Padmanabhaswamy Temple - ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ‘ಮಹಾರಹಸ್ಯ’ ದ್ವಾರ ತೆರೆಯಲಾಗುತ್ತಾ? ಸುಪ್ರೀಂ ತೀರ್ಪು ಇಂದು

ಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿ ನಿಧಿಗಳಿದ್ದ ಐದು ಕೋಣೆಗಳನ್ನ ಈಗಾಗಲೇ ತೆರೆದು ಪರಿಶೀಲನೆ ಮಾಡಲಾಗಿದೆ. ಈಗ ಉಳಿದಿರುವುದು ಪ್ರಮುಖ ದ್ವಾರ. ಇಲ್ಲಿ ಶಕ್ತಿಶಾಲಿ ನಾಗ ಸರ್ಪ ಕಾವಲು ಕಾಯುತ್ತಿದೆ ಎಂಬ ನಂಬಿಕೆ ಬಲವಾಗಿದೆ. ಇದನ್ನು ತೆರೆಯಬೇಕೋ ಬೇಡವೋ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ.

news18-kannada
Updated:July 13, 2020, 10:57 AM IST
Padmanabhaswamy Temple - ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ‘ಮಹಾರಹಸ್ಯ’ ದ್ವಾರ ತೆರೆಯಲಾಗುತ್ತಾ? ಸುಪ್ರೀಂ ತೀರ್ಪು ಇಂದು
ಪದ್ಮನಾಭ ದೇವಸ್ಥಾನ
  • Share this:
ನವದೆಹಲಿ(ಜುಲೈ 13): ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನದೊಳಗೆ ಅಪರಿಮಿತ ನಿಧಿ ಅಡಗಿದೆ ಎಂದು ನಂಬಲಾಗಿರುವ ಪ್ರಮುಖ ದ್ವಾರ (Vault-B) ತೆರೆಯುವ ಕಾಲ ಸನ್ನಿಹಿತವಾಗಿದೆಯಾ? ಇವತ್ತು ಸರ್ವೋಚ್ಚ ನ್ಯಾಯಾಲಯ ಇದರ ತೀರ್ಮಾನ ಮಾಡಲಿದೆ. ನ್ಯಾ| ಉದಯ್ ಲಲಿತ್ ಮತ್ತು ನ್ಯಾ| ಇಂದು ಮಲ್ಹೋತ್ರಾ ಅವರಿರುವ ಸುಪ್ರೀಂ ನ್ಯಾಯಪೀಠದಲ್ಲಿ ಇವತ್ತು ನಿರ್ಧಾರವಾಗಲಿದೆ.

ಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿರುವ ಐದು ಕೋಣೆಗಳನ್ನ ಈಗಾಗಲೇ ತೆರೆದು ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಸುಮಾರು 1 ಲಕ್ಷ ಕೋಟಿ ರೂ ಮೌಲ್ಯವಿರುವ ಒಡವೆ, ವಿಗ್ರಹ, ಶಸ್ತ್ರಾಸ್ತ್ರ, ಉಪಕರಣ, ನಾಣ್ಯ ಇತ್ಯಾದಿಗಳು ಸಿಕ್ಕಿವೆ. ಆದರೆ, ಮುಖ್ಯ ಕೋಣೆ ಎಂದು ಪರಿಗಣಿಸಲಾದ ವೋಲ್ಟ್-ಬಿ ಅನ್ನು ತೆರೆಯಲು ಬಹಳ ವಿರೋಧ ಇದೆ. ಇದರ ಬಗ್ಗೆ ದಂತಕಥೆಗಳೇ ಇವೆ. ಈ ಕೋಣೆಯಲ್ಲಿರುವ ಅಪಾರ ನಿಧಿ ಸಂಪತ್ತನ್ನು ನಾಗ ಸರ್ಪ ಕಾವಲಿದೆ. ಇದನ್ನು ಯಾರೇ ತೆರೆದರೂ ದಾಳಿ ಮಾಡಿ ಸಾಯಿಸುತ್ತದೆ ಎಂದು ನಂಬಲಾಗಿದೆ. ಎಮಿಲಿ ಗಿಲ್​ಕ್ರಿಸ್ಟ್ ಹ್ಯಾಚ್ ಎಂಬ ವ್ಯಕ್ತಿ ಬರೆದಿರುವ ಪುಸ್ತಕದಲ್ಲಿ ಈ ದೇವಸ್ಥಾನದ ನಿಧಿ ಕೋಣೆಗಳ ಪ್ರಸ್ತಾಪ ಇದೆ. 1931ರಲ್ಲಿ ಇಲ್ಲಿರುವ ನಿಧಿ ಕೋಣೆಗಳನ್ನ ತೆರೆಯಲು ಯತ್ನಿಸಿದ ಜನರ ಗುಂಪು ಅಲ್ಲಿ ನಾಗರ ಹಾವುಗಳನ್ನ ಕಂಡು ಎದ್ದುಬಿದ್ದು ಹೋಗಿ ಜೀವ ಉಳಿಸಿಕೊಂಡರಂತೆ.

ಇದನ್ನೂ ಓದಿ: ಕೊರೋನಾ ಬಿಕ್ಕಟ್ಟು; ವಿಶ್ವಾದ್ಯಂತ ಕಂಪನಿಗಳ ಮೇಲೆ ಬಿದ್ದಿರುವ ಸಾಲದ ಹೊರೆ ಎಷ್ಟು ಗೊತ್ತಾ?

ಆದರೆ, ಈ ನಿಧಿ ಕೋಣೆಗಳಲ್ಲಿ ಯಾವುದೇ ಅತಿಮಾನುಷ ಶಕ್ತಿ ಇಲ್ಲ ಎಂಬುದು 2011ರಲ್ಲಿ ಸುಪ್ರೀಂ ನಿರ್ದೇಶಿತ ತಂಡ ಸಾಬೀತು ಮಾಡಿತು. ನೆಲಮಾಳಿಗೆಯಲ್ಲಿದ್ದ ಐದು ಕೋಣೆಗಳ ಬಾಗಿಲು ತೆರೆದು ಪ್ರವೇಶಿಸಿ ಒಳಗಿದ್ದ ವಸ್ತುಗಳನ್ನ ಪರಿಶೀಲನೆ ಮಾಡಿತ್ತು. ಆದರೆ, ಪ್ರಮುಖ ಕೋಣೆಯಾದ ವೋಲ್ಟ್-ಬಿ ಬಹಳ ಪವಿತ್ರವಾಗಿದ್ದು, ಇದನ್ನು ತೆರೆದವರಿಗೆ ಸಾವು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಬಹಳ ಬಲವಾಗಿದೆ.

ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್ ರಾಯ್ ಅವರು ಈ ನಂಬಿಕೆಯನ್ನೂ ಸುಳ್ಳೆಂದು ಹೇಳಿದ್ದಾರೆ. ಪದ್ಮನಾಭ ದೇವಸ್ಥಾನದ ಆಸ್ತಿ ಬಗ್ಗೆ ಆಡಿಟ್ ಮಾಡಲು ಸುಪ್ರೀಂ ಕೋರ್ಟ್​ನಿಂದ ನೇಮಕವಾಗಿದ್ದ ರಾಯ್ 2014ರಲ್ಲಿ ಸಲ್ಲಿಸಿದ ವರದಿಯಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ. ವೋಲ್ಟ್-ಬಿ ಕೋಣೆಯನ್ನು ಈಗಾಗಲೇ ಹಲವು ಬಾರಿ ತೆರೆಯಲಾಗಿದೆ. 1990ರಲ್ಲಿ ಎರಡು ಬಾರಿ, ಹಾಗೂ 2002ರಲ್ಲಿ ಐದು ಬಾರಿ ಈ ಕೋಣೆಯ ಬಾಗಿಲು ತೆರೆಯಲಾಗಿರುವುದು ದೇವಸ್ಥಾನದ ಅಧಿಕೃತ ದಾಖಲೆಗಳಿಂದಲೇ ತಿಳಿದುಬರುತ್ತದೆ ಎಂದು ವಿನೋದ್ ರಾಯ್ ತಮ್ಮ ವರದಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Petrol Diesel Price: ಕಳೆದ 6 ವಾರದಲ್ಲಿ 26ನೇ ಭಾರಿ ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ: ಐತಿಹಾಸಿಕ ದಾಖಲೆ ಬರೆದ ತೈಲ ಬೆಲೆ

ಪದ್ಮನಾಭ ದೇವಸ್ಥಾನದ ನಿಧಿ ಕೋಣೆಗಳನ್ನು ತೆರೆಯಲು ಬಲವಾಗಿ ವಿರೋಧಿಸಿದವರಲ್ಲಿ ಟ್ರಾವಂಕೋರ್ ರಾಜಮನೆತನದವರು ಪ್ರಮುಖರು. ರಾಜಮನೆತನದವರು ಈ ದೇವಸ್ಥಾನವನ್ನು ತಮ್ಮ ಖಾಸಗಿ ಸ್ವತ್ತೆಂಬಂತೆ ವರ್ತಿಸುತ್ತಿದ್ದಾರೆಂದು ಕೆಲ ವಲಯಗಳಲ್ಲಿ ಅಸಮಾಧಾನ ಇದೆ. 1991ರಲ್ಲೇ ಟ್ರಾವಂಕೋರ್​ನ ಕೊನೆಯ ರಾಜ ಸಾವನ್ನಪ್ಪಿದ್ದಾರೆ. ಈಗ ಅವರ ಕುಟುಂಬಸ್ಥರಿಗೆ ದೇವಸ್ಥಾನದ ನಿರ್ವಹಣೆ ಮುಂದುವರಿಸುವುದು ಸಮಂಜಸವಲ್ಲ. ದೇವಸ್ಥಾನ ನಿರ್ವಹಣೆಗೆ ಮಂಡಳಿ ರಚಿಸಬೇಕೆಂದು ಕೆಲ ಭಕ್ತರು ಬೇಡಿಕೆ ಇಟ್ಟಿದ್ದಾರೆ.ಈ ವಿಚಾರವೂ ಸುಪ್ರೀಂ ಕೋರ್ಟ್ ವಿಚಾರಣೆಗೆ ಬರಲಿದೆ. ಶಬರಿಮಲೆ ದೇವಸ್ಥಾನದ ಮಂಡಳಿ ರೀತಿಯಲ್ಲೇ ಪದ್ಮನಾಭ ದೇವಸ್ಥಾನಕ್ಕೂ ಸ್ವಾಯತ್ತ ಮಂಡಳಿಯೊಂದರ ನೇಮಕಾತಿ ಬಗ್ಗೆಯೂ ಸುಪ್ರೀಂ ತೀರ್ಮಾನ ಮಾಡಬಹುದು. ದೇವಸ್ಥಾನದಲ್ಲಿ ಟ್ರಾವಂಕೋರ್ ರಾಜಮನೆತ ಎಷ್ಟು ಹಕ್ಕು ಹೊಂದಿದೆ ಎಂಬುದನ್ನೂ ಕೋರ್ಟ್ ತೀರ್ಮಾನಿಸುವ ಸಾಧ್ಯತೆ ಇದೆ.
Published by: Vijayasarthy SN
First published: July 13, 2020, 10:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading