ನವದೆಹಲಿ: ಗಣರಾಜ್ಯೋತ್ಸವದ ದಿನ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರ ವಿಚಾರವಾಗಿ ಆರು ಪತ್ರಕರ್ತರು ಸೇರಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಇದೀಗ ಅವರ ಬಂಧನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ ಮತ್ತು ಈ ಕುರಿತು ಎಲ್ಲಾ ಅರ್ಜಿಗಳ ಬಗ್ಗೆ ನೋಟಿಸ್ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು, ಬಾರ್ ಆ್ಯಂಡ್ ಬೆಂಚ್ ಹೇಳಿಕೆ ಉಲ್ಲೇಖಿಸಿ, ನಾವು ಎರಡು ವಾರಗಳ ನಂತರ ಈ ವಿಚಾರವಾಗಿ ವಿಚಾರಣೆ ನಡೆಸುತ್ತೇವೆ. ಏತನ್ಮಧ್ಯೆ ಬಂಧನಕ್ಕೆ ತಡೆ ನೀಡಲಾಗಿದೆ ಎಂದು ಹೇಳಿದರು.
ಶಶಿ ತರೂರ್, ಪತ್ರಕರ್ತರಾದ ರಾಜ್ದೀಪ್ ಸರ್ದೆಸಾಯಿ, ಜಾಫರ್ ಆಘಾ, ಮೃನಾಲ್ ಪಾಂಡೆ, ವಿನೋದ್ ಕೆ. ಜೋಸ್, ಪರೇಶ್ ನಾಥ್, ಮತ್ತು ಅನಂತ್ ನಾಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಎಸ್.ಎ.ಬೋಬ್ಡೆ, ನ್ಯಾ.ಎ.ಎಸ್. ಬೋಪಣ್ಣ ಹಾಗೂ ನ್ಯಾ.ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಟ್ವೀಟ್ ವಿಚಾರವಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸಬೇಕೆಂದು ಕೇಳಿಕೊಂಡರು. ಆದರೆ ಇದನ್ನು ನ್ಯಾಯಾಲಯ ನಿರಾಕರಿಸಿತು. "ಈ ಟ್ವೀಟ್‌ಗಳು ಲಕ್ಷಾಂತರ ಅನುಯಾಯಿಗಳಲ್ಲಿ ಎಂತಹ ಭಯಾನಕ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ನಾನು ನಿಮಗೆ ತೋರಿಸಬಲ್ಲೆ" ಎಂದು ಮೆಹ್ತಾ ಉಲ್ಲೇಖಿಸಿದ್ದರು.
ಇದನ್ನು ಓದಿ: Deep Sidhu Arrest - ರೈತ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ; ನಟ ದೀಪ್ ಸಿಧು ಬಂಧನ
ಜೋಸ್ ಪರ ಹಾಜರಾದ ವಕೀಲ ಮುಕುಲ್ ರೋಹಟಗಿ ಅವರು ನ್ಯಾಯಾಲಯಕ್ಕೆ, "ನಾನು ಕಾರವಾನ್ ಮ್ಯಾಗಜೀನ್‌ನ ಸಂಪಾದಕನ ಪರವಾಗಿ ವಾದಿಸುತ್ತಿದ್ದೇನೆ. ಇವರು ಮಾಡಿರುವ ಟ್ವೀಟ್ನಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ನೋವಾಗಿಲ್ಲ. ಜನವರಿ 26 ರಂದು ಯಾರೋ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವ ವರದಿ ಮಾಡಲಾಗಿದೆ. ಮತ್ತು ಆ ಬಳಿಕ ನಾವು ಅದನ್ನು ಸರಿಪಡಿಸಿದ್ದೇವೆ." ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ