ಅತ್ಯಾಚಾರ ಆರೋಪಿ ನಿತ್ಯಾನಂದ ಶಿಷ್ಯರು ಅಹ್ಮದಾಬಾದ್​ ಆಶ್ರಮದಿಂದ ತೆರವು; ನೆಲೆ ಹುಡುಕಿ ಮತ್ತೆ ಬೆಂಗಳೂರಿಗೆ

ಸ್ವಾಮಿ ನಿತ್ಯಾನಂದ ಇಲ್ಲಿಂದ ಹೊರಟ ನಂತರ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿಯೇ ಇಲ್ಲ. ಈ ಹಿಂದೆ ತಂದಿದ್ದ ದಿನಸಿ ಪದಾರ್ಥಗಳು ಬಹುತೇಕ ಖಾಲಿಯಾಗಿವೆ. ನಮ್ಮ ಬಳಿ ಹಣವೂ ಇಲ್ಲ, ಅವರ ಆಪ್ತರು ಕೂಡ ಮಾತಿಗೆ ಸಿಗುತ್ತಿಲ್ಲ. ಹೊತ್ತು ಊಟಕ್ಕೂ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಆಶ್ರಮದಲ್ಲಿರುವ ಶಿಷ್ಯರೊಬ್ಬರು.

news18-kannada
Updated:December 2, 2019, 1:05 PM IST
ಅತ್ಯಾಚಾರ ಆರೋಪಿ ನಿತ್ಯಾನಂದ ಶಿಷ್ಯರು ಅಹ್ಮದಾಬಾದ್​ ಆಶ್ರಮದಿಂದ ತೆರವು; ನೆಲೆ ಹುಡುಕಿ ಮತ್ತೆ ಬೆಂಗಳೂರಿಗೆ
ನಿತ್ಯಾನಂದ ಸ್ವಾಮಿ
  • Share this:
ಬೆಂಗಳೂರು: ಸ್ವಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ದೇಶದಿಂದ ಪರಾರಿಯಾಗಿರುವುದು ಹಳೆಯ ವಿಚಾರ. ಬೆಂಗಳೂರಿನಿಂದ ಗುಜರಾತಿಗೆ ಹೋಗಿ ಹೊಸ ಆಶ್ರಮ ಕಟ್ಟಿಕೊಂಡಿದ್ದ ನಿತ್ಯಾನಂದ ಅಲ್ಲಿಂದಲೂ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಗುಜರಾತ್​ ಪೊಲೀಸರೇ ನೀಡಿದ್ದರು. ಇದೀಗ ಅವರ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ನಿತ್ಯಾನಂದ ಶಿಷ್ಯಂದಿರು ಅಹ್ಮದಾಬಾದ್​ನಿಂದ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. 

ಆದರೆ ಮೂಲಗಳ ಪ್ರಕಾರ ಬೆಂಗಳೂರು ಹೊರವಲಯದಲ್ಲಿರುವ ಬಿಡದಿ ಆಶ್ರಮದಲ್ಲಿಯೂ ಪರಿಸ್ಥಿತಿ ಮುಂಚಿನಂತಿಲ್ಲ. ಇಲ್ಲಿರುವ ಶಿಷ್ಯಂದರೇ ಹೊತ್ತು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಮಾಹಿತಿ ನೀಡುತ್ತಾರೆ ಆಶ್ರಮದ ಸಿಬ್ಬಂದಿಯೊಬ್ಬರು. "ಸ್ವಾಮಿ ನಿತ್ಯಾನಂದ ಇಲ್ಲಿಂದ ಹೊರಟ ನಂತರ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿಯೇ ಇಲ್ಲ. ಈ ಹಿಂದೆ ತಂದಿದ್ದ ದಿನಸಿ ಪದಾರ್ಥಗಳು ಬಹುತೇಕ ಖಾಲಿಯಾಗಿವೆ. ನಮ್ಮ ಬಳಿ ಹಣವೂ ಇಲ್ಲ, ಅವರ ಆಪ್ತರು ಕೂಡ ಮಾತಿಗೆ ಸಿಗುತ್ತಿಲ್ಲ. ಹೊತ್ತು ಊಟಕ್ಕೂ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ," ಎನ್ನುತ್ತಾರೆ ಆಶ್ರಮದಲ್ಲಿರುವ ಶಿಷ್ಯರೊಬ್ಬರು.

ಇತ್ತೀಚೆಗೆ ನಿತ್ಯಾನಂದ ಬಿಡದಿ ಆಶ್ರಮಕ್ಕೆ ಭೇಟಿ ಕೊಟ್ಟ ಪ್ರತ್ಯಕ್ಷದರ್ಶಿಯೊಬ್ಬರು ಈ ಮಾತನ್ನು ಸಮರ್ಥಿಸುತ್ತಾರೆ. "ನಾನು ಈ ಹಿಂದೆ ನಿತ್ಯಾನಂದ ಅವರ ಭಾಷಣಗಳ ಸರಣಿಗಳ ವಿಡಿಯೋ ಮಾಡಿಕೊಡುತ್ತಿದ್ದೆ. ಅಲ್ಲಿ ಕೆಲಸಗಾರನಾಗಿರಲಿಲ್ಲ, ಆದರೆ ವಿಡಿಯೋ ಎಡಿಟಿಂಗ್​ ಕೆಲಸದ ಔಟ್​ಸೋರ್ಸ್​ ಪಡೆದಿದ್ದೆ. ಹಾಗಾಗಿ ನನಗೆ ಹಲವು ಭಕ್ತರ ಪರಿಚಯವಿದೆ ಮತ್ತು ಆಶ್ರಮದೊಳಕ್ಕೆ ಈಗಲೂ ನನಗೆ ಪ್ರವೇಶವಿದೆ. ಸಾರ್ವಜನಿಕರು ಆಶ್ರಮ ಪ್ರವೇಶಿಸಲು ಸಾಧ್ಯವೇ ಇಲ್ಲ. ಕೆಲ ದಿನಗಳ ಹಿಂದೆ ನನಗೆ ಭಕ್ತರೊಬ್ಬರಿಂದ ಕರೆ ಬಂದಿತ್ತು. ದಿನಸಿ ಖರೀದಿಸಲು ಹಣವಿಲ್ಲ, ನಿತ್ಯಾನಂದ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೇಳಿಕೊಂಡರು. ನಾನು ಹೋಗಿ ಭೇಟಿಯಾಗಿ ಕೈಲಾದ ಸಹಾಯ ಮಾಡಿಬಂದೆ," ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು.

ಮುಂದುವರೆದ ಅವರು, ನಿತ್ಯಾನಂದ ಶಿಷ್ಯರು ದಷ್ಟಪುಷ್ಠವಾಗಿದ್ದರು. ಆದರೆ ಈ ಬಾರಿ ನೋಡಿದಾಗ ಎಲ್ಲರೂ ಸೋತು ಹೋಗಿದ್ದಾರೆ, ಅವರನ್ನು ನೋಡಿದರೆ ಅರ್ಥವಾಗುತ್ತದೆ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು, ಎಂದರು.

ಈಗ ಗುಜರಾತಿನಲ್ಲಿರುವ ನಿತ್ಯಾನಂದ ಶಿಷ್ಯರು ಸಹ ಬೆಂಗಳೂರಿಗೆ ಮರಳುತ್ತಿದ್ದಾರೆ. ಇಲ್ಲಿರುವ ಭಕ್ತರಿಗೇ ಜೀವನ ಸಾಗಿಸಲು ಕಷ್ಟವಾಗಿರುವಾಗ ಗುಜರಾತಿನಿಂದ ಬರುವವರ ಸ್ಥಿತಿ ಏನಾಗಲಿದೆ ಎಂಬುದನ್ನು ಕಾಲವೇ ಹೇಳಬೇಕು.

ಮತ್ತೊಂದು ಗಂಭೀರ ಆರೋಪ:

ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್​ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದರು.ಇದನ್ನೂ ಓದಿ: ಅತ್ಯಾಚಾರ ಆರೋಪಿ ನಿತ್ಯಾನಂದ ದೇಶದಿಂದ ಪರಾರಿ?; ಇಲ್ಲಿದೆ ಸ್ವಘೋಷಿತ ದೇವಮಾನವನ ಸಂಪೂರ್ಣ ಸ್ಟೋರಿ

ಅಹಮದಾಬಾದ್​ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿನ ನಾಲ್ಕು ವಿದ್ಯಾರ್ಥಿಗಳ ಅಪಹರಣ ಹಾಗೂ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ವಿರುದ್ಧ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಅಗತ್ಯ ಬಿದ್ದರೆ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗುವುದು ಎಂದು ಕೂಡ ಪೊಲೀಸರು ತಿಳಿಸಿದ್ದಾರೆ. ನಿತ್ಯಾನಂದ ಸ್ವಾಮಿ ಬಿಡದಿ ನ್ಯಾಯಾಲಯಕ್ಕೂ 6 ತಿಂಗಳಿನಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಚಾರಣೆ ಡಿ. 9ರಂದು ನಡೆಯಲಿದ್ದು, ಆ ವೇಳೆ ಹಾಜರಾದರೆ ಅಹಮದಾಬಾದ್​ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ನಿತ್ಯಾನಂದ ಆಶ್ರಮದ ಯುವತಿ ಬಿಚ್ಚಿಟ್ಟ ಕಾಮಕಾಂಡದ ರಹಸ್ಯ

ಕೆಲವು ದಿನಗಳ ಹಿಂದಷ್ಟೆ ನಿತ್ಯಾನಂದ ಆಶ್ರಮದ ಸಿಬ್ಬಂದಿಯ ವಿರುದ್ಧ ನಿತ್ಯಾನಂದನ ಶಿಷ್ಯರೊಬ್ಬರು ಗಂಭೀರ ಆರೋಪ ಮಾಡಿದ್ದರು. ಆಶ್ರಮದ ಗುರುಕುಲದಲ್ಲಿರುವ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ, ಆಕೆಯನ್ನು ನೋಡಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಅಹಮದಾಬಾದ್​ ಆಶ್ರಮದ ಮುಂದೆ ಹೇಳಿಕೆ ನೀಡಿದ್ದರು. ನಂತರ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿತ್ತು.

2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್​ಪಿಯಾಗಿದ್ದ ರಮೇಶ್​ ಬಾನೋತ್​ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್​ ಸಮನ್ಸ್​ ನೀಡಿದ ನಂತರವೂ ಕೋರ್ಟ್​ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್​ಪೋರ್ಟ್​ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್​ಗೆ ಹೋಗಿದ್ದರು.

ದೇಶದಿಂದ ಹೇಗೆ ಪರಾರಿ?:

ಮೂಲಗಳ ಪ್ರಕಾರ, ನಿತ್ಯಾನಂದ ದೇಶದಿಂದ ಪರಾರಿಯಾಗಲು ಒಂದೋ ನಕಲಿ ಪಾಸ್​ಪೋರ್ಟ್​ ಮತ್ತು ಐಡೆಂಟಿಟಿ ಬಳಕೆ ಮಾಡಿರಬೇಕು. ಇಲ್ಲವಾದಲ್ಲಿ ಬೇರೆ ದೇಶದ ಪಾಸ್​ಪೋರ್ಟ್​ ಪಡೆದು ಭಾರತದಿಂದ ಆಚೆ ಹೋಗಿರಬೇಕು. ಅಥವಾ ರಾಮನಗರ ಪೊಲೀಸರು ನವೀಕರಣಕ್ಕೆ ಅವಕಾಶ ನೀಡದ ನಂತರವೂ ಇನ್ನಾವುದಾದರೂ ಮಾರ್ಗದಿಂದ ಪಾಸ್​ಪೋರ್ಟ್​ ನವೀಕರಿಸಿಕೊಂಡಿರಬೇಕು.

ಈಕ್ವೆಡಾರ್​ನಲ್ಲಿ ನಿತ್ಯಾನಂದ?:

ನಿತ್ಯಾನಂದ ಭಾರತದಲ್ಲೇ ಇಲ್ಲ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದಾರೆ. ಒಂದು ವೇಳೆ ದೇಶ ಬಿಟ್ಟಿದ್ದೇ ಆದರೆ ನಿತ್ಯಾನಂದ ಎಲ್ಲಿರಬಹುದು? ಈ ಕುತೂಹಲವನ್ನು ಬೆನ್ನತ್ತಿದ ನ್ಯೂಸ್​18ಗೆ ಉನ್ನತ ಮೂಲಗಳಿಂದ ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಪ್ರಕಾರ ನಿತ್ಯಾನಂದ ಭ್ರಿಟೀಶ್​ ಅಧಿಪತ್ಯದಲ್ಲಿರುವ ಪಶ್ಚಿಮ ಕೆರಿಬಿಯನ್​ ಮಹಾಸಾಗರದಲ್ಲಿರುವ ಕೇಮ್ಯಾನ್​​ ದ್ವೀಪದಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನಷ್ಟು ಸುದ್ದಿಮೂಲಗಳು ಆತ ಈಕ್ವೆಡಾರ್​ನಲ್ಲಿ ಅಡಗಿದ್ದಾನೆ ಎಂದೂ ಹೇಳುತ್ತಿವೆ. ಜತೆಗೆ ಅತ್ಯಾಪ್ತ ಶಿಷ್ಯರೂ ಅವರ ಜತೆಯೇ ಇದ್ದಾರೆ. ಅತ್ತ ದೇಶ ಬಿಟ್ಟು ನಿತ್ಯಾನಂದ ಓಡಿ ಹೋಗಿದ್ದರೆ, ಇತ್ತ ಬಿಡದಿ ಆಶ್ರಮದಲ್ಲಿರುವ ಭಕ್ತರ ಕಥೆ ಶೋಚನೀಯವಾಗಿದೆ. ನಿತ್ಯಾನಂದನ ಭಕ್ತರೇ ಹೇಳುವಂತೆ, ಅಲ್ಲಿರುವ ಶಿಷ್ಯರಿಗೆ ಊಟಕ್ಕೂ ಕೊರತೆ ಉಂಟಾಗಿದೆ.
First published: December 2, 2019, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading