ನವದೆಹಲಿ(ಜೂ.15): ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಸದ್ಯ ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಗ್ರಾದಲ್ಲಿರುವ ಪ್ರೇಮ ಸ್ಮಾರಕ ತಾಜ್ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಬುಧವಾರದಿಂದ(ಜೂ.16) ಮತ್ತೆ ತೆರೆಯಲಾಗುತ್ತಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಸುಮಾರು 2 ತಿಂಗಳ ಬಳಿಕ ಪ್ರವಾಸಿಗರಿಗೆ ತಾಜ್ಮಹಲ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಾಜ್ಮಹಲ್ನ್ನು ಕೊರೋನಾ ಕಾರಣದಿಂದಾಗಿ ಎರಡನೇ ಬಾರಿಗೆ ಏಪ್ರಿಲ್ 4ರಿಂದ ಮುಚ್ಚಲಾಗಿತ್ತು. ಕಳೆದ ವರ್ಷ ಕೂಡ ಕೋವಿಡ್ ಹೆಚ್ಚಾಗಿದ್ದರಿಂದ ತಾಜ್ಮಹಲ್ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ತಾಜ್ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಮಾರಕದ ಯಾವುದೇ ಭಾಗವನ್ನು ಮುಟ್ಟಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಭಾರತೀಯ ಪುರಾತತ್ವ ಸಮೀಕ್ಷೆ ಹೇಳಿದೆ.
ಇದನ್ನೂ ಓದಿ:ಲಾಕ್ಡೌನ್ನಿಂದ ಕೊಳೆಯುತ್ತಿವೆ ರುಚಿಕರ ಮಾವು: ಫೇಮಸ್ ಹುಲಕೋಟಿ ಮಾವನ್ನು ಕೇಳೋರಿಲ್ಲ!
ಸಂದರ್ಶಕರು ಆನ್ಲೈನ್ನಲ್ಲಿ ಪ್ರವೇಶ ಟಿಕೆಟ್ಗಳನ್ನು ಕಾಯ್ದಿರಿಸಬೇಕು, ಯಾವುದೇ ಆಫ್ಲೈನ್ ಬುಕ್ಕಿಂಗ್ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ಕೇಂದ್ರೀಕೃತ ಸ್ಮಾರಕಗಳು, ತಾಣಗಳು ಹಾಗೂ ವಸ್ತು ಸಂಗ್ರಹಾಲಯಗನ್ನು ಜೂನ್ 16ರಿಂದ ತೆರೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಆದೇಶದಲ್ಲಿ ತಿಳಿಸಿದ್ದಾರೆ.
All CPMs, sites & Museums under @ASIGoI to be opened from 16th June 2021. The opening will be in strict compliance with local administration orders. https://t.co/B9ZVAGeCDr
— Archaeological Survey of India (@ASIGoI) June 14, 2021
ಮೊಘಲ್ ದೊರೆ ಶಹಜಾನ ಪ್ರೀತಿಯ ಸಂಕೇತವಾಗಿ ತನ್ನ ಮಡದಿಗಾಗಿ ಕಟ್ಟಿಸಿದ ಪ್ರೇಮ ಸ್ಮಾರಕ ತಾಜ್ಮಹಲ್. ಕಳೆದ ವರ್ಷ ಕೊರೋನಾ ಮಹಾಮಾರಿ ಮೊದಲ ಬಾರಿಗೆ ಭಾರತಕ್ಕೆ ಅಪ್ಪಳಿಸಿದಾಗ, ತಾಜ್ಮಹಲ್ನ್ನು ಮುಚ್ಚಲಾಗಿತ್ತು. ಕ್ರಮೇಣ, ಕೊರೋನಾ ಪ್ರಕರಣಗಳು ಇಳಿಕೆಯಾದ ಬಳಿಕ ಸೆಪ್ಟೆಂಬರ್ನಲ್ಲಿ ಮತ್ತೆ ತೆರೆದು ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ:ಕೊಡಗು: ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವವರಿಗೆ ವ್ಯಾಕ್ಸಿನ್ ವಿತರಣೆ
ತಾಜ್ಮಹಲ್ನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ವಿಶ್ವದ 7 ಅದ್ಭುತಗಳಲ್ಲಿ ಇದೂ ಸಹ ಒಂದಾಗಿದೆ. ಈ ಸ್ಮಾರಕವನ್ನು ನಿರ್ಮಿಸಲು ಸುಮಾರು 20 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಅಂತಿಮವಾಗಿ 1653ರಲ್ಲಿ ಮುಕ್ತಾಯಗೊಂಡು, ಅಲ್ಲಿಂದ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಯಿತು.
ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಪ್ರೇಕ್ಷಣೀಯ ಸ್ಥಳಗಳಾದ ಕೆಂಪುಕೋಟೆ, ತಾಜ್ಮಹಲ್, ಅಜಂತಾ ಗುಹೆ ಸೇರಿದಂತೆ ಎಲ್ಲಾ ಕೇಂದ್ರೀಕೃತ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್ 15ರಿಂದ ಮುಚ್ಚಲು ಸರ್ಕಾರ ಆದೇಶಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ