ವಕೀಲ ಪ್ರಶಾಂತ್ ಭೂಷಣ್​ಗೆ 6 ತಿಂಗಳು ಸಜೆಯೋ, 2 ಸಾವಿರ ದಂಡವೋ? ಇಂದು ಸುಪ್ರೀಂ ತೀರ್ಪು

ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಟೀಕೆ ಮಾಡಿ ನ್ಯಾಯಾಂಗ ನಿಂದನೆ ಮಾಡಿರುವ ಹಿರಿಯ ವಕೀಲ ಅವರಿಗೆ ಸುಪ್ರೀಂ ಕೋರ್ಟ್ 6 ತಿಂಗಳವರೆಗೂ ಜೈಲುಶಿಕ್ಷೆ ವಿಧಿಸುವ ಅವಕಾಶ ಹೊಂದಿದೆ.

ವಕೀಲ ಪ್ರಶಾಂತ್ ಭೂಷಣ್

ವಕೀಲ ಪ್ರಶಾಂತ್ ಭೂಷಣ್

  • News18
  • Last Updated :
  • Share this:
    ನವದೆಹಲಿ(ಆ. 31): ಭಾರತೀಯ ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಸರ್ವೋಚ್ಚ ನ್ಯಾಯಾಲಯ ಇವತ್ತು ಈ ಪ್ರಕರಣದಲ್ಲಿ ತೀರ್ಪು ನೀಡಲಿದೆ. ಪ್ರಶಾಂತ್ ಭೂಷಣ್ ಅವರನ್ನು ಕ್ಷಮಿಸಿಬಿಡಬೇಕೆಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪು ಏನು ಎಂಬುದು ಕುತೂಹಲ ಮೂಡಿಸಿದೆ.

    ಸಿಜೆಐ ಎಸ್.ಎ. ಬೋಬ್ಡೆ ಅವರನ್ನ ಟೀಕಿಸಿ ಪ್ರಶಾಂತ್ ಭೂಷಣ್ ಎರಡು ಟ್ವೀಟ್ ಪೋಸ್ಟ್ ಮಾಡಿದ್ದರು. ಇವು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ನ್ಯಾ| ಅರುಣ್ ಮಿಶ್ರಾ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಪ್ರಶಾಂತ್ ಭೂಷಣ್ ದೋಷಿ ಎಂದು ತೀರ್ಮಾನಿಸಿತು. ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರುವಂತೆ ಪ್ರಶಾಂತ್ ಭೂಷಣ್​ಗೆ ಮೂರು ದಿನ ಕಾಲಾವಕಾಶವನ್ನೂ ಕೋರ್ಟ್ ನೀಡಿತು.

    ಇದನ್ನೂ ಓದಿ: ಬೌದ್ಧ ಧರ್ಮ ಸಮಾಜವಾದಕ್ಕೆ ತೆರೆದುಕೊಳ್ಳಬೇಕು; ಟಿಬೆಟ್​ನಲ್ಲಿ ವಿಭಜಕ ಶಕ್ತಿ ತಡೆಯಲು ಅಭೇದ್ಯ ಕೋಟೆ ನಿರ್ಮಿಸಬೇಕು: ಚೀನಾ

    ಆದರೆ, 63 ವರ್ಷದ ಪ್ರಶಾಂತ್ ಭೂಷಣ್ ತಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಿದರೆ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಂತೆ. ನೀವು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆಯೇ ಹೊರತು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

    ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕಳೆದ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ಅವರನ್ನ ಕ್ಷಮಿಸಿಬಿಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದು ಕುತೂಹಲ ಮೂಡಿಸಿತು. ಪ್ರಶಾಂತ್ ಭೂಷಣ್ ಬಹಳಷ್ಟು ಮಂದಿಗೆ ನೆರವಾಗಿದ್ದಾರೆ. ಅದನ್ನು ಪರಿಗಣಿಸಿ ಅವರಿಗೆ ಎಚ್ಚರಿಕೆ ಕೊಟ್ಟು ಕ್ಷಮಿಸುವುದು ಉತ್ತಮ ಎಂಬ ಸಲಹೆ ನೀಡಿದ್ದರು. ಆದರೆ, ನ್ಯಾಯಪೀಠ ಇದಕ್ಕೆ ಸಮಾಧಾನಗೊಳ್ಳಲಿಲ್ಲ. ಪ್ರಶಾಂತ್ ಭೂಷಣ್ ತಮ್ಮ ತಪ್ಪನ್ನೇ ಒಪ್ಪಿಕೊಳ್ಳುತ್ತಿಲ್ಲ ಎಂದು ತನ್ನ ಅಸಮಾಧಾನ ತೋರ್ಪಡಿಸಿತು.

    ಇದನ್ನೂ ಓದಿ: ಲಾಕ್‌ಡೌನ್ ನಿಯಮ ಉಲ್ಲಂಘನೆ; ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ 14 ದಿನ ಬಲವಂತದ ಕ್ವಾರಂಟೈನ್

    ಇವತ್ತೂ ಕೂಡ ಪ್ರಶಾಂತ್ ಭೂಷಣ್ ಅವರು ಕ್ಷಮೆ ಕೋರುವ ಅವಕಾಶ ಹೊಂದಿದ್ದಾರೆ. ಅವರು ಕ್ಷಮೆ ಕೋರಿದರೆ ಕೆಲ ಎಚ್ಚರಿಕೆಗಳೊಂದಿಗೆ ಅವರಿಗೆ ಬೇರೆ ಯಾವ ಶಿಕ್ಷೆಯೂ ಜಾರಿಯಾಗುವುದಿಲ್ಲ. ಒಂದು ವೇಳೆ ಅವರು ಕ್ಷಮೆ ಕೋರದಿದ್ದರೆ ಅವರಿಗೆ 6 ತಿಂಗಳವರೆಗೆ ಸರಳ ಸೆರೆಮನೆವಾಸದ ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ, ಅಥವಾ ಎರಡನ್ನೂ ಅವರಿಗೆ ನೀಡುವ ಅವಕಾಶವನ್ನ ಸರ್ವೋಚ್ಚ ನ್ಯಾಯಾಲಯ ಹೊಂದಿದೆ.
    Published by:Vijayasarthy SN
    First published: