತರ ಕಾಯುವಿಕೆಯು ಹಲವಾರು ವರ್ಷಗಳಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದು ಇದು ಇನ್ನೂ ದಶಕಗಳ ಕಾಲ ಮುಂದುವರಿಯುವ ಎಲ್ಲಾ ಸಾಧ್ಯತೆ ಕಂಡುಬರುತ್ತಿದೆ.
ದೆಹಲಿಯ ಜಂಗ್ಪುರದಲ್ಲಿ ಸುಮಾರು 7 ವರ್ಷಗಳಿಗಿಂತಲೂ ಹೆಚ್ಚು ಕಾಲ ನೆಲೆಸಿರುವ ದಾವೂದ್ ಶರೀಫಿ ಹೇಳುವಂತೆ ನಮ್ಮ ತಾಯ್ನಾಡಿಗೆ ಮರಳುವ ಇರಾದೆ ನಮಗಿದ್ದರೂ ಭಾರತದಲ್ಲಿ ಜನಿಸಿದ ನನ್ನ ಮಕ್ಕಳು ಮರಳಿ ಅಪ್ಘಾನ್ ಮಣ್ಣಿಗೆ ತೆರಳಲು ಸಮ್ಮತಿಸುತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ನಿರಂತರವಾಗಿ ಮುಂದುವರಿಯುತ್ತಿರುವ ಹಿಂಸೆ, ರಕ್ತಪಾತ, ಯುದ್ಧ ನೋಡಿ ನನ್ನ ಮಕ್ಕಳು ನೀವು ಅಲ್ಲಿಗೆ ಹೋದರೆ ಸಾಯುತ್ತೀರಿ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಉತ್ತರ ಅಫ್ಘಾನಿಸ್ತಾನದಲ್ಲಿ ನೂರಾರು ಜನರು ತಮ್ಮ ಮನೆಮಠಗಳನ್ನು ಬಿಟ್ಟು ಯುದ್ಧಕ್ಕೆ ಹೆದರಿ ಓಡಿಹೋಗಿದ್ದಾರೆ. ತಮ್ಮ ನೆಲ, ಭೂಮಿ ರಕ್ಷಿಸಿಕೊಳ್ಳಲು ನಮ್ಮವರಿಂದ ಸಾಧ್ಯವಾಗುತ್ತಿಲ್ಲ. ತಾಲಿಬಾನಿಗಳ ಎದುರು ಅಪ್ಘಾನ್ ಸೇನೆ ಸೋಲುತ್ತಿದೆ. ನಮ್ಮ ರಕ್ಷಣೆಗೆ ನಮ್ಮ ಸರಕಾರವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ದೆಹಲಿಯಲ್ಲಿರುವ ಅಪ್ಘಾನ್ ನಿರಾಶ್ರಿತ ಸಂಘದ ಮುಖ್ಯಸ್ಥರೂ ಆಗಿರುವ ಶರೀಫಿ ಹೇಳುವಂತೆ ಭಾರತದಲ್ಲಿ ಸುಮಾರು 30,000 ಅಪ್ಘಾನ್ ನಿರಾಶ್ರಿತರು ವಾಸವಾಗಿದ್ದಾರೆ. ಅಪ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಇರಾನ್ ಹಾಗೂ ಪಾಕಿಸ್ತಾನವೂ ಈ ಸಾಲಿನಲ್ಲಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನ್ ವಿಶ್ಲೇಷಣೆ ನಡೆಸಿರುವ ಪ್ರಕಾರ ಅಫ್ಘಾನಿಸ್ತಾನದಲ್ಲಿ ನಾಲ್ಕು ದಶಕಗಳಿಂದ ನಡೆಯುತ್ತಿರುವ ಯುದ್ಧದಿಂದ ಸುಮಾರು 2.6 ದಶಲಕ್ಷಕ್ಕೂ ಹೆಚ್ಚಿನ ಜನರು ನಿರಾಶ್ರಿತರಾಗಿದ್ದಾರೆ.
ಅಮ್ನೆಸ್ಟಿ ಇಂಟರ್ನ್ಯಾಶನಲ್ ನೀಡಿರುವ ವರದಿ ಪ್ರಕಾರ ಅಫ್ಘಾನ್ ನಿರಾಶ್ರಿತರು ವಿಶ್ವದ ಅತಿದೊಡ್ಡ ಜನಸಂಖ್ಯೆ ಎಂದು ಹೇಳಿದೆ. ಎರಡು ದಶಕಗಳ ಹಿಂದೆಯೇ ದೆಹಲಿಯು ಅಫ್ಘಾನ್ ನಿರಾಶ್ರಿತರಿಗೆ ನೆಲೆಯಾಗಿದ್ದು, ಯುದ್ಧದಿಂದ ಹಾನಿಗೊಳಗಾದ ಅಫ್ಘಾನ್ ಜನರು ರಾಷ್ಟ್ರ ರಾಜಧಾನಿಯ ಲಜಪತ್ ನಗರ, ಜಂಗಪುರ, ಭೋಗಲ್ ಮತ್ತು ಹಳೆಯ ದೆಹಲಿ ಪ್ರದೇಶದಲ್ಲಿ ನೆಲೆಸಲು ಆರಂಭಿಸಿದರು.
ಅನೇಕರು ತಮ್ಮ ಬದುಕನ್ನು ಉಳಿಸಿಕೊಳ್ಳಲು ಅಫ್ಘಾನ್ ನೆಲದಿಂದ ಪಲಾಯನ ಮಾಡಿದರೂ ದೇಶ ಬಿಟ್ಟು ಹೋಗಲು ಇಚ್ಛಿಸದವರು ತಾಲಿಬಾನಿಗಳ ಕ್ರೌರ್ಯಕ್ಕೆ ತುತ್ತಾಗಿದ್ದಾರೆ. ಫರ್ಹಾದ್ ಕಳೆದ ಮೂರು ದಶಕಗಳಿಂದ ಚಿತ್ರಕಲಾವಿದನಾಗಿ ಕೆಲಸ ಮಾಡುತ್ತಿದ್ದಾರೆ. ಅಪ್ಘಾನಿಸ್ತಾನದಲ್ಲಿ ಇವರು ಬಹುಬೇಡಿಕೆಯ ಕಲಾವಿದರಾಗಿದ್ದರು. ಆದರೆ ಯುದ್ಧದ ಕಾರಣ 2018ರಲ್ಲಿ ದೆಹಲಿಗೆ ವಲಸೆ ಬಂದರು.
ತಾಲಿಬಾನಿಗಳು ವರ್ಣಚಿತ್ರವನ್ನು ಕೆಟ್ಟದ್ದು ಎಂಬುದಾಗಿ ಪರಿಗಣಿಸಿರುವುದರಿಂದ ಅಫ್ಘಾನಿಸ್ತಾನಕ್ಕೆ ಮರಳಲು ನನಗೆ ಸಾಧ್ಯವಿಲ್ಲ. ಇದು ಇಸ್ಲಾಂ ವಿರುದ್ಧವಾಗಿದೆ ಎಂಬುದಾಗಿ ಆ ನೀಚರು ಘೋಷಿಸಿದ್ದಾರೆ. ನನ್ನ ವೃತ್ತಿಯನ್ನು ನನ್ನ ತಾಯ್ನೆಲದಲ್ಲಿ ಸ್ವೀಕರಿಸದಂತೆ ತಾಲಿಬಾನಿಗಳು ಮಾಡಿದ್ದಾರೆ ಎಂಬುದಾಗಿ ದುಃಖ ತೋಡಿಕೊಂಡರು.
ತಾಲಿಬಾನಿಗಳು ಇಸ್ಲಾಮಿಕ್ ಆಚರಣೆಗಳ ಆಧಾರದ ಮೇಲೆ ಅತ್ಯಂತ ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ ಎಂದು ವರದಿಗಳು ಸೂಚಿಸುತ್ತವೆ. ನಿರಾಶ್ರಿತರಾಗಿರುವುದರಿಂದ ಆಧಾರ್ ಕಾರ್ಡ್ ಪಡೆಯಲು ಸಮಸ್ಯೆಗಳನ್ನು ಹೊಂದಿದ್ದೇವೆ ಹಾಗೂ ನಮ್ಮ ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ದಾಖಲಾತಿ ದೊರೆಯುವುದಿಲ್ಲ.
ಸುಲಭವಾಗಿ ಸಿಮ್ ಕಾರ್ಡ್ ಪಡೆಯಲು ನಮಗೆ ಸಾಧ್ಯವಾಗುವುದಿಲ್ಲವೆಂದು ದಾವೂದ್ ಹೇಳುತ್ತಾರೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಆಕ್ರಮಣ ಮಾಡಿ ತಮ್ಮ ನಿಯಂತ್ರಣಕ್ಕೆ ತಂದಲ್ಲಿ ನಮ್ಮ ತಾಯ್ನಾಡಿನ ಆಸೆಯನ್ನು ನಾವು ಸಂಪೂರ್ಣವಾಗಿ ಮರೆಯಬೇಕಾಗುತ್ತದೆ. ದೆಹಲಿಯ ರಸ್ತೆಗಳಲ್ಲಿ ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ಬಂದರೂ ಅಫ್ಘಾನ್ಗೆ ನಾವು ಮರಳುವುದಿಲ್ಲ ಎಂಬುದು ಶರೀಫಿ ಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ