ನವದೆಹಲಿ (ಸೆ. 21): ಪ್ರೇಮಸೌಧ ಎಂದೇ ಜಗದ್ವಿಖ್ಯಾತಿ ಗಳಿಸಿರುವ ಐತಿಹಾಸಿಕ ತಾಜ್‍ಮಹಲ್ ಮತ್ತು ಆಗ್ರಾ ಕೋಟೆಯನ್ನು ನೋಡಲು ಇಂದಿನಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕೊರೋನಾ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ತಾಜ್‍ಮಹಲ್ ಭೇಟಿಗೆ ನಿಷೇಧ ಹೇರಲಾಗಿತ್ತು. ಈಗ 6 ತಿಂಗಳ ಬಳಿಕ ತಾಜಮಹಲ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರತಿದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳ ಪ್ರವೇಶ ಮುಕ್ತವಾಗಿದೆ. ಆದರೆ, ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹೆಚ್ಚುತ್ತಿದೆ.
ಹೀಗಾಗಿ ತಡವಾಗಿ ತಾಜ್‍ಮಹಲ್ ಮತ್ತು ಆಗ್ರಾ ಕೋಟೆಗಳಿಗೆ ಅವಕಾಶ ನೀಡಲಾಗುವುದು ಎಂದು ಆಗ್ರಾದ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅಂತೆಯೇ, ಇಂದಿನಿಂದ ತಾಜ್ ಮಹಲ್ ಮತ್ತು ಆಗ್ರಾ ಕೋಟೆಗಳಿಗೆ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಎಲ್ಲಾ ಸ್ಮಾರಕಗಳನ್ನು ಸೆಪ್ಟೆಂಬರ್ 1ರಿಂದಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು.
ಈಗಲೂ ಕೊರೊನಾ ಹರಡುವಿಕೆ ನಿಲ್ಲದ ಕಾರಣ ದಿನವೊಂದಕ್ಕೆ ಕೇವಲ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಆಗ್ರಾ ಕೋಟೆಗೆ ದಿನವೊಂದಕ್ಕೆ 2,500 ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಹರಡುವಿಕೆ ಈಗಲೂ ಕಡಿಮೆಯಾಗದ ಕಾರಣದಿಂದ ಪ್ರವಾಸಿಗರಿಗೆ ಈಗ ಎಲೆಕ್ಟ್ರಾನಿಕ್ ಟಿಕೆಟ್ ನೀಡಲಾಗುವುದು. ಪ್ರವಾಸಿಗರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ