Afghanistan- 9/11 ದಿನ ಬರಲು ಆಹ್ವಾನಿತರ ನಕಾರ; ತಾಲಿಬಾನ್ ಪದಗ್ರಹಣ ಸಮಾರಂಭ ಮುಂದೂಡಿಕೆ

ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಉಗ್ರರು ದಾಳಿ ಮಾಡಿ ಇವತ್ತಿಗೆ 20 ವರ್ಷಗಳಾಗಿವೆ. ಈ ದಿನ ಇಟ್ಟುಕೊಳ್ಳಲಾಗಿರುವ ತಾಲಿಬಾನ್ ಸರ್ಕಾರದ ಪದಗ್ರಹಣ ಕಾರ್ಯಕ್ರಮವನ್ನು ಅಮೆರಿಕದ ಒತ್ತಡದ ಮೇರೆಗೆ ರದ್ದು ಮಾಡಲಾಗಿದೆ.

ತಾಲಿಬಾನ್ ಮುಖಂಡರು

ತಾಲಿಬಾನ್ ಮುಖಂಡರು

 • News18
 • Last Updated :
 • Share this:
  ಕಾಬೂಲ್, ಸೆ. 11: ಅಫ್ಘಾನಿಸ್ತಾನದಲ್ಲಿ ಇವತ್ತು ನಡೆಯಬೇಕಿದ್ದ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್ 11 ದಿನವಾದ ಇಂದು ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿ 20 ವರ್ಷವಾಗಿದೆ. ಈ ಶೋಕದ ದಿನದಂದು ತಾಲಿಬಾನ್ ಸರ್ಕಾರ ರಚಿಸುತ್ತಿರುವುದಕ್ಕೆ ಅಮೆರಿಕ ಆಕ್ಷೇಪಿಸಿದೆ. ಕಾರ್ಯಕ್ರಮ ರದ್ದು ಮಾಡುವಂತೆ ಅಮೆರಿಕ ಹಾಗೂ ನ್ಯಾಟೋ ಮೈತ್ರಿ ರಾಷ್ಟ್ರಗಳು ಕತಾರ್ ದೇಶದ ಮೇಲೆ ಒತ್ತಡ ಹಾಕಿವೆ. ಕತಾರ್​ನ ಒತ್ತಡಕ್ಕೆ ಮಣಿದು ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಸಮಾರಂಭವನ್ನ ಮುಂದೂಡಬೇಕಾಯಿತು ಎನ್ನಲಾಗಿದೆ. ಇದೇ ವೇಳೆ, ತಾಲಿಬಾನ್ ನಿರ್ಧಾರಕ್ಕೆ ಇನ್ನೂ ಒಂದು ಕಾರಣವಿದೆ. ಪದಗ್ರಹಣ ಸಮಾರಂಭಕ್ಕೆ ತಾಲಿಬಾನ್ ಆಹ್ವಾನ ನೀಡಿದ ರಾಷ್ಟ್ರಗಳು ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕಿವೆ. ಇದರಿಂದಲೂ ಕೂಡ ತಾಲಿಬಾನ್ ಇವತ್ತಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಮುಂದೂಡಿದೆ.

  ತಾಲಿಬಾನ್ ತನ್ನ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಚೀನಾ, ರಷ್ಯಾ, ಇರಾನ್, ಟರ್ಕಿ ಮತ್ತು ಕತಾರ್ ದೇಶಗಳಿಗೆ ಆಹ್ವಾನ ನೀಡಿತ್ತು. ರಷ್ಯಾ ದೇಶ ತಾನು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಸ್ಪಷ್ಟವಾಗಿ ಹೇಳಿತ್ತು. ರಾಜತಾಂತ್ರಿಕ ಮಟ್ಟದ ಅಧಿಕಾರಿಗಳು ತಮ್ಮ ದೇಶದ ಪ್ರತಿನಿಧಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಷ್ಯಾ ಹೇಳಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಷ್ಯಾ ತನ್ನ ನಿರ್ಧಾರ ಬದಲಿಸಿದೆ. ಚೀನಾ ಮೊದಲಾ ದೇಶಗಳೂ ಕೂಡ ತಮ್ಮ ಪಾಲ್ಗೊಳ್ಳುವಿಕೆಯನ್ನ ಖಚಿತಪಡಿಸಲಿಲ್ಲ. ಹೀಗಾಗಿ, ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಕಾರ್ಯಕ್ರಮ ಮುಂದೂಡುವುದು ಅನಿವಾರ್ಯವಾಯಿತೆನ್ನಲಾಗಿದೆ.

  ಕುತೂಹಲವೆಂದರೆ, 2001, ಸೆಪ್ಟೆಂಬರ್ 11ರಂದು ಅಲ್​-ಖೈದಾ ಉಗ್ರಗಾಮಿಗಳು ಅಮೆರಿಕದ ಎರಡು ಕಟ್ಟಡಗಳ ಮೇಲೆ ವಿಮಾನಗಳನ್ನ ಅಪ್ಪಳಿಸಿದ್ದರು. ಈ ಘೋರ ಘಟನೆಯಲ್ಲಿ ಸಾವಿರಾರು ಜನರು ಅಸುನೀಗಿದ್ದರು. ಅಮೆರಿಕದ ಮೇಲೆ ಉಗ್ರರು ಕೊಟ್ಟ ಕಟು ಸಂದೇಶ ಅದು ಎಂದು ಪರಿಗಣಿತವಾಗಿತ್ತು. ಒಸಾಮ ಬಿನ್ ಲಾಡೆನ್ ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅಲ್-ಖೈದಾ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ಕೊಟ್ಟಿದೆ ಎನ್ನಲಾಯಿತು. ಆಗ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿದ್ದದ್ದು ಇದೇ ತಾಲಿಬಾನ್. ಅಮೆರಿಕ ಕ್ಷಿಪ್ರ ಸೇನಾ ಕಾರ್ಯಾಚರಣೆ ನಡೆಸಿ ತಾಲಿಬಾನ್ ಪಡೆಯನ್ನ ಸೋಲಿಸಿ ಅಧಿಕಾರದಿಂದ ಕೆಳಗಿಳಿಸಿತ್ತು. ಹೀಗಾಗಿ, ತಾಲಿಬಾನ್ ಪತನದ ಹಿಂದೆ 9/11 ದಿನ ಅಡಗಿದೆ. ಇದೇ ದಿನ ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಮಾಡಲು ಹೊರಟಿದ್ದು ತನ್ನ ವಿರುದ್ಧ ತಾಲಿಬಾನ್ ಯಾವುದೋ ಸಂದೇಶ ರವಾನಿಸುತ್ತಿರುವಂತಿದೆ ಎಂಬುದು ಅಮೆರಿಕದ ಅನುಮಾನ. ಹೀಗಾಗಿ, ತಾಲಿಬಾನ್ ಹಾಗೂ ಅಮೆರಿಕ ಮಧ್ಯೆ ಕೊಂಡಿಯಾಗಿರುವ ಕತಾರ್ ಮೂಲಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

  ಇದನ್ನೂ ಓದಿ: ನಾಳೆಯಿಂದ ಭಾರತೀಯರು UAEಗೆ ಪ್ರಯಾಣಿಸಬಹುದು; 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ

  ಅಫ್ಘಾನಿಸ್ತಾನವನ್ನು ತಾಲಿಬಾನ್ ಮರುವಶಕ್ಕೆ ಪಡೆದು ಅನೇಕ ದಿನಗಳೇ ಆದರೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ತಾತ್ಕಾಲಿಕವಾದ ಹಂಗಾಮಿ ಸರ್ಕಾರ ರಚನೆ ಅಂತಿಮಗೊಂಡಿದೆ. ಅಧಿಕೃತವಾಗಿ ಪದಗ್ರಹಣ ಆಗಬೇಕಷ್ಟೇ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ವರ್ಗಗಳ, ರಾಜಕೀಯ ಗುಂಪುಗಳ, ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ಸರ್ಕಾರವನ್ನು ಕೊಡುವುದಾಗಿ ತಾಲಿಬಾನ್ ಹೇಳಿದೆ. ಅದು ಈ ತಿಂಗಳೋ ಅಥವಾ ಮುಂದಿನ ತಿಂಗಳ ಒಳಗೆಯೋ ಆಗುವ ನಿರೀಕ್ಷೆ ಇದೆ.

  1996ರಲ್ಲಿ ತಾಲಿಬಾನ್ ಮೊದಲು ಅಧಿಕಾರಕ್ಕೆ ಏರಿದ್ದಾಗ ಬಹಳ ಉಗ್ರರೂಪದ ಸರ್ಕಾರ ನೀಡಿದ್ದರು. ಮಹಿಳೆಯರು ಹೊರಗೆ ಬರುವುದಕ್ಕೂ ನಿರ್ಬಂಧಗಳನ್ನ ವಿಧಿಸಲಾಗಿತ್ತು. ಶರಿಯಾ ಕಾನೂನುಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಕಲ್ಲು ಹೊಡೆದು ಸಾಯಿಸುವಂಥ ಅಮಾನವೀಯ ಹಾಗೂ ಘೋರ ಶಿಕ್ಷೆಗಳು ಚಾಲನೆಯಲ್ಲಿದ್ದವು. ಹೀಗಾಗಿ, ತಾಲಿಬಾನ್ ಈಗ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಬಹಳಷ್ಟು ಜನರು ಭಯಭೀತಗೊಂಡಿದ್ದಾರೆ. ತಾಲಿಬಾನ್ ಈ ಬಾರಿ ತಾನು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ. ಎಲ್ಲರ ವಿಶ್ವಾಸ ಗಳಿಸಿ ಮುನ್ನಡೆಯುತ್ತೇವೆ. ಮಹಿಳೆಯರಿಗೆ ಶರಿಯಾ ಕಾನೂನಿನಡಿ ಸಿಗುವ ಎಲ್ಲಾ ಸ್ವಾತಂತ್ರ್ಯವನ್ನು ಕೊಡುತ್ತೇವೆ ಎಂದು ತಾಲಿಬಾನ್ ಹೇಳಿದೆ.
  Published by:Vijayasarthy SN
  First published: