Tajinder Singh Bagga: ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ನಾಯಕನ ಬಂಧಿಸಿದ ಪಂಜಾಬ್​ ಪೊಲೀಸರು

ಪ್ರಕಾಶ್​ ಜಾವಡೇಕರ್​ ಮಾತ್ರವಲ್ಲದೇ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ಬಗ್ಗಾ ಬಂಧನ ಆಕ್ರೋಶ ವ್ಯಕ್ತಪಡಿಸಿದ್ದು, ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರ ಕೃಪೆ- ಎಎನ್​ಐ

ಚಿತ್ರ ಕೃಪೆ- ಎಎನ್​ಐ

 • Share this:
  ನವದೆಹಲಿ (ಮೇ. 6):  ಪಂಜಾಬ್​ನ ಆಮ್​ ಆದ್ಮಿ ಸರ್ಕಾರದ ಮುಖ್ಯಮಂತ್ರಿ ಭಗವಂತ್​​​ ಮಾನ್​ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal)​ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕ ತಜೀಂದರ್​​ ಪಾಲ್​ ಬಗ್ಗಾ (Tajinder Singh Bagga) ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಮೂಲಕ ಪಂಜಾಬ್​ನಲ್ಲಿ ಮತ್ತೊಮ್ಮೆ ಬಿಜೆಪಿ ಮತ್ತು ಎಎಪಿ ನಡುವಿನ ತಿಕ್ಕಾಟ ಶುರುವಾಗಿದೆ.

  ಕೋಮು ಪ್ರಚೋದಕ ಹೇಳಿಕೆ ಆರೋಪ
  ಕೋಮು ಪ್ರಚೋದಕ ಹೇಳಿಕೆಗಳು, ಧಾರ್ಮಿಕ ದ್ವೇಷ ಉತ್ತೇಜಿಸುವ ಭಾಷಣ ಆರೋಪದ ಮೇಲೆ ಅವರಿಗೆ ಹಲವು ಬಾರ ನೋಟಿಸ್​ ನೀಡಲಾಗಿದೆ. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನಲೆ ಅವರನ್ನು ನವದೆಹಲಿಯ ಜನಕಪುರಿಯಲ್ಲಿದ್ದ ಅವರ ನಿವಾಸದಿಂದಲೇ ಬಂಧಿಸಿ ಪಂಜಾಬ್​​ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಪಂಜಾಬ್​ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸ್​

  ದೆಹಲಿಗೆ ಬಂದು ಪಂಜಾಬ್​ ಪೊಲೀಸರು ಬಿಜೆಪಿ ನಾಯಕನ ಬಂಧಿಸಿರುವ ಹಿನ್ನಲೆ ಪಂಜಾಬ್​ ಪೊಲೀಸರ ವಿರುದ್ಧ ದೆಹಲಿ ಪೊಲೀಸರು ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ. ಬಗ್ಗಾ ಅವರ ತಂದೆ ದೂರಿನ ಮೇಲೆ ದೆಹಲಿ ಪೊಲೀಸರು ಈ ಪ್ರಕರಣ ದಾಖಲು ಮಾಡಿದ್ದಾರೆ ಇನ್ನು ಈ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಇದು ಅರವಿಂದ್​ ಕೇಜ್ರಿವಾಲ್​ ದ್ವೇಷಪೂರಿತ ರಾಜಕೀಯ ಎಂದು ಆರೋಪಿಸಿದೆ.

  ಕೇಜ್ರಿವಾಲ್​ ಅರಾಜಕತೆಗೆ ಇದು ಸಾಕ್ಷಿಎಂದ ಬಿಜೆಪಿ 
  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಟ್ವೀಟ್ ಮಾಡಿದ್ದು, ಸುಳ್ಳು ಪ್ರಕರಣದಲ್ಲಿ, ಬಿಜೆಪಿ ಕಾರ್ಯಕರ್ತ ತಜೀಂದರ್ ಬಗ್ಗಾ ಅವರನ್ನು ದೆಹಲಿ ಪೊಲೀಸರಿಗೆ ತಿಳಿಸದೆ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕೇಜ್ರಿವಾಲ್ ತನ್ನನ್ನು ಅರಾಜಕತಾವಾದಿ ಎಂದು ಕರೆದುಕೊಂಡಿದ್ದಾರೆ. ರಾಜಧಾನಿಯಲ್ಲಿ ಈ ಅರಾಜಕತೆ ಪ್ರತಿದಿನವೂ ಕಂಡುಬರುತ್ತದೆ ಎಂದು ಟೀಕಿಸಿದ್ದಾರೆ.

  ಪ್ರಕಾಶ್​ ಜಾವಡೇಕರ್​ ಮಾತ್ರವಲ್ಲದೇ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ಬಗ್ಗಾ ಬಂಧನ ಆಕ್ರೋಶ ವ್ಯಕ್ತಪಡಿಸಿದ್ದು, ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದಾರೆ.

  ಇದನ್ನು ಓದಿ: ವಿಪರೀತ ಬಿಸಿ, ಶಾಲೆಗಳಿಗೂ ಇನ್ನು ಡಬಲ್ ಶಿಫ್ಟ್

  ಪಂಜಾಬ್​ ಪೊಲೀಸರಿಗೆ ಹರಿಯಾಣದಲ್ಲಿ ತಡೆ
  ತಜೀಂದರ್ ಬಗ್ಗಾವನ್ನು ಮೊಹಾಲಿಗೆ ಕರೆದೊಯ್ಯುತ್ತಿದ್ದ ವೇಳೆ ಪಂಜಾಬ್ ಪೊಲೀಸ್ ತಂಡವನ್ನು ಕುರುಕ್ಷೇತ್ರದಲ್ಲಿ ಹರಿಯಾಣ ಪೊಲೀಸರು ತಡೆದಿದ್ದಾರೆ. ಈ ವೇಳೇ ಪೊಲೀಸ್ ಬೆಂಗಾವಲು ಪಡೆಯನ್ನು ಮುಂದೆ ಹೋಗಲು ಬಿಡದೇ, ವಿಚಾರಣೆಗಾಗಿ ಪಕ್ಕಕ್ಕೆ ಎಳೆದರು. ದೆಹಲಿ ಪೊಲೀಸರ ಮಾತಿನ ಬಳಿಕ ನಿಲ್ಲಿಸಲಾಯಿತು ಎಂದು ಹರಿಯಾಣ ಪೊಲೀಸ್ ಮೂಲಗಳು ತಿಳಿಸಿವೆ.

  ಬಗ್ಗಾ ಬಂಧನ ಸಮರ್ಥಿಸಿಕೊಂಡ ಆಮ್​ ಆದ್ಮಿ ಪಕ್ಷದ ನಾಯಕರು
  ಬಗ್ಗಾ ವಿರುದ್ಧ , ಪಂಜಾಬ್ ಪೊಲೀಸರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು ದಾಖಲಿಸಿದ್ದಾರೆ. ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಬಂಧಿತರ ತಜೀಂದರ್​ ಬಗ್ಗಾ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನು ಓದಿ: Covid ಸಾವುಗಳ‌ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ: ರಾಹುಲ್ ಗಾಂಧಿ ಟೀಕೆ

  ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿರುವ ಆಮ್​ ಆದ್ಮಿ ಪಕ್ಷದ ನಾಯಕರು ತಜೀಂದರ್​ ಬಗ್ಗಾ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಪಂಜಾಬ್ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ . ಕೋಮು ಪ್ರಚೋದನೆ ಪ್ರಕರಣದಲ್ಲಿ ಈಗಾಗಲೇ ಬಗ್ಗಾ ಅವರಿಗೆ ಐದು ಬಾರಿ ನೋಟಿಸ್ ಕಳುಹಿಸಿದರೂ ತನಿಖೆಗೆ ಸಹಕರಿಸಲು ಅವರು ನಿರಾಕರಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ. ಬಗ್ಗಾ ಅವರು ಅಶ್ಲೀಲ, ವಿಷಕಾರಿ ಮತ್ತು ದ್ವೇಷಪೂರಿತ ಭಾಷೆಯನ್ನು ಬಳಸುತ್ತಾರೆ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ
  Published by:Seema R
  First published: