Taliban bans women's sports| ಇಸ್ಲಾಂ ವಸ್ತ್ರ ಸಂಹಿತೆಯನ್ನು ಉಲ್ಲೇಖಿಸಿ ಮಹಿಳೆಯರಿಗೆ ಎಲ್ಲಾ ಕ್ರೀಡೆಗಳನ್ನೂ ನಿಷೇಧಿಸಿದ ತಾಲಿಬಾನ್

ತಾಲಿಬಾನಿಗಳ ವಿರುದ್ಧ, ಶಿಕ್ಷಣ ಮತ್ತು ಉದ್ಯೋಗದ ಹಕ್ಕಿಗಾಗಿ ಮಹಿಳೆಯರು ಬುಧವಾರ ಅಫ್ಘಾನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವಿಡಿಯೊ, ಫೋಟೋಗಳು ಹೊರ ಬರದಂತೆ ತಡೆದ ತಾಲಿಬಾನಿಗಳು, ಪ್ರತಿಭಟನೆಯ ವರದಿ ಮಾಡಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅಫ್ಘನ್​ ಮಹಿಳೆಯರು.

ಅಫ್ಘನ್​ ಮಹಿಳೆಯರು.

  • Share this:
    ಕಾಬೂಲ್ (ಸೆಪ್ಟೆಂಬರ್ 09); ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ. ಇಡೀ ವಿಶ್ವವೇ ವಿರೋಧಿಸಿದ್ದರೂ ಸಹ ಹೊಸ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ ಜನಪರ ಸರ್ಕಾರವನ್ನು ನೀಡುತ್ತೇವೆ ಎಂದು ತಾಲಿಬಾನಿಗಳು ಮಾತು ನೀಡಿದ್ದರು. ಆದರೆ, ಇದೀಗ  ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಹೊಸ ಸರ್ಕಾರವನ್ನು ರಚನೆ ಮಾಡಿದ್ದಾರೆ. ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್ ಅಧಿಕಾರಕ್ಕೆ ಏರಲಿರುವುದು ಬಹುತೇಕ ಖಚಿತವಾಗಿದೆ. ಆದರೆ, ಇದೇ ವೇಳೆ ಇಸ್ಲಾಂ ವಸ್ತ್ರ ಸಂಹಿತೆಯನ್ನು ಉಲ್ಲೇಖಿಸಿರುವ ಅಫ್ಘಾನ್ ಸರ್ಕಾರ ಮಹಿಳೆಯರನ್ನು ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಿಂದ ನಿಷೇಧಿಸಿ ಆದೇಶಿಸಿದೆ.

    ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್, ಹಲವು ಇಲಾಖೆಗಳಿಗೆ ಸಚಿವರನ್ನು ನೇಮಿಸಿದೆ. ಆದರೆ, ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರನ್ನು ಸಂಪೂರ್ಣವಾಗಿದೆ ನಿಷೇಧಿಸಿದೆ. ಈ ವಿಚಾರ ಇದೀಗ ದೊಡ್ಡ ಚರ್ಚೆಗೂ ಕಾರಣವಾಗಿದೆ.

    ಆಸ್ಟ್ರೇಲಿಯಾದ ಎಸ್‌ಬಿಎಸ್ ಟಿವಿಗೆ ಹೇಳಿಕೆ ನೀಡಿರುವ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, "ಕ್ರಿಕೆಟ್‌ನಲ್ಲಿ, ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿಯನ್ನು ಎದುರಿಸಬಹುದು. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ" ಎಂದು ಹೇಳಿದ್ದಾರೆ.

    "ಇದು ಮಾಧ್ಯಮದ ಯುಗ, ಕ್ರೀಡೆಯ ಫೋಟೋಗಳು ಮತ್ತು ವಿಡಿಯೊಗಳು ಹರಿದಾಡುತ್ತವೆ. ಅದನ್ನು ಜನರು ನೋಡುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರ ಮುಖ ಮತ್ತು ದೇಹ ಕಾಣಿಸುವಂತಹ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ" ಎಂದಿದ್ದಾರೆ.

    20 ವರ್ಷಗಳ ಬಳಿಕ ಮಂಗಳವಾರ (ಸೆ.7) ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಪುರುಷರ ಸರ್ಕಾರ ರಚಿಸಿದ್ದು, ಕ್ಯಾಬಿನೆಟ್ ಕೂಡ ರಚಿಸಿದೆ. ಆದರೆ, ತಮ್ಮ ಸಂಪುಟದಲ್ಲಿ ಒಂದೇ ಒಂದು ಸ್ಥಾನವನ್ನು ಮಹಿಳೆಯರಿಗೆ ನೀಡಿಲ್ಲ. ಇದು ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡಿದೆ.

    ಈ ಹಿಂದೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ, "ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕೆಲಸಕ್ಕೆ ಹೋಗಬಾರದು, ನಮ್ಮ ಸೈನಿಕರ ಗುಂಪು ಇನ್ನು ಹಳೆಯ ಮನಸ್ಥಿತಿಯಲ್ಲಿಯೇ ಇದೆ. ಹೊಸ ಬದಲಾವಣೆ ಬರಲು ಸಮಯ ಬೇಕಾಗಿದೆ" ಎಂದಿದ್ದರು.

    ಇದನ್ನೂ ಓದಿ: India vs England| ರಹಾನೆ, ಜಡೇಜಾಗೆ ರೆಸ್ಟ್​ ನೀಡಿ, ಹನುಮ ವಿವಾರಿ-ಅಶ್ವಿನ್​ಗೆ ಅವಕಾಶ ನೀಡಬಾರದೇಕೆ?; ವಿವಿಎಸ್​ ಲಕ್ಷ್ಮಣ್

    ತಾಲಿಬಾನಿಗಳ ವಿರುದ್ಧ, ಶಿಕ್ಷಣ ಮತ್ತು ಉದ್ಯೋಗದ ಹಕ್ಕಿಗಾಗಿ ಮಹಿಳೆಯರು ಬುಧವಾರ ಅಫ್ಘಾನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವಿಡಿಯೊ, ಫೋಟೋಗಳು ಹೊರ ಬರದಂತೆ ತಡೆದ ತಾಲಿಬಾನಿಗಳು, ಪ್ರತಿಭಟನೆಯ ವರದಿ ಮಾಡಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
    Published by:MAshok Kumar
    First published: