ಭಾರತೀಯ ಮಾಧ್ಯಮದ ಮೇಲೆ ಸೆನ್ಸಾರ್​ ಹೇರಲು ಮುಂದಾದ ಚೀನಾಗೆ ಗೆಟ್​ ಲಾಸ್ಟ್ ಎಂದ ತೈವಾನ್

ಕಮ್ಯುನಿಸ್ಟ್​ ರಾಷ್ಟ್ರವಾಗಿರುವ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)!' ಎಂದು ತೈವಾನ್ ಚೀನಾಗೆ ಕಟು ಸಂದೇಶ ರವಾನಿಸಿದೆ.

ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್

ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್

  • Share this:
ನವದೆಹಲಿ (ಅ. 9): ತೈವಾನ್​ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಭಾರತೀಯ ಮಾಧ್ಯಮಗಳಲ್ಲೂ ಪುಟಗಟ್ಟಲೆ ಜಾಹೀರಾತು ಪ್ರಕಟವಾಗಿತ್ತು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ತೈವಾನ್​ ಮತ್ತು ಭಾರತವೆರಡೂ ಜೊತೆಗಾರರು ಎಂದು ತೈವಾನ್ ಸರ್ಕಾರದ ಜಾಹೀರಾತು ಭಾರತೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆ ವಿಷಯವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಭಾರತೀಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಜಗತ್ತಿನಲ್ಲಿರುವುದು ಒಂದೇ ಚೀನಾ. ತೈವಾನ್ ಒಂದು ರಾಷ್ಟ್ರವಲ್ಲ. ಅದು ಚೀನಾದ ಭಾಗವಷ್ಟೇ. ಈ ಬಗ್ಗೆ ಭಾರತೀಯ ಮಾಧ್ಯಮಗಳು ತಪ್ಪು ಸಂದೇಶವನ್ನು ರವಾನಿಸಬಾರದು ಎಂದು ತಿಳಿಸಿತ್ತು. ಚೀನಾದ ಈ ಮಾತಿಗೆ ಕಿಡಿಕಾರಿರುವ ತೈವಾನ್​ ಚೀನಾಗೆ 'ಗೆಟ್ ಲಾಸ್ಟ್​' ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದೆ.

ಭಾರತ ಮತ್ತು ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಅನೇಕ ಸೈನಿಕರು ಕೂಡ ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು. ಅದಾದ ಬಳಿಕ ಅನೇಕ ಬಾರಿ ಭಾರತದ ವಿರುದ್ಧ ಚೀನಾ ವಾಕ್ಸಮರ ನಡೆಸಿತ್ತು. ಅದರ ಬೆನ್ನಲ್ಲೇ ತೈವಾನ್​ ರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್ ಭಾವಚಿತ್ರ ಇರುವ ಜಾಹೀರಾತು ಭಾರತೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಚೀನಾ ಮತ್ತೊಮ್ಮೆ ಭಾರತದ ವಿರುದ್ಧ ಮುಗಿಬಿದ್ದಿತ್ತು.

ಇದನ್ನೂ ಓದಿ: ಲಿಬಿಯಾದಿಂದ ಭಾರತಕ್ಕೆ ಹೊರಟಿದ್ದ 7 ಭಾರತೀಯರ ಅಪಹರಣ; ವಿದೇಶಾಂಗ ಸಚಿವಾಲಯ ಮಾಹಿತಿ

ಭಾರತೀಯ ಮಾಧ್ಯಮ ಜಗತ್ತಿಗೆ ತಪ್ಪು ಸಂದೇಶವನ್ನು ರವಾನಿಸಬಾರದು. ತೈವಾನ್ ಒಂದು ದೇಶವೇ ಅಲ್ಲ. ಅದು ರಿಪಬ್ಲಿಕ್ ಆಫ್ ಚೀನಾದ ಒಂದು ಭಾಗ. ಭಾರತೀಯ ಮಾಧ್ಯಮಗಳು ನಿಯಮ ಉಲ್ಲಂಘನೆ ಮಾಡಬಾರದು ಎಂದು ಚೀನಾ ರಾಯಭಾರಿ ಸೂಚಿಸಿದ್ದರು.

ಇದಕ್ಕೆ ಅಷ್ಟೇ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು, 'ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅದಕ್ಕೆ ತನ್ನದೇ ಆದ ಮಾಧ್ಯಮ ಸಿದ್ಧಾಂತಗಳಿವೆ, ಹಾಗೂ ಸ್ವಾತಂತ್ರ್ಯವೂ ಇದೆ. ಆದರೆ, ಕಮ್ಯುನಿಸ್ಟ್​ ರಾಷ್ಟ್ರವಾಗಿರುವ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)!' ಎಂದು ಟ್ವೀಟ್ ಮೂಲಕ ಚೀನಾಗೆ ಉತ್ತರಿಸಿದ್ದಾರೆ.
Published by:Sushma Chakre
First published: