ಶ್ರೀನಗರ್, ಸೆ. 03: ನಿನ್ನೆ ನಿಧನರಾದ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯದ್ ಅಲಿ ಶಾ ಗಿಲಾನಿ (Kashmir Separatist Leader Syed Ali Shah Geelani) ಅವರ ಅಂತ್ಯಕ್ರಿಯೆ ಇಂದು ಬೆಳಗಿನ ಜಾವ 4:37ಕ್ಕೆ ಶ್ರೀನಗರದ ಹೈದರ್ಪುರದಲ್ಲಿ (Hyderpora) ನಡೆಯಿತು. 92 ವರ್ಷದ ಗಿಲಾನಿ ಅವರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಕಾಲದಿಂದಲೂ ಕಿಡ್ನಿ ಕಾಯಿಲೆ (Kidney Disease) ಇತ್ಯಾದಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 10:30ಕ್ಕೆ ಅವರು ಅನಾರೋಗ್ಯ ಕಾರಣದಿಂದಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಕಾಶ್ಮೀರದಲ್ಲಿ ಉಗ್ರವಾದಕ್ಕೆ ನೀರೆರೆದು ಪೋಷಿಸಿದ್ದ ಗಿಲಾನಿ ಅವರ ಅಂತ್ಯಕ್ರಿಯೆ ವೇಳೆ ಹಿಂಸಾಚಾರ ಇತ್ಯಾದಿ ಅವಘಡವಾಗದಂತೆ ತಪ್ಪಿಸಲು ಸರ್ಕಾರ ವಿವಿಧ ಕ್ರಮಗಳನ್ನ (Curfew like Restrictions) ಜರುಗಿಸಿತು.
ಇಂದು ಬೆಳಗ್ಗೆಯಿಂದಲೂ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ. ಕರ್ಫ್ಯೂ ರೀತಿಯ ನಿರ್ಬಂಧಗಳನ್ನ ವಿಧಿಸಿದೆ. ಗಿಲಾನಿ ಅವರ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅವರ ಮನೆಗೆ ಬರುವ ವಿವಿಧ ದಾರಿಗಳನ್ನ ಬಂದ್ ಮಾಡಲಾಗಿತ್ತು. ಅವರ ಹುಟ್ಟೂರು ಇರುವ ಸೋಪುರ್ ಜಿಲ್ಲೆಯಲ್ಲೂ ಬಿಗಿ ನಿರ್ಬಂಧಗಳನ್ನ ಹೇರಲಾಗಿದೆ. ಅಲ್ಲಿಯ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ. ತಮ್ಮ ಇಡೀ ಜೀವಿತಾವಧಿಯಲ್ಲಿ ಕಟ್ಟರ್ ಇಸ್ಲಾಮೀ ತತ್ವವನ್ನು ಪಾಲಿಸುತ್ತಿದ್ದ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ನೇರವಾಗಿ ಬೆಂಬಲ ನೀಡುತ್ತಿದ್ದ ಗಿಲಾನಿ ಅವರ ಸಾವಿನ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ದೊಂಬಿಯಾಗುವುದನ್ನ ತಡೆಯಲು ಸರ್ಕಾರ ಈ ಬಿಗಿಬಂದೋಬಸ್ತ್ ಏರ್ಪಡಿಸಿದೆ ಎನ್ನಲಾಗಿದೆ.
ಪ್ರತ್ಯೇಕ ಕಾಶ್ಮೀರ ರಾಷ್ಟ್ರ ರಚನೆಗೆ ಜೀವಮಾನವಿಡೀ ಪ್ರಯತ್ನ ನಡೆಸಿದ್ದ ಹಾಗೂ ತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕ ಸಯದ್ ಅಲಿ ಶಾ ಗಿಲಾನಿ ಅವರ ನಿಧನಕ್ಕೆ ಹಲವು ಕಾಶ್ಮೀರ ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. “ಗಿಲಾನಿ ಸಾಹೇಬರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅನೇಕ ವಿಚಾರಗಳಲ್ಲಿ ಅವರೊಂದಿಗೆ ಸಹಮತ ಇಲ್ಲದೇ ಹೋದರೂ ಅವರ ಅಚಲ ನಿಲುವು ಹಾಗೂ ನಂಬಿಕೆಯನ್ನ ನಾನು ಗೌರವಿಸುತ್ತೇನೆ. ಅವರಿಗೆ ಅಲ್ಲಾಹು ಜನ್ನತ್ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪ ಇದೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಮುಖ್ಯಸ್ಥ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾರಮುಲ್ಲಾದ ಸೋಪೋರ್ ಪಟ್ಟಣದಲ್ಲಿ ಜನಿಸಿದ ಸಯದ್ ಗೀಲಾನಿ ಅವರು ಕಾಶ್ಮೀರದ ಪ್ರಮುಖ ಪ್ರತ್ಯೇಕತಾವಾದಿ ಮುಖಂಡರ ಸಾಲಿನಲ್ಲಿ ಗುರುತಾಗಿದ್ಧಾರೆ. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ನೀರೆರೆದು ಪೋಷಿಸಿದವರಲ್ಲಿ ಗೀಲಾನಿ ಪ್ರಮುಖರು. ಕಾಶ್ಮೀರದ ಪ್ರತ್ಯೇಕತಾವಾದಿಗಳ ಪೈಕಿ ಅತಿ ಉಗ್ರರೆನಿಸಿದ್ದ ಹಾಗೂ ಪಾಕಿಸ್ತಾನದ ಪರ ನಿಲುವು ಹೊಂದಿದ್ದ ಕೆಲ ನಾಯಕರ ಪೈಕಿ ಅವರೂ ಒಬ್ಬರು.
ಇದನ್ನೂ ಓದಿ: ಬೆಳಗಾವಿ ಪಾಲಿಕೆ ಫೈಟ್- ಬಹಿರಂಗ ಪ್ರಚಾರ ಅಂತ್ಯ- ಬಂಡಾಯ ಅಭ್ಯರ್ಥಿಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್, ಬಿಜೆಪಿ
ಮೊದಲು ಜಮಾತ್-ಎ-ಇಸ್ಲಾಮೀ ಎಂಬ ಕಟ್ಟರ್ ಇಸ್ಲಾಮೀ ಸಂಘಟನೆಯ ಸದಸ್ಯರಾಗಿದ್ದ ಅವರು ನಂತರ ಆಲ್ ಪಾರ್ಟಿ ಹುರಿಯತ್ ಕಾನ್ಫೆರೆನ್ಸ್ನ ಪ್ರಮುಖ ನಾಯಕರಾಗಿ ಬೆಳೆದರು. ಬಳಿಕ ತಮ್ಮದೇ ಬಣದ ಹುರಿಯತ್ ಕಾನ್ಫೆರೆನ್ಸ್ ರಚನೆ ಮಾಡಿದ್ದರು. 1972, 1977, 1987ರಲ್ಲಿ ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಚುನಾಯಿತರಾದ ಅವರು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಧ್ವನಿಯಾಗಿದ್ದರು. ಕಾಶ್ಮೀರದಲ್ಲಿ ಉಗ್ರವಾದ ಮತ್ತು ಉಗ್ರಗಾಮಿಗಳು ದೊಡ್ಡದಾಗಿ ಬೆಳೆಯಲು ಗಿಲಾನಿ ಕಾರಣ ಎಂಬುದು ಉಮರ್ ಅಬ್ದುಲ್ಲಾ ಸೇರಿ ಹಲವು ಮುಖಂಡರ ಅಸಮಾಧಾನವಾಗಿತ್ತು. ವಾಸ್ತವ ಎಂದರೆ ಗಿಲಾನಿ ಅವರು ತಮ್ಮನ್ನು ತಾವು ಭಾರತೀಯ ಎನ್ನುವುದಕ್ಕಿಂತ ಹೆಚ್ಚಾಗಿ ಪಾಕಿಸ್ತಾನೀ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದುಂಟು. ಕಟ್ಟರ್ ಇಸ್ಲಾಮೀ ಮುಖಂಡರಾಗಿದ್ದ ಅವರು ಒಸಾಮ ಬಿನ್ ಲಾಡನ್ ಅವರನ್ನ ಅಮೆರಿಕ ಕೊಂದುಹಾಕಿದಾಗ ಬಲವಾಗಿ ಖಂಡನೆ ಮಾಡಿದ್ದರು. ಅಷ್ಟೇ ಅಲ್ಲ, 2001ರ ಸಂಸತ್ ಭವನ ದಾಳಿಕೋರ ಅಫ್ಜಲ್ ಗುರು, 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯದ್ ಮೊದಲಾದ ಮುಖಂಡರನ್ನು ಅವರಿಗೆ ಗಿಲಾನಿ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು.
ಗಿಲಾನಿ ಪಾಕ್ ಪ್ರೇಮಿಯಾದರೂ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಸ್ವಂತ ನಿರ್ಧಾರ ತೆಗೆದುಕೊಳ್ಳುವುದನ್ನು ವಿರೋಧಿಸಿದ್ದರು. ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಕ್ಕೆ ಪಾಕಿಸ್ತಾನ ಬೆಂಬಲ ಬಹಳ ಮುಖ್ಯವಾದರೂ ಕಾಶ್ಮೀರದ ವಿಚಾರವನ್ನು ನಿರ್ಧರಿಸಬೇಕಿರುವುದು ಕಾಶ್ಮೀರದ ಜನರು ಮಾತ್ರ ಎಂದುದು ಗಿಲಾನಿ ನಿಲುವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ