ಶಬರಿಮಲೆಗೆ ಮಹಿಳೆಯರ ಪ್ರವೇಶ; ಯಾವುದೇ ಆದೇಶ ನೀಡದೆ 7 ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದ ಸುಪ್ರೀಂ

ಶಬರಿಮಲೆ ಪ್ರಕರಣವನ್ನು ಇಂದು ವಿಚಾರಣೆಗೆ ಒಳಪಡಿಸಿದ ಐವರು ನ್ಯಾಯಾಧೀಶರಲ್ಲಿ ಮೂವರು ಈ ವಿಷಯವನ್ನು ದೊಡ್ಡ ನ್ಯಾಯಪೀಠದ ವಿಚಾರಣೆಗೆ ಉಲ್ಲೇಖಿಸಿದ್ದಾರೆ. ಉಳಿದ ಇಬ್ಬರು ನ್ಯಾಯಾಧೀಶರು 2018ರ ಸುಪ್ರೀಂ ಕೋರ್ಟ್​ ತೀರ್ಪನ್ನು ಕೇರಳ ಸರ್ಕಾರ ಪಾಲನೆ ಮಾಡುವಂತೆ ನಿರ್ದೇಶನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶಬರಿಮಲೆ (ಪ್ರಾತಿನಿಧಿಕ ಚಿತ್ರ).

ಶಬರಿಮಲೆ (ಪ್ರಾತಿನಿಧಿಕ ಚಿತ್ರ).

  • Share this:
ನವ ದೆಹಲಿ (ಡಿಸೆಂಬರ್​ 13); ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಹಾಗೂ ಅವರಿಗೆ ಪೊಲೀಸ್​ ರಕ್ಷಣೆ ನೀಡುವ ಕುರಿತು ಪ್ರಸ್ತುತ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಇಂದು ತಿಳಿಸಿದೆ.

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಪ್ರಕರಣ ವಿಚಾರಣೆಗೆ ಬಂದಿತ್ತು. ಈ ವೇಳೆ ಪ್ರರಕಣಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡದ ನ್ಯಾಯಪೀಠ “ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ 2018ರ ಸುಪ್ರೀಂ ಕೋರ್ಟ್​ ತೀರ್ಪು ಅಂತಿಮವಲ್ಲ” ಎಂದು ಸ್ಪಷ್ಟಪಡಿಸಿದೆ.

“2018ರಲ್ಲಿ ಸುಪ್ರೀಂ ಪಂಚ ಸದಸ್ಯ ಪೀಠ ಎಲ್ಲಾ ಮಹಿಳೆಯರಿಗೂ ಶಬರಿಮಲೆಗೆ ಪ್ರವೇಶ ಕಲ್ಪಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ತೀರ್ಪನ್ನು ಅದಕ್ಕಿಂತ ದೊಡ್ಡ ಪೀಠದ ಪರಿಶೀಲನೆಗೆ ಉಲ್ಲೇಖಿಸಲಾಗಿದೆ. ಹೀಗಾಗಿ ಮಹಿಳೆಯರ ರಕ್ಷಣಾ ದೃಷ್ಟಿಯಿಂದ ಇಂದು ಯಾವುದೇ ಆದೇಶವನ್ನು ಹೊರಡಿಸುವುದಿಲ್ಲ” ಎಂದು ಸುಪ್ರೀಂ ಕೋರ್ಟ್​ ಪಂಚ ಸದಸ್ಯ ಪೀಠ ತಿಳಿಸಿದೆ. ಈ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಬಿ.ಆರ್​. ಗವಾಯಿ ಮತ್ತು ಸೂರ್ಯಕಾಂತ್​ ಸಹ ಇದ್ದರು.

ಈ ವೇಳೆ ಪ್ರಮುಖ ಅರ್ಜಿದಾರರಾದ ಫಾತಿಮಾ ಎ.ಎಸ್​. ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೆಸ್​, “2018ರ ಸುಪ್ರೀಂ ಕೋರ್ಟ್​ ತೀರ್ಪಿನ ಪ್ರಕಾರ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಅನುಕೂಲ ಕಲ್ಪಿಸಿಕೊಡಬೇಕು. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಬೇಕು” ಎಂದು ಒತ್ತಾಯಿಸಿದರು.

ಈ ವೇಳೆ ಉತ್ತರಿಸಿದ ಪಂಚ ಸದಸ್ಯ ಪೀಠ, “ಶಬರಿಮಲೆ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು. ಈ ದೇಶದಲ್ಲಿ ಕೆಲವು ಸಮಸ್ಯೆಗಳು ಸ್ಫೋಟಕವಾಗಿ ಪರಿಣಮಿಸುತ್ತವೆ. ಗಲಭೆಗೆ ಕಾರಣವಾಗುತ್ತವೆ. ಇಂತಹ ಸಮಸ್ಯೆಗಳಲ್ಲಿ ಶಬರಿಮಲೆಯೂ ಒಂದು. ದೇವಾಲಯದಲ್ಲಿ ಪೊಲೀಸರ ರಕ್ಷಣಾ ವ್ಯವಸ್ಥೆ ಕಲ್ಪಿಸುವುದು ನಮ್ಮ ಕಲ್ಪನೆಯಲ್ಲೇ ಇಲ್ಲ. ಹೀಗಾಗಿ ಈ ಪ್ರಕರಣವನ್ನು 7 ನ್ಯಾಯಮೂರ್ತಿಗಳ ಪೀಠ ವಿಚಾರಣೆಗೆ ತೆಗೆದುಕೊಳ್ಳುವವರೆಗೆ ತಾಳ್ಮೆ ವಹಿಸಿ” ಎಂದು ಕಿವಿಮಾತು ಹೇಳಿದೆ.

ಶಬರಿಮಲೆ ಪ್ರಕರಣವನ್ನು ಇಂದು ವಿಚಾರಣೆಗೆ ಒಳಪಡಿಸಿದ ಐವರು ನ್ಯಾಯಾಧೀಶರಲ್ಲಿ ಮೂವರು ಈ ವಿಷಯವನ್ನು ದೊಡ್ಡ ನ್ಯಾಯಪೀಠದ ವಿಚಾರಣೆಗೆ ಉಲ್ಲೇಖಿಸಿದ್ದಾರೆ. ಉಳಿದ ಇಬ್ಬರು ನ್ಯಾಯಾಧೀಶರು 2018ರ ಸುಪ್ರೀಂ ಕೋರ್ಟ್​ ತೀರ್ಪನ್ನು ಕೇರಳ ಸರ್ಕಾರ ಪಾಲನೆ ಮಾಡುವಂತೆ ನಿರ್ದೇಶನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಚಾರಣೆಯ ಕೊನೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಎಸ್​.ಎ. ಬೊಬ್ಡೆ, “ಕಾನೂನು ನಮ್ಮ ಪರವಾಗಿರಬಹುದು. ಆದರೆ, ವಾಸ್ತವದಲ್ಲಿ ಇದು ತುಂಬಾ ಭಾವನಾತ್ಮಕವಾದ ವಿಚಾರ. ದಯವಿಟ್ಟು ಎಲ್ಲರೂ ತಾಳ್ಮೆಯಿಂದ ಇರಿ. ಇನ್ನೂ ದೊಡ್ಡ ಬೆಂಚ್​ ಸ್ಥಾಪಿಸಲಾಗಿಲ್ಲ. ಹೀಗಾಗಿ ಇಂದು ಯಾವುದೇ ಆದೇಶವನ್ನು ರವಾನಿಸಲು ಪೀಠ ನಿರ್ಧರಿಸಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, “ಏಳು ನ್ಯಾಯಾಧೀಶರ ಪೀಠವನ್ನು ತ್ವರಿತವಾಗಿ ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಪೀಠ ರಚನೆಯಾದ ನಂತರ ಶಬರಿಮಲೆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಆದರೆ, ಆವರೆಗೆ 2018ರ ತೀರ್ಪಿನಂತೆ ಕೇರಳ ಸರ್ಕಾರ ಬಿಂದು ಎಂಬ ಮಹಿಳೆಗೆ ಮಾತ್ರ ಶಬರಿಮಲೆ ದರ್ಶನಕ್ಕೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ : ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮುನ್ನ ಈ ವ್ರತ ಪಾಲಿಸುವುದು ಕಡ್ಡಾಯ
Published by:MAshok Kumar
First published: