Sushma Swaraj Obituary: ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!

Sushma Swaraj ಕೊನೆಗೂ ಅಖಂಡ ಭಾರತದ ಕನಸನ್ನು ನನಸಾಗಿಸಿಕೊಂಡ ಸುಷ್ಮಾ ಸ್ವರಾಜ್ ಇಂದು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಇವರ ಹೋರಾಟದ ಹಾದಿ ಹಾಗೂ ಆದರ್ಶಗಳೇ ಇವರ ಹೆಸರನ್ನು ದೇಶಕಂಡ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲಿಸಿದೆ. ಒಂದಿಡೀ ಪೀಳಿಗೆಯ ಯುವಕ ಯುವತಿಯರಿಗೆ ಮಾದರಿಯಾಗಬಹುದಾದ ವ್ಯಕ್ತಿತ್ವವನ್ನು ಹೊಂದಿದ್ದ ಸುಷ್ಮಾ ಸ್ವರಾಜ್ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದರೆ ಅತಿಶಯೋಕ್ತಿಯಲ್ಲ.

MAshok Kumar | news18
Updated:August 7, 2019, 10:17 AM IST
Sushma Swaraj Obituary: ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!
ಸುಷ್ಮಾ ಸ್ವರಾಜ್
  • News18
  • Last Updated: August 7, 2019, 10:17 AM IST
  • Share this:
ಅದು 80ರ ದಶಕದ ಕೊನೆಯ ವರ್ಷಗಳು. ಭಾರತದ ರಾಜಕೀಯ ಇತಿಹಾಸದ ಸಂದಿಗ್ಧ ಕಾಲ. ಸ್ವಾತಂತ್ರ್ಯಾ ನಂತರದ ರಾಷ್ಟ್ರ ರಾಜಕೀಯದಲ್ಲಿ ಏಕಾಧಿಪತ್ಯ ಸಾಧಿಸಿದ್ದ ನೆಹರು ವಂಶದ ವಿರುದ್ಧ ಸದ್ದಿಲ್ಲದೆ ಆರಂಭವಾಗಿದ್ದ ಅಸಮಾಧಾನದ ಹೊಗೆಯೊಂದು ಚಳುವಳಿಯಾಗಿ ರೂಪಗೊಂಡು ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾದ ದಶಕ.

ಇಂತಹ ಸಂದಿಗ್ಧ ಕಾಲದಲ್ಲಿ ಅಪ್ಪಟ ಗಾಂಧಿವಾದಿ ಹೋರಾಟಗಾರ ಜಯಪ್ರಕಾಶ ನಾರಾಯಣ ಕಾಂಗ್ರೆಸ್​ಗೆ ಪರ್ಯಾಯವಾಗಿ ಒಂದು ರಾಜಕೀಯ ಚಳುವಳಿಯನ್ನೇ ಕಟ್ಟುವ ಮೂಲಕ ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದರು. ಇಂತಹ ಮಹಾನ್ ರಾಷ್ಟ್ರವಾದಿ ಹೋರಾಟಗಾರನ, ನಾಯಕನ ಚಳುವಳಿಯ ಭಾಗವಾಗಿದ್ದ ಹಾಗೂ ಮತ್ತೊಬ್ಬ ಸಮಾಜವಾದಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಅನುಭವದ ಮೂಸೆಯಲ್ಲಿ ತಯಾರಾಗಿದ್ದ ದಿಟ್ಟ ಯುವತಿ ಸುಷ್ಮಾ ಸ್ವರಾಜ್.

ಪ್ರಕರ ವಾಗ್ಮಿ, ಹೋರಾಟಗಾರ್ತಿ, ಅಪ್ಪಟ ರಾಷ್ಟ್ರೀಯವಾದಿ ಹಾಗೂ ಮಾದರಿ ರಾಜಕಾರಣಿಯಾದ ಸುಷ್ಮಾ ಸ್ವರಾಜ್  ಸವೆಸಿದ ರಾಜಕೀಯ ವೃತ್ತಿ ಜೀವನ, ಹೋರಾಟ ಹಾಗೂ ಸಾಧನೆಗಳು ಹೀಗೆ ಎರಡು ಸಾಲುಗಳಲ್ಲಿ ಮುಗಿದುಬಿಡುವ ಉಪಮೆಗಳಲ್ಲ.

ಭಾರತದ ರಾಜಕಾರಣದಲ್ಲಿ ಇಂದಿರಾ ಗಾಂಧಿ ಎಂಬ ಉಕ್ಕಿನ ಮಹಿಳೆ ಊಹೆಗೂ ನಿಲುಕದ ಎತ್ತರಕ್ಕೆ ಬೆಳೆದ ಅದೇ ಕಾಲದಲ್ಲಿ ಜನತಾ ಪಕ್ಷದಲ್ಲಿ ಭವಿಷ್ಯದ ಧೃವತಾರೆಯೊಂದು ಆಗಿನ್ನು ಮಿನುಗಲು ಆರಂಭಿಸಿತ್ತು. ಆದರೆ, ಆ ತಾರೆ ದೆಹಲಿಯ ಮುಖ್ಯಮಂತ್ರಿ ಗಾದಿಗೆ ಏರಲಿದೆ, ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ, ಇಂದಿರಾ ಗಾಂಧಿ ನಂತರ ದೇಶ ಕಂಡ ಮತ್ತೋರ್ವ ದಿಟ್ಟ ಮಹಿಳಾ ರಾಜಕಾರಣಿಯಾಗಿ ರಾಷ್ಟ್ರ ರಾಜಕೀಯ ಇತಿಹಾಸದಲ್ಲಿ ತಮ್ಮದೇಯಾದ ಇತಿಹಾಸ ನಿರ್ಮಿಸಲಿದ್ದಾರೆ ಎಂದು ಸ್ವತಃ ಸುಷ್ಮಾ ಸ್ವರಾಜ್ ಸಹ ಊಹಿಸಿರಲಿಲ್ಲವೇನೋ?

ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದ ಸುಷ್ಮಾ ಸ್ವರಾಜ್ ವಿದ್ಯಾರ್ಥಿಯಾಗಿದ್ದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನೊಂದಿಗೆ ನಂಟು ಹೊಂದಿದ್ದರು. 1973ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದು ಸುಪ್ರೀಂ ಕೋರ್ಟ್​ನಲ್ಲಿ ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದ್ದರೂ ಜಯಪ್ರಕಾಶ್ ನಾರಾಯಣ್ ಅವರ ಕಾಂಗ್ರೆಸ್ ವಿರೋಧಿ ಚಳುವಳಿ ಅವರನ್ನು ಕೈಬೀಸಿ ಕರೆದಿತ್ತು.

ಕಾಂಗ್ರೆಸ್ ಪಕ್ಷದ ರಾಜಕೀಯ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಪ್ರವೇಶಿಸಿದ್ದ ಸುಷ್ಮಾ ಸ್ವರಾಜ್, ದೇಶದಲ್ಲಿ ಕಾಂಗ್ರೆಸೇತರ ಪ್ರಧಾನಿಯಾಗಿ 1977ರಲ್ಲಿ ಮೊರಾರ್ಜಿ ದೇಸಾಯಿ ಅಧಿಕಾರ ಸ್ವೀಕರಿಸಿದ ಅದೇ ವರ್ಷ ಪಂಜಾಬ್ ರಾಜ್ಯದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ಬಿಜೆಪಿ ಸೇರ್ಪಡೆಯಾದ ಅವರು ಕೊನೆಯ ಉಸಿರಿರುವವರೆಗೆ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದಿದ್ದರು. ಇಂದಿರಾ ಗಾಂಧಿಯಿಂದ ಸೋನಿಯಾ ಗಾಂಧಿವರೆಗೆ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಸಿಂಹಸ್ವಪ್ನದಂತೆ ಕಾಡಿದ್ದು ಮಾತ್ರ ಇಂದು ಇತಿಹಾಸ.

ಅಪ್ಪಟ ರಾಷ್ಟ್ರೀಯವಾದಿ, ಈಕೆ ಕಾಂಗ್ರೆಸ್ ವಿರೋಧಿ:1992ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಲ್​ಟಿಟಿಇ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಘಟನೆಗೆ ಇಡೀ ದೇಶವೇ ಮರುಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನಾಯಕನಿಲ್ಲದ ನಿರ್ವಾತ ಸ್ಥಿತಿ ಉಂಟಾಗಿತ್ತು. 3 ದಶಕಗಳಲ್ಲಿ ಮೊದಲ ಬಾರಿಗೆ 1992 ರಿಂದ 1996ರವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಹಾಗೂ ಅಧಿಕಾರ ಗಾಂಧಿ-ನೆಹರು ಕುಂಟಬದೇತರ ವ್ಯಕ್ತಿಯ ಕೈ ಸೇರಿತ್ತು.

ಆದರೆ, 1996ರಲ್ಲಿ ರಾಷ್ಟ್ರ ರಾಜಕೀಯ ಪ್ರವೇಶಿಸಿದ ರಾಜೀವ್ ಗಾಂಧಿ ಅವರ ಮಡದಿ ಸೋನಿಯಾ ಗಾಂಧಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಆರಂಭಿಸಿದ್ದರು. ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಕಾಂಗ್ರೆಸ್ ಮತ್ತೊಂದು ಮಗ್ಗುಲಿಗೆ ಹೊರಳಿತ್ತು. ಇದೇ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಪಂಜಾಬ್ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣ ಪ್ರವೇಶಿಸಿ ಸಂಸದೆಯಾಗಿದ್ದರು.

ಅಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿದ್ದ ಇಂತಹ ಬೆಳವಣಿಗೆಯನ್ನು ಕಟುವಾಗಿ ವಿಮರ್ಶಿಸಿದ್ದ ಸುಷ್ಮಾ ಸ್ವರಾಜ್ "ವಿದೇಶಿ ಮೂಲದ ಮಹಿಳೆಯ ಕೈಗೆ ಈ ದೇಶದ ಅಧಿಕಾರದ ಚುಕ್ಕಾಣಿ ಸಿಗಲು ನಾನು ಬಿಡಲಾರೆ" ಎಂದು ಅಂದೇ ಪಣ ತೊಟ್ಟಿದ್ದರು.

ಈ ನಡುವೆ ಸ್ಥಿರ ಸರ್ಕಾರ ನಡೆಸಲು ಏದುಸಿರು ಬಿಡುತ್ತಿದ್ದ ಬಿಜೆಪಿ ಕೊನೆಗೂ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ರಚಿಸಿತ್ತು. 2003 ರಿಂದ 2004ರ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಕೇಂದ್ರ ಸರ್ಕಾರ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವೆಯಾಗಿಯೂ ಕೆಲಸ ನಿರ್ವಹಿಸಿದ್ದರು.

2004ರಲ್ಲಿ ಎನ್​ಡಿಎ ಮೈತ್ರಿ ಕೂಟಕ್ಕೆ ಮತ್ತೆ ಬಹುಮತ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಅವಧಿಗೂ ಮುನ್ನವೇ ಚುನಾವಣೆಗೆ ಮುಂದಾಗಿತ್ತು. ಆದರೆ, ಕಾದಿದ್ದು ಮಾತ್ರ ನಿರಾಸೆ. ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿ ಸರ್ಕಾರ ರಚಿಸಲು ಮುಂದಾಗಿತ್ತು.

ಆದರೆ, ವಿದೇಶಿ ಮೂಲಕ ಸೋನಿಯಾ ಗಾಂಧಿ ದೇಶದ ಪ್ರಧಾನಿಯಾದರೆ ತಾನು ತಲೆ ಬೋಳಿಸಿಕೊಳ್ಳುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ಸುಷ್ಮಾ ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದ್ದರು. 2004ರಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ, ಸೋನಿಯಾ ಗಾಂಧಿಯನ್ನು ಪ್ರಧಾನಿ ಗದ್ದುಗೆಯಿಂದ ದೂರ ಉಳಿಸುವಲ್ಲಿ ಸುಷ್ಮಾ ಪಾತ್ರ ಪ್ರಮುಖವಾದದ್ದು. ಆದರೆ, ಇವರ ಮುಖಾಮುಖಿ ವೈರತ್ವಕ್ಕೆ ಇದಕ್ಕೂ ಮುನ್ನವೇ ನಮ್ಮ ಕರ್ನಾಟಕ ವೇದಿಕೆ ಕಲ್ಪಿಸಿತ್ತು.

ಸುಷ್ಮಾ v/s ಸೋನಿಯಾ; ಪ್ರತಿಷ್ಠೆಯ ಕಣಕ್ಕೆ ವೇದಿಕೆಯಾಗಿತ್ತು ಬಳ್ಳಾರಿ

1996ರಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದರು ಸೋನಿಯಾ ಗಾಂಧಿ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿದ್ದು 1999ರಲ್ಲಿ. ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ವಿರುದ್ಧ ಅಂದು ಬಿಜೆಪಿ ಪಕ್ಷದ ಹುರಿಯಾಳು ಇದೇ ಸುಷ್ಮಾ ಸ್ವರಾಜ್.

ಈ ವೇಳೆಗಾಗಲೆ 13 ಅಕ್ಟೋಬರ್ 1998 ರಿಂದ 3 ಡಿಸೆಂಬರ್ 1998ರ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ 5ನೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದ ತಕ್ಷಣ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ತಾನು ಅವರ ವಿರುದ್ಧ ಚುನಾವಣಾ ಕಣ ಪ್ರವೇಶಿಸುವ ಸೂಚನೆ ನೀಡಿದ್ದರು. ಅದರಂತೆ ಸೋನಿಯಾ ವಿರುದ್ಧ ಚುನಾವಣೆಗೂ ಸ್ಪರ್ಧಿಸಿದ್ದರು.

ಸೋನಿಯಾ ಮತ್ತು ಸುಷ್ಮಾ ಎಂಬ ಪ್ರತಿಷ್ಠೆಯ ಕಣಕ್ಕೆ ಸಾಕ್ಷಿಯಾದದ್ದು ನಮ್ಮದೇ ರಾಜ್ಯದ ಬಳ್ಳಾರಿ. ಅಂದಿನ ಜಿದ್ದಾಜಿದ್ದಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಎದುರು ಸೋತರೂ ಸಹ ಸುಷ್ಮಾ ತಮ್ಮ ಹೋರಾಟದ ಹಾದಿಯನ್ನು ಬಿಟ್ಟಿರಲಿಲ್ಲ. ಸೋನಿಯಾ ಅವರ ರಾಜಕೀಯ ಜೀವನದ ಕಟು ವಿರೋಧಿಯಾದ ಸುಷ್ಮಾ ಕಾಂಗ್ರೆಸ್ ಇಂದಿರಾ ನಂತರ ಸೋನಿಯಾರನ್ನು ಕುಟುಕುತ್ತಲೇ ರಾಜಕೀಯದ ಔನ್ನತ್ಯಕ್ಕೆ ಏರಿದ ಅಪರೂಪದ ಮಹಿಳಾ ರಾಜಕಾರಣಿ.

ಪಂಜಾಬ್ ಸರ್ಕಾರದಿಂದ ಪ್ರಕರ ವಾಗ್ಮಿ ಹಾಗೂ ಲೋಕಸಭೆಯಲ್ಲಿ ಎರಡು ಬಾರಿ ಅತ್ಯುತ್ತಮ ಸಂಸದೀಯ ಪಟು ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಸುಷ್ಮಾ ಸ್ವರಾಜ್ ಹೋರಾಟದಿಂದಲೇ ಜೀವನ ಕಟ್ಟಿಕೊಂಡ ಅಪರೂಪದ ವ್ಯಕ್ತಿತ್ವ.

2014ರಲ್ಲಿ ಈ ದೇಶದ ವಿದೇಶಾಂಗ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಈ ಸ್ಥಾನಕ್ಕೆ ಏರಿದ ಏರಡನೇ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದ ಸುಷ್ಮಾ ಜನಸಾಮಾನ್ಯರ ಕುಂದು ಕೊರತೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಜನರ ಸಮಸ್ಯೆಗಳಿಗೆ ಹೀಗೂ ಕಿವಿಯಾಗಬಹುದು ಎಂದು ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು.

ಅಖಂಡ ಭಾರತ ಎಂಬುದು ಸುಷ್ಮಾ ಸ್ವರಾಜ್ ಅವರ ವಿದ್ಯಾರ್ಥಿ ಜೀವನದ ಕನಸು. ಅವರ ಕನಸಿನಂತೆ ಇಂದು ಜಮ್ಮು-ಕಾಶ್ಮೀರ ಅಧಿಕೃತವಾಗಿ ಭಾರತ ಖಂಡದ ಭಾಗವಾಗಿದೆ. “ಇಂತಹ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿಕ್ಕಾಗಿಯೇ ನಾನು ಇನ್ನೂ ಬದುಕಿದ್ದೇನೆ” ಎಂದು ಟ್ವೀಟ್ ಮಾಡಿದ್ದ ಸುಷ್ಮಾ ಪಾಲಿಗೆ ಅದುವೇ ಕೊನೆಯ ಸಂದೇಶವಾಗಿತ್ತು.

ಕೊನೆಗೂ ಅಖಂಡ ಭಾರತದ ಕನಸನ್ನು ನನಸಾಗಿಸಿಕೊಂಡ ಸುಷ್ಮಾ ಸ್ವರಾಜ್ ಇಂದು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಇವರ ಹೋರಾಟದ ಹಾದಿ ಹಾಗೂ ಆದರ್ಶಗಳೇ ಇವರ ಹೆಸರನ್ನು ದೇಶಕಂಡ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲಿಸಿದೆ. ಒಂದಿಡೀ ಪೀಳಿಗೆಯ ಯುವಕ ಯುವತಿಯರಿಗೆ ಮಾದರಿಯಾಗಬಹುದಾದ ವ್ಯಕ್ತಿತ್ವವನ್ನು ಹೊಂದಿದ್ದ ಸುಷ್ಮಾ ಸ್ವರಾಜ್ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ : Sushma Swaraj Passes Away: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ ನಿಧನ; ಇಲ್ಲಿದೆ ಬಿಜೆಪಿ ಕಟ್ಟಾಳು ನಡೆದು ಬಂದ ಹಾದಿ
First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ