Taliban Hang Dead Body: ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು!

Talibani Punishment: ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿ ಪೊಲೀಸರು, ಒಬ್ಬರ ಶವವನ್ನು ಕ್ರೇನ್ ಗೆ ಕಟ್ಟಿ ನಗರದ ಹೃದಯಭಾಗದಲ್ಲಿ ನೇತು ಹಾಕಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಬೂಲ್: ಅಫ್ಘಾನಿಸ್ತಾನ(Afghanistan)ದಲ್ಲಿ ಬದಲಾಗಿದ್ದೇವೆ ಎಂದು ಹೇಳಿಕೊಂಡು ಬಂದಿರುವ ತಾಲಿಬಾನಿಗಳ (Taliban) ಅಸಲಿ ಮುಖ ಅನಾವರಣಗೊಳ್ಳುತ್ತಿದೆ. ಇಂದು ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ (Herat city in western Afghanistan) ತಾಲಿಬಾನಿಗಳ ನೀಡಿರುವ ಕ್ರೂರ ಶಿಕ್ಷೆಯನ್ನ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಶನಿವಾರ ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿ ಪೊಲೀಸರು, ಒಬ್ಬರ ಶವವನ್ನು ಕ್ರೇನ್ ಗೆ ಕಟ್ಟಿ ನಗರದ ಹೃದಯಭಾಗದಲ್ಲಿ ನೇತು ಹಾಕಿದ್ದಾರೆ. ಸುಮಾರು ನಾಲ್ಕೈದು ಗಂಟೆ ಶವ ನೇತಾಡುತ್ತಿತ್ತು ಎಂದು ವರದಿಯಾಗಿದೆ.

ಹೆರಾತ್ ನಗರದ ನಿವಾಸಿಯಾಗಿರುವ ವಜೀರ್ ಅಹಮದ್ ಸಿದ್ಧಿಕಿ ಘಟನೆಯನ್ನು ಮಾಧ್ಯಮವೊಂದರ ಜೊತೆ ಹಂಚಿಕೊಂಡಿದ್ದಾರೆ. ತಾಲಿಬಾನಿ ಪೊಲೀಸರು ನಾಲ್ಕು ಶವಗಳನ್ನು ಅಡ್ಡದಾರಿಯಿಂದ ಎಳೆದು ತಂದರು. ಒಂದು ಶವವನ್ನು ಕ್ರೇನ್ ಗೆ ಕಟ್ಟಿ ತೂಗು ಹಾಕಿದರು. ಇನ್ನುಳಿದ ಮೂರು ಶವಗಳನ್ನು ನಗರದ ಮತ್ತೊಂದು ಭಾಗಕ್ಕೆ ತೆಗೆದುಕೊಂಡು ಹೋಗಲಾಯ್ತು. ಶವದ ಮೇಲೆ ಕೆಲ ಬರಹವುಳ್ಳ ಭಿತ್ತಿ ಪತ್ರ ಅಂಟಿಸಲಾಗಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.

ಕ್ರೂರ ಶಿಕ್ಷೆ ಅಗತ್ಯ ಎನ್ನುತ್ತಿರುವ ತಾಲಿಬಾನಿಗಳು

ತಾಲಿಬಾನಿಗಳು ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ಕ್ರೂರ ಶಿಕ್ಷೆಗಳು ಜನರಲ್ಲಿ ಭಯ ಮತ್ತು ಎಚ್ಚರಿಕೆಯನ್ನು ಮೂಡಿಸುತ್ತದೆ. ಜನರು ಒಂದು ತಪ್ಪು ಕೆಲಸ ಮಾಡಲು ಸಾವಿರ ಬಾರಿ ಯೋಚಿಸಬೇಕು ಎಂದು ಹೇಳಿದ್ದಾರೆ. ತಾಲಿಬಾನಿಗಳ ಶಿಕ್ಷೆ ಬಗ್ಗೆ ಮಾತನಾಡಿರುವ ವಜೀರ್, ತಪ್ಪಿಗೆ ಶಿಕ್ಷೆ ನೀಡಬೇಕು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ಈ ರೀತಿ ಅಮಾನವೀಯವಾಗಿ ಮನುಷ್ಯತ್ವ ಮರೆತು ದಂಡಿಸೋದು ಖಂಡನೀಯ. ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ 90ರ ದಶಕ ಮರಳಿದೆ. ಈಗ ಜನರು ತಾಲಿಬಾನಿಗಳನ್ನು ಕಂಡ್ರೆ ನಡುಗುವಂತಾಗಿದೆ ಎಂದು ಸದ್ಯದ ಪರಿಸ್ಥಿತಿಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಜಾನುವಾರುಗಳಂತೆ ಹೆಣಗಳನ್ನ ತಂದ್ರು..!

ತಾಲಿಬಾನಿಗಳು ನಾಲ್ಕು ಶವಗಳನ್ನು ಪಿಕಪ್ ವಾಹನದಲ್ಲಿ ನಾಲ್ಕು ಶವಗಳನ್ನು ತಂದಿದ್ದಾರೆ. ನೋಡ ನೋಡುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಮೈಕ್ ಮೂಲಕ ತಾಲಿಬಾನಿಗಳು ಮಾತನಾಡಲು ಆರಂಭಿಸಿದ್ದಾರೆ. ಈ ನಾಲ್ವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಎಲ್ಲರನ್ನೂ ಕೊಲ್ಲಲಾಗಿದೆ ಎಂದು ಹೇಳಿ ಒಂದು ಶವವನ್ನು ನೇತು ಹಾಕಿದ್ದಾರೆ. ಆದ್ರೆ ತಾಲಿಬಾನಿಗಳು ಮೃತರು ಎಲ್ಲಿಯವರು? ಎನ್‍ಕೌಂಟರ್ ಮಾಡಲಾಯ್ತಾ ಅಥವಾ ಬಂಧನದ ಬಳಿಕ ಕೊಂದ್ರಾ ಎಂಬುದರ ಕುರಿತ ಖಚಿತ ಮಾಹಿತಿ ನೀಡಿಲ್ಲ. ಕೆಲವರ ಪ್ರಕಾರ ಜನರ ಮಧ್ಯೆಯೇ ಗುಂಡು ಹೊಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಕತ್ತು, ಕೈ ಕತ್ತರಿಸೋ ಶಿಕ್ಷೆ ಅಗತ್ಯ ಎಂದ ಮುಲ್ಲಾ ನೂರುದ್ದೀನ್ ತುರಾಬಿ:

ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ (Mullah Nooruddin Turabi), ತಪ್ಪು ಮಾಡೋರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ. ಬಹುಶಃ ಈ ಬಾರಿ ಶಿಕ್ಷೆ ಸಾರ್ವಜನಿಕವಾಗಿ ಇರಲಾರದು ಹೇಳಿರುವ ಬಗ್ಗೆ ಸುದ್ದಿಗಳು ಪ್ರಕಟವಾಗಿವೆ. ಕೈ ಕತ್ತರಿಸುವಂತಹ ಶಿಕ್ಷೆಗಳು ಜನರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಇದನ್ನೂ ಓದಿ: Sneha Dubey: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದ್ರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ. ಹಾಗಾಗಿ ಯಾರೂ ನಮ್ಮ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಗತ್ಯವಿಲ್ಲ. ನಾವು ಇಸ್ಲಾಂ ಧರ್ಮವನ್ನು ಪಾಲಿಸುತ್ತೇವೆ ಮತ್ತು ಕುರಾನ್ ಆಧಾರದ ಮೇಲೆಯೇ ನಮ್ಮ ಕಾನೂನುಗಳು ರಚನೆಯಾಗಲಿವೆ ಎಂದು ಮುಲ್ಲಾ ನೂರೂದ್ಧೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರದಿ: ಮಹ್ಮದ್​ ರಫೀಕ್​ ಕೆ
Published by:Kavya V
First published: