ಆ. 20ರಂದು 2020ನೇ ಸಾಲಿನ ವಿಶ್ವದ ಅತೀ ದೊಡ್ಡ ಸ್ವಚ್ಛತಾ ಸಮೀಕ್ಷೆ ಫಲಿತಾಂಶ ಪ್ರಕಟ

ಸ್ವಚ್ಛತಾ ಸಮೀಕ್ಷೆ 2020

ಸ್ವಚ್ಛತಾ ಸಮೀಕ್ಷೆ 2020

ಸ್ವಚ್ಛತಾ ಸಮೀಕ್ಷೆ 2020ರ ಸಮೀಕ್ಷಾ ವರದಿಯೊಂದಿಗೆ ಸ್ವಚ್ಛ ಸರ್ವೇಕ್ಷಣಾ ಆವಿಷ್ಕಾರಗಳು ಮತ್ತು ಅತ್ಯುತ್ತಮ ಅಭ್ಯಾಸಗಳು, ಸ್ವಚ್ಛತಾ ಸಮೀಕ್ಷೆ ಸಾಮಾಜಿಕ ಮಾಧ್ಯಮ ವರದಿ ಮತ್ತು ಗಂಗಾ ಪಟ್ಟಣಗಳ ಮೌಲ್ಯಮಾಪನ ಕುರಿತ ವರದಿ ಸಹ ಸ್ವಚ್ಛತಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ.

  • Share this:

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ 11ಗಂಟೆಗೆ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. ಇದು ದೇಶದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿಯಾಗಿದೆ.


“ಸ್ವಚ್ಛ ಮಹೋತ್ಸವ”ಕಾರ್ಯಕ್ರಮದಲ್ಲಿ ಒಟ್ಟು 129 ಪ್ರಶಸ್ತಿಗಳನ್ನು ಉತ್ತಮ ಕೆಲಸ ಮಾಡಿರುವ ನಗರಗಳು ಮತ್ತು ರಾಜ್ಯಗಳಿಗೆ ನೀಡಲಾಗುವುದು. ಇದೇ ವೇಳೆ ಸ್ವಚ್ಛ ಭಾರತ ಅಭಿಯಾನ -ನಗರ (ಎಸ್ಬಿಎಂ-ಯು) ಅಡಿಯಲ್ಲಿ ದೇಶದ ವಿವಿಧ ಭಾಗಗಳ ಆಯ್ದ ಫಲಾನುಭವಿಗಳು, ಸ್ವಚ್ಛಗ್ರಾಹಿಗಳು ಮತ್ತು ಪೌರ ಕಾರ್ಮಿಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.


ಸ್ವಚ್ಛತಾ ಸಮೀಕ್ಷೆ 2020 ಫಲಿತಾಂಶಗಳ ಡ್ಯಾಶ್​ಬೋರ್ಡ್​ಗೆ ಚಾಲನೆ ಸಿಗಲಿದೆ. ಒಟ್ಟು 4,242 ನಗರಗಳು, 62 ಕಂಟೋನ್ಮೆಂಟ್ ಮಂಡಳಿಗಳು ಮತ್ತು 92  ಪಟ್ಟಣಗಳ 1.87 ಕೋಟಿ ಜನರು ಸ್ವಚ್ಛತಾ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ‌. ಇದು ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆ ಎನಿಸಿದೆ. ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತಿದೆ. ಭಾರತದಲ್ಲಿ ಸ್ವಚ್ಛ ನಗರಗಳಾಗಲು ನಗರಗಳ ನಡುವೆ ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಹುಟ್ಟುಹಾಕುವುದರ ಜೊತೆಗೆ ಅಭಿಯಾನದಲ್ಲಿ ದೊಡ್ಡ ಪ್ರಮಾಣದಲ್ಲಿ ನಾಗರಿಕರು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಸರ್ಕಾರವು ಸ್ವಚ್ಛತಾ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.


ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜನವರಿ 2016ರಲ್ಲಿ 73 ಪ್ರಮುಖ ನಗರಗಳಿಗೆ ಶ್ರೇಯಾಂಕ ನೀಡಲು ಸ್ವಚ್ಛತಾ ಸಮೀಕ್ಷೆಯನ್ನು 2016 ನಡೆಸಿತ್ತು. ನಂತರ 434 ನಗರಗಳ ಶ್ರೇಯಾಂಕಕ್ಕಾಗಿ ಜನವರಿ-ಫೆಬ್ರವರಿ 2017ರಲ್ಲಿ ಸ್ವಚ್ಛತಾ ಸಮೀಕ್ಷೆ 2017 ನಡೆಸಲಾಯಿತು. 4,203 ನಗರಗಳೊಂದಿಗೆ ಸ್ವಚ್ಛತಾ ಸಮೀಕ್ಷೆ 2018, ನಂತರ 4,237 ನಗರಗಳನ್ನು ಒಳಗೊಂಡ ಸ್ವಚ್ಛತಾ ಸಮೀಕ್ಷೆ 2019 ನಡೆಸಲಾಯಿತು. ಇದು 28 ದಿನಗಳ ಸಮಯದಲ್ಲಿ ಪೂರ್ಣಗೊಂಡ ಹೊಸ ಮಾದರಿಯ ಸಂಪೂರ್ಣ ಡಿಜಿಟಲ್ ಸಮೀಕ್ಷೆಯಾಗಿದೆ. ಸ್ವಚ್ಛತಾ ಸಮೀಕ್ಷೆ 2020ರಲ್ಲಿ ನಗರಗಳ ವಾಸ್ತವ ಕಾರ್ಯಕ್ಷಮತೆಯ ನಿರಂತರ ಮೌಲ್ಯಮಾಪನ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನಗರಗಳು ಮತ್ತು ಪಟ್ಟಣಗಳಲ್ಲಿ ಮೂರು ತ್ರೈಮಾಸಿಕಗಳಲ್ಲಿ ಸ್ವಚ್ಛತಾ ಮೌಲ್ಯಮಾಪನವನ್ನು ನಡೆಸಲು ಸ್ವಚ್ಛತಾ ಸಮೀಕ್ಷೆ ಲೀಗ್ ಅನ್ನು ಪರಿಚಯಿಸಿತ್ತು. ಸ್ವಚ್ಛತಾ ಸಮೀಕ್ಷೆಯು ನಾಗರಿಕರು ಮತ್ತು ಪಾಲುದಾರರ ಕಲ್ಪನೆಯನ್ನು ಸಮಾನವಾಗಿ ಸೆಳೆದಿದೆ ಮತ್ತು ಪ್ರತಿ ವರ್ಷವೂ ಹೆಚ್ಚುತ್ತಿರುವ ನಾಗರಿಕರ ಭಾಗವಹಿಸುವಿಕೆಯು ಜನ ಸಾಮಾನ್ಯರು ತಮ್ಮ ನಗರಗಳ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಹೊಣೆಗಾರಿಕೆ ಹೊತ್ತುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.


ಸ್ವಚ್ಛತಾ ಸಮೀಕ್ಷೆಯು ಇಂದು ‘ಸ್ವಚ್ಛತೆ’ಯನ್ನು ಪ್ರೇರಣೆ ಮತ್ತು ಹೆಮ್ಮೆಯ ವಿಷಯವನ್ನಾಗಿ ಮಾಡಿದೆ. ಸಮೀಕ್ಷೆಯ ಮೊದಲ ಆವೃತ್ತಿಯಲ್ಲಿ ಮೈಸೂರು ಭಾರತದ ಅತಿ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದರೆ, ಇಂದೋರ್ ಸತತ ಮೂರು ವರ್ಷಗಳಿಂದ (2017, 2018, 2019) ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿರುವ 2020ನೇ ಆವೃತ್ತಿಯ ಬಹುನಿರೀಕ್ಷಿತ ಫಲಿತಾಂಶಗಳು 2020ರ ಆಗಸ್ಟ್ 20 ರಂದು ಪ್ರಕಟವಾಗಲಿವೆ.


28 ದಿನಗಳಲ್ಲಿ ಪೂರ್ಣಗೊಂಡ ಸ್ವಚ್ಛತಾ ಸಮೀಕ್ಷೆ 2020, ಹಲವಾರು ಪ್ರಮುಖ ಅಂಶಗಳನ್ನು ಹೊಂದಿದೆ, ಅವುಗಳಲ್ಲಿ ಪ್ರಮುಖವಾದವು ಎಂದರೆ...


  • 1.7 ಕೋಟಿ ನಾಗರಿಕರು ಸ್ವಚ್ಛತಾ ಆ್ಯಪ್​ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

  • ಸಾಮಾಜಿಕ ಮಾಧ್ಯಮದಲ್ಲಿ 11 ಕೋಟಿಗೂ ಹೆಚ್ಚು ಅನಿಸಿಕೆಗಳು ಬಂದಿವೆ.

  • 5.5 ಲಕ್ಷಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರು ಸಮಾಜ ಕಲ್ಯಾಣ ಯೋಜನೆಗಳೊಂದಿಗೆ ಸೇರಿಕೊಂಡಿದ್ದಾರೆ ಮತ್ತು 84,000ಕ್ಕೂ ಹೆಚ್ಚು ಅನೌಪಚಾರಿಕ ತ್ಯಾಜ್ಯ ಆಯುವವರು ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.

  • 21,000ಕ್ಕೂ ಹೆಚ್ಚು ತ್ಯಾಜ್ಯ ಸ್ಥಳಗಳನ್ನು ಗುರುತಿಸಿ, ಸುಧಾರಿಸಲಾಗಿದೆ.


ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್​ ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ), ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್), ಗೂಗಲ್ ಸೇರಿದಂತೆ ಸ್ವಚ್ಛ ಭಾರತ ಅಭಿಯಾನ – ನಗರ ಪ್ರಯಾಣದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯೊಂದಿಗೆ ಸಹಭಾಗಿಯಾಗಿರುವ ಸಂಸ್ಥೆಗಳನ್ನು ಒಟ್ಟುಗೂಡಿಸುವುದು ಮತ್ತು ಸನ್ಮಾನಿಸುವುದು ಕಾರ್ಯಕ್ರಮದ ಮತ್ತೊಂದು ವೈಶಿಷ್ಟ್ಯವಾಗಿದೆ.


2014ರಲ್ಲಿ ಪ್ರಾರಂಭವಾದಾಗಿನಿಂದ ಸ್ವಚ್ಛ ಭಾರತ ಅಭಿಯಾನ-ನಗರ (ಎಸ್ಬಿಎಂ-ಯು) ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಎರಡರಲ್ಲೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೈರ್ಮಲ್ಯ ಶಿಷ್ಟಾಚಾರಗಳ ಪ್ರಕಾರ 4,324 ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿದೆ. 1,319 ನಗರಗಳು ಒಡಿಎಫ್ ಮತ್ತು 489 ನಗರಗಳು ಒಡಿಎಫ್ ಎಂದು ಪ್ರಮಾಣೀಕರಿಸಲಾಗಿದೆ. ಅಭಿಯಾನದ ಗುರಿಗಳನ್ನು ಮೀರಿ 66 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಮನೆಯ ಶೌಚಾಲಯಗಳು ಮತ್ತು 6 ಲಕ್ಷಕ್ಕೂ ಹೆಚ್ಚು ಸಮುದಾಯ / ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಮೂಲಕ ಇದು ಸಾಧ್ಯವಾಗಿದೆ.
ಹೆಚ್ಚುವರಿಯಾಗಿ, 2900ಕ್ಕೂ ಹೆಚ್ಚು ನಗರಗಳಲ್ಲಿ 59,900ಕ್ಕೂ ಹೆಚ್ಚು ಶೌಚಾಲಯಗಳನ್ನು ಗೂಗಲ್ ನಕ್ಷೆಗಳಲ್ಲಿ ಲೈವ್ ಮಾಡಲಾಗಿದೆ. ಘನತ್ಯಾಜ್ಯ ನಿರ್ವಹಣೆಯ ಪ್ರದೇಶದಲ್ಲಿ, ಶೇ. 96ರಷ್ಟು ವಾರ್ಡ್​ಗಳು ಸಂಪೂರ್ಣ ಮನೆ-ಮನೆ ಸಂಗ್ರಹವನ್ನು ಹೊಂದಿದ್ದರೆ, ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಶೇ.66 ಅನ್ನು ಸಂಸ್ಕರಿಸಲಾಗುತ್ತಿದೆ. ಇದು 2014 ರ ಶೇ. 18 ಸಂಸ್ಕರಣೆಗಿಂತ ಸುಮಾರು 4 ಪಟ್ಟು ಹೆಚ್ಚಾಗಿದೆ. ಸಚಿವಾಲಯದ ತ್ಯಾಜ್ಯ ಮುಕ್ತ ನಗರಗಳ ಸ್ಟಾರ್ ರೇಟಿಂಗ್ ಶಿಷ್ಟಾಚಾರದ ಪ್ರಕಾರ ಒಟ್ಟು 6 ನಗರಗಳನ್ನು (ಇಂದೋರ್, ಅಂಬಿಕಾಪುರ, ನವೀ ಮುಂಬೈ, ಸೂರತ್, ರಾಜ್ಕೋಟ್ ಮತ್ತು ಮೈಸೂರು) 5-ಸ್ಟಾರ್ ನಗರಗಳು, 86 ನಗರಗಳನ್ನು 3-ಸ್ಟಾರ್ ಮತ್ತು 64 ನಗರಗಳನ್ನು 1-ಸ್ಟಾರ್ ಎಂದು ರೇಟ್ ಮಾಡಲಾಗಿದೆ.


ಇದನ್ನು ಓದಿ: ಮಲಪ್ರಭ ನದಿಯ ಪ್ರವಾಹಕ್ಕೆ ಗದಗ ಜಿಲ್ಲೆಯ ಕೊಣ್ಣೂರ ಗ್ರಾಮದ ಬಹುತೇಕ ಮನೆಗಳು ಭಾಗಶಃ ಮುಳುಗಡೆ


ಸ್ವಚ್ಛತಾ ಸಮೀಕ್ಷೆ 2020ರ ಸಮೀಕ್ಷಾ ವರದಿಯೊಂದಿಗೆ ಸ್ವಚ್ಛ ಸರ್ವೇಕ್ಷಣಾ ಆವಿಷ್ಕಾರಗಳು ಮತ್ತು ಅತ್ಯುತ್ತಮ ಅಭ್ಯಾಸಗಳು, ಸ್ವಚ್ಛತಾ ಸಮೀಕ್ಷೆ ಸಾಮಾಜಿಕ ಮಾಧ್ಯಮ ವರದಿ ಮತ್ತು ಗಂಗಾ ಪಟ್ಟಣಗಳ ಮೌಲ್ಯಮಾಪನ ಕುರಿತ ವರದಿ ಸಹ ಸ್ವಚ್ಛತಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ. ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ, ವಿವಿಧ ಮೇಯರ್ ಗಳು, ರಾಜ್ಯಗಳ ಅಭಿಯಾನ ನಿರ್ದೇಶಕರು, ಪುರಸಭೆ ಆಯುಕ್ತರು ಮತ್ತು ನಗರ ಪ್ರದೇಶದ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಇತರ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

First published: