ನವ ದೆಹಲಿ (ಆಗಸ್ಟ್ 18); ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟನ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ನಟಿ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಪಟ್ಟಿಯ ಪ್ರಕಾರ, ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ನ್ಯಾಯಪೀಠವು ನಾಳೆ ಈ ಕುರಿತ ತೀರ್ಪು ನೀಡಲಿದೆ.
ಎಂ.ಎಸ್. ಧೋನಿ ಚಿತ್ರದಿಂದ ಖ್ಯಾತಿ ಗಳಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಜೂನ್ 14 ರಂದು ಮುಂಬೈನ ತನ್ನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದಿನಿಂದ ಮುಂಬೈ ಪೊಲೀಸರು ವಿವಿಧ ಕೋನಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇದೀಗ ಸಿಬಿಐ ಅಧಿಕಾರಿಗಳು ಸಹ ಈ ಪ್ರಕರಣದ ಬೆನ್ನುಬಿದ್ದಿದ್ದಾರೆ.
ಸುಶಾಂತ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ ಎಂದು ಆರೋಪಿಸಿದ್ದ ಅವರ ತಂದೆ ಕೆ.ಕೆ. ಸಿಂಗ್ ಕಳೆದ ಜುಲೈ 28 ರಂದು ಪಾಟ್ನಾದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನಟಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿದ್ದರು. ಅಲ್ಲದೆ, ಅಲ್ಪಾವಧಿಯಲ್ಲಿಯೇ ರಿಯಾ ಅವರು ಸುಶಾಂತ್ ಅವರ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದರ ಬೆನ್ನಿಗೆ ರಜಪೂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಮುಂಬೈ ಪೊಲೀಸರಿಗೆ “ರಾಜಕೀಯ ಪ್ರಭಾವ” ಅವಕಾಶ ನೀಡಿಲ್ಲ ಎಂದು ಆರೋಪಿಸಿ ಆಗಸ್ಟ್ 11 ರಂದು ಬಿಹಾರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಈ ವಿಷಯದಲ್ಲಿ ಬಿಹಾರಕ್ಕೆ ಸಂಪೂರ್ಣ ನ್ಯಾಯವ್ಯಾಪ್ತಿ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತ್ತು. ಹೀಗಾಗಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 56 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆ ಸಾಕಷ್ಟು ಗಣನೀಯವಾಗಿ ಮುಂದುವರೆದಿದೆ. ಅಲ್ಲದೆ, ನಟಿ ವಿರುದ್ಧ ಪಾಟ್ನಾದಲ್ಲಿ ದಾಖಲಿಸಲಾಗಿರುವ ಎಫ್ಐಆರ್ ಗೂ ಈ ಅಪರಾಧಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ರಿಯಾ ಚಕ್ರವರ್ತಿಯ ವಕೀಲರು ನ್ಯಾಯಪೀಠದ ಎದುರು ತಮ್ಮ ವಾದವನ್ನು ಮಂಡಿಸಿದ್ದರು.
ಇದನ್ನೂ ಓದಿ : ಸುಶಾಂತ್ ಸಿಂಗ್ ಪ್ರಕರಣ; ವಿಚಾರಣೆ ಮುಂದೂಡುವ ನಟಿ ರಿಯಾ ಮನವಿಯನ್ನು ತಿರಸ್ಕರಿಸಿದ ಜಾರಿ ನಿರ್ದೇಶನಾಲಯ
ಇದೇ ವೇಳೆ ನಟ ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್, "ತಮಗೆ ಮಹಾರಾಷ್ಟ್ರ ಪೊಲೀಸರಲ್ಲಿ ನಂಬಿಕೆ ಇಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೀಗಾಗಿ ನಾಳೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ನಟಿಯ ಪಾಲಿಗೆ ಮಹತ್ವದ್ದಾಗಿರಲಿದೆ ಎನ್ನಲಾಗುತ್ತಿದೆ.
ಪಾಟ್ನಾದಲ್ಲಿ ನಟ ಸುಶಾಂತ್ ಅವರ ತಂದೆ ನೀಡಿರುವ ದೂರನ್ನು ಆಧರಿಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ 306 (ಆತ್ಮಹತ್ಯೆಗೆ ಪ್ರಚೋದನೆ), 341 (ತಪ್ಪಾದ ಸಂಯಮಕ್ಕಾಗಿ ಶಿಕ್ಷೆ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ), 380 (ವಾಸಿಸುವ ಮನೆಯಲ್ಲೇ ಕಳ್ಳತನ), 406 (ವಿಶ್ವಾಸಾರ್ಹ ಉಲ್ಲಂಘನೆ) ಮತ್ತು 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ