ಹತ್ತಿರದ ಸಂಬಂಧಿ ಮಾತ್ರ ಬಾಡಿಗೆ ತಾಯಿಯಾಗಬಹುದು; ಸಂಸತ್​ನಲ್ಲಿ ಅಂಗೀಕೃತವಾದ ಮಸೂದೆಯ ನಿರ್ಬಂಧಗಳೇನು?

ಮದುವೆಯಾಗದ ಮಹಿಳೆ ಅಥವಾ ಪುರುಷ, ಸಲಿಂಗ ಸಂಬಂಧ ಹೊಂದಿರುವವರು, ಲಿವ್‌ ಇನ್‌ ರಿಲೇಷನ್​ಶಿಪ್​ನಲ್ಲಿ ಇರುವವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅವಕಾಶವಿಲ್ಲ. ದಂಪತಿಗೆ ಮಾತ್ರ ಮಗುವನ್ನು ಪಡೆಯಲು ಅವಕಾಶವಿದೆ.

Sushma Chakre | news18
Updated:December 20, 2018, 10:45 AM IST
ಹತ್ತಿರದ ಸಂಬಂಧಿ ಮಾತ್ರ ಬಾಡಿಗೆ ತಾಯಿಯಾಗಬಹುದು; ಸಂಸತ್​ನಲ್ಲಿ ಅಂಗೀಕೃತವಾದ ಮಸೂದೆಯ ನಿರ್ಬಂಧಗಳೇನು?
ಸಾಂದರ್ಭಿಕ ಚಿತ್ರ
  • News18
  • Last Updated: December 20, 2018, 10:45 AM IST
  • Share this:
ನವದೆಹಲಿ (ಡಿ. 20): ಇತ್ತೀಚೆಗೆ ಬದಲಾಗುತ್ತಿರುವ ಜೀವನಶೈಲಿಯ ಕಾರಣದಿಂದ ಗಂಡ-ಹೆಂಡತಿ ಇಬ್ಬರಲ್ಲೂ ಬಂಜೆತನದ ಪ್ರಮಾಣ ಹೆಚ್ಚುತ್ತಿದೆ. 30 ವರ್ಷದವರೆಗೆ ಉದ್ಯೋಗ, ಜವಾಬ್ದಾರಿ ಎಂದೆಲ್ಲ ಆರಾಮಾಗಿರುವ ದಂಪತಿ ಬಳಿಕ ಮಕ್ಕಳನ್ನು ಪಡೆಯಬೇಕೆಂದುಕೊಂಡರೂ ದೇಹ ಅದಕ್ಕೆ ಸಹಕರಿಸದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲವರು ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗುತ್ತಾರೆ. ತಮ್ಮದೇ ಮಗು ಬೇಕೆಂಬ ಅಭಿಲಾಷೆ ಇರುವ ಪೋಷಕರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಮನಸು ಮಾಡುತ್ತಾರೆ.

ಏಳೆಂಟು ವರ್ಷಗಳಿಂದ ಈಚೆಗೆ ನಮ್ಮ ದೇಶದಲ್ಲಿ ಬಾಡಿಗೆ ತಾಯ್ತನದ ಸಂಪ್ರದಾಯ ಕಾಣಿಸಿಕೊಳ್ಳುತ್ತಿದೆ. ಆದರೆ, ಕೆಲವು ಮಹಾನಗರಗಳಲ್ಲಿ ಇದನ್ನೇ ಉದ್ಯೋಗವಾಗಿ ಮಾಡಿಕೊಂಡು ಹಣ ಮಾಡುವ ದಂಧೆಯಾಗಿಯೂ ಬಳಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾಗೂ ಇದರಿಂದ ಹೆಣ್ಣಿನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದುದರಿಂದ ಬಾಡಿಗೆ ತಾಯ್ತನದ ಮೇಲೆ ಕೆಲ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು.

ಇದನ್ನೂ ಓದಿ: ಡಿಕೆಶಿಯಿಂದಲೇ ಕಾಂಗ್ರೆಸ್ ಪಕ್ಷ ಬಿಡ್ತಾರಂತೆ ರಮೇಶ್​ ಜಾರಕಿಹೊಳಿ!; ಮೈತ್ರಿ ನಾಯಕರಿಗೆ ಮತ್ತೊಂದು ತಲೆನೋವು

ನಿನ್ನೆ ಸಂಸತ್​ನಲ್ಲಿ ಈ ಕುರಿತು ಚರ್ಚೆಯಾಗಿದ್ದು, ದೇಶದಲ್ಲಿ ಬಾಡಿಗೆ ತಾಯ್ತನವನ್ನು ಹಣ ಮಾಡುವ ಸಲುವಾಗಿ ಬಳಸಿಕೊಳ್ಳುವುದನ್ನು ನಿಯಂತ್ರಿಸಲು ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ಬಾಡಿಗೆ ತಾಯ್ತನ (ನಿಯಂತ್ರಣ) ವಿಧೇಯಕಕ್ಕೆ ಸಂಸತ್​ ಅನುಮೋದನೆ ನೀಡಿದೆ. ಈ ವಿಧೇಯಕದ ಪ್ರಕಾರ ಯಾರಿಗೆ ಮಕ್ಕಳು ಇರುವುದಿಲ್ಲವೋ ಅವರು ತಮ್ಮ ಕುಟುಂಬದ ಒಳಗೇ ಇರುವ ಮಹಿಳೆಯನ್ನು ಬಾಡಿಗೆ ತಾಯಿಯಾಗಿ ಮಾಡಿಕೊಳ್ಳಲು ಅವಕಾಶವಿದೆ.

ಕೇಂದ್ರದ ಎನ್​ಡಿಎ ಸರ್ಕಾರ ಮಂಡಿಸಿದ ಈ ವಿಧೇಯಕಕ್ಕೆ ಧ್ವನಿ ಮತ (ವಾಯ್ಸ್​ ವೋಟ್)ದ ಮೂಲಕ ಅನುಮೋದನೆ ನೀಡಲಾಯಿತು. ನಿನ್ನೆ ಬೇರೆ ಬೇರೆ ವಿಚಾರಗಳಿಗೆ ಕಾಂಗ್ರೆಸ್​ ಮತ್ತು ಎಐಎಡಿಎಂಕೆ ಸಂಸದರು ಸಂಸತ್​ನಲ್ಲಿ ಗಲಾಟೆ ಎಬ್ಬಿಸಿದರು. ಹೀಗಾಗಿ, ಬೇರಾವ ವಿಷಯಗಳನ್ನೂ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ. ಈ ಗಲಾಟೆಯ ನಡುವೆ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ ಅಂಗೀಕಾರಗೊಂಡಿತು.

ಇದನ್ನೂ ಓದಿ: ಫೇಸ್ಬುಕ್​​ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್​​..!

ನಿಬಂಧನೆಗಳೇನು?ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಯಾವುದೇ ನಿಷೇಧ ಹೇರಲಾಗಿಲ್ಲ. ಆದರೆ, ಪರಿಚಯವಿಲ್ಲದ ಅಥವಾ ಬಾಡಿಗೆ ತಾಯಿಯಾಗಲು ಸಿದ್ಧಳಿರುವ ಬೇರಾವುದೋ ಮಹಿಳೆಯ ಮೂಲಕ ಮಗುವನ್ನು ಪಡೆಯಲು ನಿರ್ಬಂಧ ವಿಧಿಸಲಾಗಿದೆ. ಗಂಡ ಅಥವಾ ಹೆಂಡತಿಯ ಸಂಬಂಧಿಕರಲ್ಲಿ ಯಾರಾದರೂ ಬಾಡಿಗೆ ತಾಯಿಯಾಗಲು ಮುಂದೆ ಬಂದರೆ ಆಗ ಮಗು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕಾಯ್ದೆ ಮಹಿಳೆಯರನ್ನು ಶೋಷಣೆಯಿಂದ ರಕ್ಷಿಸುವುದರ ಜೊತೆಗೆ ಬಾಡಿಗೆ ತಾಯ್ತನ ಮೂಲಕ ಜನಿಸಿದ ಮಗುವಿನ ಹಕ್ಕುಗಳನ್ನು ಖಾತರಿ ಮಾಡುತ್ತದೆ. ಅಲ್ಲದೆ, ಶೋಷಣೆಗೊಳಗಾಗುತ್ತಿರುವ ಬಾಡಿಗೆ ತಾಯಂದಿರಿಗೂ ಇದರಿಂದ ಅನುಕೂಲವಾಗಲಿದೆ. ಹೀಗಾಗಿ, ಇದೊಂದು ಐತಿಹಾಸಿಕ ಕಾಯ್ದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: 6 ವರ್ಷಗಳ ನಂತರ ಭಾರತಕ್ಕೆ ಬಂದ ಹಮೀದ್, ಭಾವುಕರಾದ ತಾಯಿ ಸುಷ್ಮಾ ಸ್ವರಾಜ್​ಗೆ ಹೇಳಿದ್ದೇನು ಗೊತ್ತೆ?

ಕಾನೂನುಬದ್ಧವಾಗಿ ವಿವಾಹವಾಗಿ 5 ವರ್ಷ ಕಳೆದ ನಂತರವೂ ಮಗುವಾಗದಿದ್ದರೆ ಮಾತ್ರ ದಂಪತಿ ತಮ್ಮ ಹತ್ತಿರದ ಸಂಬಂಧಿಯನ್ನು ಬಾಡಿಗೆ ತಾಯಿಯಾಗಿ ಮಾಡಿಕೊಂಡು ಮಗುವನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮದುವೆಯಾಗದ ಮಹಿಳೆ ಅಥವಾ ಪುರುಷ, ಸಲಿಂಗ ಸಂಬಂಧ ಹೊಂದಿರುವವರು, ಲಿವ್‌ ಇನ್‌ ರಿಲೇಷನ್​ಶಿಪ್​ನಲ್ಲಿ ಇರುವವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅವಕಾಶವಿಲ್ಲ. ದಂಪತಿಗೆ ಮಾತ್ರ ಮಗುವನ್ನು ಪಡೆಯಲು ಅವಕಾಶವಿದೆ. ಈ ಮಸೂದೆ ಭಾರತೀಯ ಪೌರತ್ವ ಹೊಂದಿರುವ ದಂಪತಿಗೆ ಮಾತ್ರ ಅನ್ವಯವಾಗಲಿದೆ.

First published: December 20, 2018, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading