ಕೊರೊನಾ ಕಾರಣದಿಂದ ನಿರ್ಬಂಧಿಸಲಾಗಿದ್ದ ತಾಜ್ ಮಹಲ್ ರಾತ್ರಿಯ ವೀಕ್ಷಣೆಯನ್ನು ಶನಿವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ. ರಾತ್ರಿ ವೀಕ್ಷಣೆಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಿದ್ದ ತಾಜ್ ಮಹಲ್ ಅನ್ನು ಚಂದ್ರನ ಬೆಳಕಿನಲ್ಲಿ ನೋಡಲು ಬರುವ ಪ್ರವಾಸಿಗರಿಗಾಗಿ ಆಗಸ್ಟ್ 21 ರಿಂದ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಮೊದಲ ಲಾಕ್‌ಡೌನ್ ಸಮಯದಲ್ಲಿ ಸ್ಮಾರಕದ ರಾತ್ರಿ ವೀಕ್ಷಣೆಯನ್ನು ಮಾರ್ಚ್ 17, 2020 ರಿಂದ ನಿರ್ಬಂಧಿಸಲಾಗಿತ್ತು. ಇನ್ನು ರಾತ್ರಿ ತಾಜ್ ಮಹಲ್ ನೋಡಲು ಆಗಸ್ಟ್ 21, 23 ಮತ್ತು 24 ರಂದು ಅವಕಾಶವಿದೆ. ಶುಕ್ರವಾರ ತಾಜ್ ಮಹಲ್ ವೀಕ್ಷಣೆಗೆ ಮೊದಲಿನಿಂದಲೂ ಅವಕಾಶವಿಲ್ಲ, ಹಾಗೂ ಭಾನುವಾರ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ) ವಸಂತ ಕುಮಾರ್ ಸ್ವರ್ಣಕರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರವಾಸಿಗರಿಗೆ 8: 30 ರಿಂದ 9 ಗಂಟೆ, 9 ರಿಂದ 9.30 pm ಮತ್ತು 9: 30-10. ಹೀಗೆ ಮೂರು ವಿವಿಧ ಸಮಯದಲ್ಲಿ ತಾಜ್ ಮಹಲ್ ವೀಕ್ಷಣೆಗೆ ಅವಕಾಶವಿದೆ ಎಂದು ಅವರು ಹೇಳಿದರು.
ಪ್ರತಿ ಸ್ಲಾಟ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ 50 ಪ್ರವಾಸಿಗರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಆಗ್ರಾದಲ್ಲಿ 22 ಮಾಲ್ ರಸ್ತೆಯಲ್ಲಿರುವ ಎಎಸ್‌ಐ ಕಚೇರಿಯ ಕೌಂಟರ್‌ನಿಂದ ಒಂದು ದಿನ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಶ್ರೀ ಕುಮಾರ್ ತಿಳಿಸಿದ್ದಾರೆ. \
ಇದನ್ನೂ ಓದಿ: 1 ಕೋಟಿ ಯುವಜನತೆಗೆ ಉಚಿತ ಸ್ಮಾರ್ಟ್ಫೋನ್, ಸರ್ಕಾರಿ ಉದ್ಯೋಗಿಗಳಿಗೂ ಗುಡ್ನ್ಯೂಸ್ ಕೊಟ್ಟ ಯುಪಿ ಸಿಎಂ
ಆಗ್ರಾ ಪ್ರವಾಸೋದ್ಯಮ ಸಂಘದ ಉಪಾಧ್ಯಕ್ಷರಾದ ರಾಜೀವ್ ಸಕ್ಸೇನಾ ಪ್ರಕಾರ ಭಾನುವಾರ ಲಾಕ್‌ಡೌನ್ ಮತ್ತು ರಾತ್ರಿ 10 ಗಂಟೆಯ ನಂತರ ಕರ್ಫ್ಯೂ ಅನ್ನು ತೆಗೆದುಹಾಕುವವರೆಗೆ ವಾರಾಂತ್ಯದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವುದು ಕಷ್ಟ. ಪ್ರವಾಸಿಗರು ನಗರದ ರಾತ್ರಿ ಜೀವನವನ್ನು ಆನಂದಿಸಲು ಬಯಸುತ್ತಾರೆ ಅವರು ರಾತ್ರಿ 10 ಗಂಟೆಯ ನಂತರ ತಮ್ಮ ಹೋಟೆಲ್‌ಗಳಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಲು ಬಯಸುವುದಿಲ್ಲ, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಅನುಮೋದಿತ ಪ್ರವಾಸ ಮಾರ್ಗದರ್ಶಿ ಮೋನಿಕಾ ಶರ್ಮಾ ಈ ಕ್ರಮವನ್ನು ಶ್ಲಾಘಿಸಿದ್ದು ಮತ್ತು ಇದು ಆಗ್ರಾ ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನದ ಭರವಸೆಯ ಕಿರಣ ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಸಮಯದಲ್ಲಿ ತಾಜ್ ಮಹಲ್ ಸೇರಿದಂತೆ ಉತ್ತರ ಪ್ರದೇಶದ ಹಲವು ಪ್ರವಾಸಿ ತಾಣಗಳನ್ನ ಮೇಲೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ತಾಜ್ ಮಹಲ್ ರಾತ್ರಿಯ ವೀಕ್ಷಣೆಯನ್ನು ಮೊದಲ ಲಾಕ್‌ಡೌನ್ ಸಮಯದಿಂದಲೂ ನಿಲ್ಲಿಸಲಾಗಿತ್ತು, ಆದರೆ ಇದಿಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದ ಕಾರಣ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುವ ಹಿನ್ನಲೆ ಅವಕಾಶ ನೀಡಲಾಗಿದೆ. ಇನ್ನು ದೇಶದಲ್ಲಿ ಈಗಾಗಲೆ ಮೂರನೇ ಅಲೆಯ ಭೀತಿ ಆರಂಭವಾಗಿದ್ದು, ಕೆಲ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹಾಗೆಯೆ ಸುಪ್ರೀಂ ಕೋರ್ಟ್ ಪ್ರವಾಸಿ ತಾಣಗಳಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಕೊರೊನಾ ನಿಯಮಗಳನ್ನು ಪಾಲನೆ ಮಾಡುವಂತೆ ಆದೇಶ ಹೊರಡಿಸಿದ್ದು, ಅವುಗಳ ಪಾಲನೆ ಕಡ್ಡಾಯ ಎಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ