Lakhimpur Kheri Violence| ಸ್ವಯಂ ದೂರು ದಾಖಲಿಸಿಕೊಂಡ‌ ಸುಪ್ರೀಂ ಕೋರ್ಟ್: ಇಂದು ವಿಚಾರಣೆ!

ಇತ್ತೀಚೆಗೆ ಇದೇ ಉತ್ತರ ಪ್ರದೇಶದಲ್ಲಿ ಹಾತ್ರಾಸ್ ಅತ್ಯಾಚಾರ ಘಟನೆ ನಡೆದಾಗ ಅಲಹಾಬಾದ್ ಹೈಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದೀಗ ಲಖೀಂಪುರ್ ಖೇರಿ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯ ದೂರು ದಾಖಲಿಸಿಕೊಂಡಿದೆ.

ಲಖೀಂಪುರ್​ಖೇರಿ ಹಿಂಸಾಚಾರ.

ಲಖೀಂಪುರ್​ಖೇರಿ ಹಿಂಸಾಚಾರ.

  • Share this:
ನವ ದೆಹಲಿ (ಅಕ್ಟೋಬರ್​ 07): ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence ) ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಅದರ ವಿಚಾರಣೆ ಇಂದು ನಡೆಯಲಿದೆ. ಲಖೀಂಪುರ್ ಖೇರಿಯಲ್ಲಿ ರೈತರು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾ (Ashish Mishra) ಅವರು ರೈತರ ಮೇಲೆ ಕಾರು ಚಲಾಯಿಸಿದ್ದಾರೆ. ಇದರಿಂದ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಳಿಕ ರೈತರು ಆಕ್ರೋಶಭರಿತ ರಾಗಿದ್ದಾರೆ. ಆಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಅಲ್ಲದೆ ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನೊಬ್ಬ ಬಲಿ ಆಗಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ (Uttar Pradesh) ಇತ್ತೀಚೆಗೆ ಬಿಜೆಪಿ ಶಾಸಕನೇ ರೂವಾರಿ ಎನ್ನಲಾದ ಹಾತ್ರಾಸ್ ಅತ್ಯಾಚಾರ ಘಟನೆ (Hathras Rape Incident) ನಡೆದಾಗಲೂ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಆಗ ಅಲಹಾಬಾದ್ ಹೈಕೋರ್ಟ್ (Allahabad High Court) ಸ್ವಯ ಪ್ರೇರಿತ ದೂರು ದಾಖಲಿಸಿಕೊಂಡು ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈಗ ಲಖೀಂಪುರ್ ಖೇರಿಯಲ್ಲಿ ನಡೆದ ಮಾರಣಹೋಮದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ಆಗುತ್ತಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಪಾತ್ರ ಇರುವ ಬಗ್ಗೆ ಚರ್ಚೆ ಆಗುತ್ತಿದೆ.

ಹತ್ರಾಸ್ ನಂತೆ ಲಖೀಂಪುರ್ ಖೇರಿಗೂ ರಾಜಕೀಯ ನಾಯಕರ ನಿರ್ಬಂಧ ಹೇರಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ಇಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ (Chief Justice NV Ramana), ನ್ಯಾಯಮೂರ್ತಿ ಸೂರ್ಯಕಾಂತ್ (Justices Surya Kant) ಹಾಗೂ ನ್ಯಾಯಮೂರ್ತಿ ಹಿಮಾ ಕೋಹ್ಲಿ (Justice Hima Kohli) ಅವರನ್ನೊಳಗೊಂಡ‌ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಿದೆ.

ಲಖೀಂಪುರ್ ಖೇರಿಗೆ ತೆರಳಿದ ರಾಹುಲ್-ಪ್ರಿಯಾಂಕಾ

ಮೃತ ಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಲಖೀಂಪುರ್ ಖೇರಿಗೆ ತೆರಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC Former President Rahul Gandhi) ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ (Uttar Pradesh Congress In Charge and AICC General Secretary Priyanka Gandhi Vadra) ಅವರನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರ ಶತಪ್ರಯತ್ನ ಮಾಡಿತು.

ಆದರೆ 'ನೀವು ನಮ್ಮನ್ನು ಹೊಡೆದು, ಬಂಧಿಸಿ, ಹೂತು ಹಾಕಿದರೂ ಸರಿ, ನಾವಂತೂ ವಾಪಸ್ ತೆರಳಲ್ಲ' ಎಂದು ರಾಹುಲ್ ಗಾಂಧಿ ಪಟ್ಟು‌ ಹಿಡಿದಿದ್ದರಿಂದ ಉತ್ತರ ಪ್ರದೇಶ ಸರ್ಕಾರ ಮಣಿಯಬೇಕಾಯಿತು.‌ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಮೃತ ರೈತರ ಕುಟುಂಬಗಳಿಗೆ ತೆರಳಿ ಸಾಂತ್ವನ‌ ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ (Uttar Pradesh BJP Government) ಲಖೀಂಪುರ್ ಖೇರಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಾಂಗ್ರೆಸ್ ನಿಯೋಗದ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದಕ್ಕೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ ಅವರು 'ನಿಷೇಧಾಜ್ಞೆ ಇದ್ದರೆ ನಾಲ್ಕಕ್ಕಿಂತ ಹೆಚ್ಚು ಜನ ಹೋಗುವಂತಿಲ್ಲ, ನಾವು ಮೂರು ಜನ ಲಖೀಂಪುರ್ ಖೇರಿಗೆ ಹೋಗುತ್ತೇವೆ' ಎಂದಿದ್ದರು.

ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel), ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Chief Minister Charanjith Sing Channi) ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (K.C. Venugopal) ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ (Ranadeep Sing Surjewala) ಅವರೊಂದಿಗೆ ದೆಹಲಿಯಿಂದ ಲಕ್ನೋಗೆ ತೆರಳಿದ್ದರು. ಅಲ್ಲಿ ಪೊಲೀಸರು ಅವರನ್ನು ತಡೆದದ್ದರಿಂದ ರಾಹುಲ್ ಗಾಂಧಿ ಅವರು ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್‌ ಜೊತೆಗೆ ಹೊರಟರು. ಲಖೀಂಪುರ್ ಖೇರಿ ತಲುಪುವ ಮಾರ್ಗ ಮಧ್ಯದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಸೇರಿಕೊಂಡರು.

ಇದಕ್ಕೂ ಮೊದಲು ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC Head Quarter) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಪ್ರತಿಪಕ್ಷದ ನಾಯಕರು ಹಿಂಸಾಚಾರ ನಡೆದ ಸ್ಥಳಕ್ಕೆ ಹೋಗುವುದನ್ನು ತಡೆಯಲಾಗಿತ್ತು. ಹಿಂದೆ ಹಾತ್ರಾಸ್ ಅತ್ಯಾಚಾರ ಘಟನೆ (Hathras Rape Incident) ನಡೆದಾಗಲೂ ಹೀಗೆ ಮಾಡಿದ್ದರು. ನಾವು ಅಲ್ಲಿಗೆ ಹೋಗಿದ್ದರಿಂದ ಆ ಘಟನೆ ಬಗ್ಗೆ ತನಿಖೆ ಆಯಿತು. ಈಗಲೂ ಲಖೀಂಪುರ್ ಖೇರಿಗೆ ತೆರಳುವ ಹಿಂದೆ ಮೃತಪಟ್ಟ ರೈತರನ್ನು ಸಂತೈಸುವ ಮತ್ತು ತನಿಖೆ ಆಗುವಂತೆ ಒತ್ತಾಯಿಸುವ ಉದ್ದೇಶ ಮಾತ್ರ ಇದೆ ಎಂದು ಹೇಳಿದ್ದರು.

ಅಲ್ಲದೆ ದೇಶದಲ್ಲಿ ಈಗ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ಏಕೆಂದರೆ ದೇಶದಲ್ಲಿ ಭಯಂಕರ ಲೂಟಿ ಆಗುತ್ತಿದೆ. ಜನರ ಹಣ ಮತ್ತು ರೈತರ ಭೂಮಿಯನ್ನು ಲೂಟಿ ಮಾಡಲಾಗುತ್ತಿದೆ.‌ ಅದನ್ನು ಯಾರೂ ಕೇಳಬಾರದೆಂದು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ.‌ ಬಿಜೆಪಿ (BJP) ಮತ್ತು‌ ಆರ್ ಎಸ್ ಎಸ್ (RSS) ರೈತರನ್ನು ನಿಯಂತ್ರಿಸಲು ಯತ್ನಿಸುತ್ತಿವೆ. ರೈತರನ್ನು ಮಾತ್ರವಲ್ಲ ಎಲ್ಲರನ್ನೂ ‌ನಿಯಂತ್ರಿಸಲು ಯತ್ನಿಸುತ್ತಿವೆ. ಕೇಂದ್ರ ಸರ್ಕಾರ ಹಂತಹಂತವಾಗಿ ರೈತರನ್ನು ಮುಗಿಸುತ್ತಿದೆ. ವ್ಯವಸ್ಥಿತವಾಗಿ ಮುಗಿಸುತ್ತಿದೆ. ಮೊದಲಿಗೆ ಭೂಸ್ವಾಧೀನ ಕಾನೂನು ತಿದ್ದುಪಡಿ ತಂದರು. ನಂತರ ರೈತ ವಿರೋಧಿ‌ 3 ಕೃಷಿ ಕಾಯಿದೆಗಳನ್ನು ತಂದರು. ಈಗ ರೈತರ ಮೇಲೆ ದಾಳಿ ಮಾಡಿ ಬಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಿಯಾಂಕಾ ಗಾಂಧಿಗೆ ಬಿಡುಗಡೆ;

ಪಿಸಿ ಗೆಸ್ಟ್ ಹೌಸ್ ನಲ್ಲಿ ಗೃಹ ಬಂಧನದಲ್ಲಿ ಇರಿಸಲ್ಪಟ್ಟಿದ್ದ ಪ್ರಿಯಾಂಕಾ ಗಾಂಧಿ ಫೋನ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ 'ಲಖೀಂಪುರ್ ಖೇರಿ ಹಿಂಸಾಚಾರದ ರೂವಾರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಬಂಧನ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನನ್ನನ್ನು ಇಲ್ಲಿರಿಸಿ 38 ಗಂಟೆ ಕಳೆದರೂ ಎಫ್‍ಐಆರ್ (FIR) ಕಾಪಿ ನೀಡುತ್ತಿಲ್ಲ ಏಕೆ? ವಕೀಲರನ್ನು ಸಂಪರ್ಕಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Lakhimpur Kheri Violence| ರಾಹುಲ್ ಗಾಂಧಿ ಭಲೇ ನಾಟಕಕಾರ; ಉತ್ತರಪ್ರದೇಶ ಸಚಿವ ಸಿದ್ಧಾರ್ಥ್​ ನಾಥ್ ಸಿಂಗ್ ಕಿಡಿ

ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಗೆಸ್ಟ್ ಹೌಸ್ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ‌ ಬಂಧನದಲ್ಲಿ ಇರಿಸಿದ ಬಿಜೆಪಿ ಸರ್ಕಾರದ ನಡೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಈ‌ ಹಿನ್ನೆಲೆಯಲ್ಲಿ ಮೂರು ದಿನಗಳ ಬಳಿಕ‌ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡಲಾಯಿತು.
Published by:MAshok Kumar
First published: