Selfie Crime - ಈ ಜಿಲ್ಲೆಯಲ್ಲಿ ಸೆಲ್ಫೀ ತೆಗೆಯುವುದು ಕ್ರಿಮಿನಲ್ ಅಪರಾಧ

ಗುಜರಾತ್ನ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿರುವ ದಾಂಗ್ ಜಿಲ್ಲೆಯಲ್ಲಿ ಸೆಲ್ಫೀ ಸಂಬಂಧಿತ ದುರಂತ ಘಟನೆಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸೆಲ್ಫೀ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿವೆ.

ವಿಡಿಯೋದಲ್ಲಿರುವ ಯುವತಿ ಮತ್ತು ಮೇಕೆ

ವಿಡಿಯೋದಲ್ಲಿರುವ ಯುವತಿ ಮತ್ತು ಮೇಕೆ

  • News18
  • Last Updated :
  • Share this:
    ನವದೆಹಲಿ: ಸೆಲ್ಫೀ ತೆಗೆಯಲು ಹೋಗಿ ಸಾವನ್ನಪ್ಪಿದ ಅನೇಕ ದುರಂತ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ನೀವು ಗಮನಿಸಿರಬಹುದು. ರೈಲಿನ ಬಾಗಿಲಿನಿಂದ ಹೊರಚಾಚಿಕೊಂಡು ಸೆಲ್ಫೀ ತೆಗೆಯುವುದು; ಗುಡ್ಡದ ತುತ್ತತುದಿಯಲ್ಲಿ ಕಡಿದಾದ ಭಾಗದ ಮೇಲೆ ನಿಂತು ಪೋಸ್ ಕೊಡುವುದು; ನದಿ ದಂಡೆ ಮೇಲೆ ನಿಂತು ಫೋಟೋ ತೆಗೆದುಕೊಳ್ಳುವುದು ಇತ್ಯಾದಿ ಮಾಮೂಲಿಯ ಸಂಗತಿಗಳಾಗಿವೆ. ಇವು ಅಪಾಯಕಾರಿ ಎನಿಸಿದರೂ ಹುಂಬ ಧೈರ್ಯದಲ್ಲಿ ಜನರು ಸೆಲ್ಫೀ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಸೆಲ್ಫೀ ತೆಗೆದುಕೊಳ್ಳುವಾಗ ಸಾವನ್ನಪ್ಪುವವರು ಜಗತ್ತಿನೆಲ್ಲೆಡೆ ಕಾಣಸಿಗುತ್ತಾರಾದರೂ ಭಾರತದಲ್ಲೇ ಇದು ಹೆಚ್ಚು. ಭಾರತ ಬಿಟ್ಟರೆ ರಷ್ಯಾ, ಅಮೆರಿಕ, ಪಾಕಿಸ್ತಾನ ದೇಶಗಳು ನಂತರದ ಸ್ಥಾನದಲ್ಲಿವೆ. ಪ್ರವಾಸಕ್ಕೆ ಹೋಗುವ ಜನರೇ ಹೆಚ್ಚಾಗಿ ಈ ರೀತಿ ಸೆಲ್ಫೀ ಹುಚ್ಚಿಗೆ ಜೀವವನ್ನೇ ಬಲಿಕೊಡುತ್ತಾರೆ. ವಿಶ್ವದ ಕೆಲ ಜನಪ್ರಿಯ ಪ್ರವಾಸೀ ತಾಣಗಳಲ್ಲಿ ಈ ರೀತಿ ಸೆಲ್ಫೀ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಭಾರತದ ಗುಜರಾತ್ ರಾಜ್ಯದ ದಾಂಗ್ ಎಂಬ ಜಿಲ್ಲೆಯಲ್ಲೂ ಇಂಥದ್ದೊಂದು ಕಠಿಣ ನಿಯಮಗಳಿವೆ.

    ಪ್ರವಾಸಿಗರ ಆಕರ್ಷಣೆಯಾಗಿರುವ ದಾಂಗ್ ಜಿಲ್ಲೆಯಲ್ಲಿ ಸಾಪುತರ ಹಿಲ್ ಸ್ಟೇಷನ್, ಫಾಲ್ಸ್ ಸೇರಿದಂತೆ ಹಲವು ಆಕರ್ಷಕ ಪ್ರವಾಸೀ ತಾಣಗಳಿದ್ದು, ಇಲ್ಲಿ ವರ್ಷವಿಡೀ ಜನರು ಭೇಟಿ ಕೊಡುತ್ತಿರುತ್ತಾರೆ. ಕಳೆದ ಎರಡು ಮೂರು ವರ್ಷಗಳಿಂದಲೂ ಇಲ್ಲಿ ಸೆಲ್ಫೀ ನಿಷೇಧ ಸೇರಿದಂತೆ ವಿವಿಧ ರೀತಿಯ ನಿರ್ಬಂಧಗಳನ್ನ ಹೇರಲಾಗಿದೆ. ಈಗ ಕೋವಿಡ್ ಎರಡನೇ ಅಲೆ ಕಡಿಮೆಯಾಗಿ ಅನ್​ಲಾಕ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಂಗ್ ಜಿಲ್ಲೆಗೆ ಪ್ರವಾಸ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹಲವು ನಿರ್ಬಂಧಗಳನ್ನ ಮತ್ತಷ್ಟು ಕಾಲ ಮುಂದುವರಿಸಲಾಗಿದೆ. ಈ ನಿರ್ಬಂಧಗಳ ಅನ್ವಯ ದಾಂಗ್ ಜಿಲ್ಲೆಯಲ್ಲಿ ಸೆಲ್ಫೀ ತೆಗೆದುಕೊಳ್ಳುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ.

    ಇದನ್ನೂ ಓದಿ: ಕೆನಡಾದಲ್ಲಿ ಕರಗುತ್ತಿವೆ ರಸ್ತೆಗಳು-ಮನೆಗಳು: ಕಾರಣವೇನು ಗೊತ್ತಾ?

    ದಾಂಗ್ ಜಿಲ್ಲೆಯಲ್ಲಿ ಈ ಹಿಂದೆ ಸೆಲ್ಫೀ ಸಂಬಂಧಿಸಿದ ಅನೇಕ ದುರಂತ ಘಟನೆಗಳು ನಡೆದಿದ್ದಿವೆ. ಸಪೂತರದಲ್ಲಿ 2018ರಲ್ಲಿ ಒಬ್ಬ ವ್ಯಕ್ತಿ ಸೆಲ್ಫೀ ತೆಗೆದುಕೊಳ್ಳುವಾಗ ಆಯತಪ್ಪಿ ಕಣಿವೆ ಉರುಳಿಬಿದ್ದು ಸಾವನ್ನಪ್ಪಿದ್ದ. ಅದೇ ವರ್ಷ ಮತ್ತೊಬ್ಬ ವ್ಯಕ್ತಿ ಗಿರಾ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಇನ್ನೂ ಅನೇಕ ಸೆಲ್ಫೀ ಸಂಬಂಧಿತ ಸಾವು ಘಟನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ದಾಂಗ್ ಜಿಲ್ಲಾಡಳಿತ ಕಠಿಣ ಕ್ರಮಗಳನ್ನ ಕೈಗೊಂಡಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Vijayasarthy SN
    First published: