ಸಿಸಿಐ ತನಿಖೆ: ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

CCI Investigation: ಸ್ಪರ್ಧಾತ್ಮಕ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿಸಿಐ ತನಿಖೆಯನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಜುಲೈ 23ರಂದು ವಜಾಗೊಳಿಸಿತ್ತು

ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​

  • Share this:
ನವದೆಹಲಿ: ಸ್ಪರ್ಧಾ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗಕ್ಕೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.

ವಿಚಾರಣೆಯನ್ನು ಪ್ರಶ್ನಿಸುವುದು, ಅಪರಾಧ ಕಾನೂನಿನ ಅಡಿ ಎಫ್‌ಐಆರ್ ದಾಖಲಾಗುವುದಕ್ಕೂ ಮುನ್ನವೇ ನೋಟಿಸ್ ಬಯಸಿದಂತೆ ಎಂದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವ ತ್ರಿಸದಸ್ಯ ನ್ಯಾಯಪೀಠ, ಸಿಸಿಐ ನಡೆಸುವ ತನಿಖೆಗೆ ಒಳಪಡುವಂತೆ ಇ-ಕಾಮರ್ಸ್ ದಿಗ್ಗಜ ಸಂಸ್ಥೆಗಳಿಗೆ ಸೂಚಿಸಿತು.

'ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ವಿಚಾರಣೆಗೆ ಸ್ವತಃ ಒಳಪಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ನೀವು ಅದನ್ನು ಬಯಸಿಲ್ಲ. ನೀವು ತನಿಖೆಗೆ ಸಹಕಾರ ನೀಡಬೇಕು' ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಸಿಸಿಐಗೆ ಪ್ರತಿಕ್ರಿಯೆ ನೀಡುವ ಸಮಯವು ಆಗಸ್ಟ್ 9ರಂದೇ ಅಂತ್ಯಗೊಳ್ಳುತ್ತಿದೆ ಎಂದು ಫ್ಲಿಪ್‌ಕಾರ್ಟ್ ಪರ ಹಾಜರಾದ ಹಿರಿಯ ವಕೀಲ ಎಎಂ ಸಿಂಘ್ವಿ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಇನ್ನೂ ನಾಲ್ಕು ವಾರಗಳವರೆಗೆ ಕಾಲಾವಕಾಶ ವಿಸ್ತರಿಸಿತು. ಇದಕ್ಕೆ ಸಿಸಿಐ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.

ಸ್ಪರ್ಧಾತ್ಮಕ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿಸಿಐ ತನಿಖೆಯನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಜುಲೈ 23ರಂದು ವಜಾಗೊಳಿಸಿತ್ತು. ಈ ಸಂಸ್ಥೆಗಳು ಯಾವುದೇ ಉಲ್ಲಂಘನೆಯಲ್ಲಿ ಭಾಗಿಯಾಗದೆ ಇದ್ದರೆ ತನಿಖೆಗೆ ಒಳಪಡಲು ಹಿಂಜರಿಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಇಂದು ಭಾರೀ ಮಳೆ; ಬೆಂಗಳೂರಿಗರು ಸಂಜೆ ವೇಳೆಗೆ ಮನೆ ಸೇರಿಕೊಳ್ಳುವುದು ಒಳಿತು..!

ಸ್ಮಾರ್ಟ್ ಫೋನ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳ ಮಾರಾಟ ಮಾಡುವ ವ್ಯಾಪಾರಿಗಳನ್ನು ಒಳಗೊಂಡ ದೆಹಲಿ ವ್ಯಾಪಾರಿ ಮಹಾಸಂಘವು ನೀಡಿದ್ದ ದೂರಿನ ಅನ್ವಯ 2020ರ ಜನವರಿಯಲ್ಲಿ ಸಿಸಿಐ ತನಿಖೆಗೆ ಆದೇಶಿಸಿತ್ತು.

ಇದನ್ನೂ ಓದಿ: ರಾಜ್ಯದಲ್ಲಿಂದು ಭಾರೀ ಮಳೆ, ಚಿನ್ನದ ಬೆಲೆಯಲ್ಲಿ ಇಳಿಕೆ; ಇಂದಿನ ಪ್ರಮುಖ ಸುದ್ದಿಗಳಿವು

ಇದನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ರಿಟ್ ಅರ್ಜಿಯಲ್ಲಿ ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯಗಳನ್ನು ಈ ಹಂತದಲ್ಲಿ ಪೂರ್ವ ನಿರ್ಣಯ ಮಾಡುವುದು ಮತ್ತು ತನಿಖೆಗೆ ತಡೆ ನೀಡುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಅವರ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು.
Published by:Sharath Sharma Kalagaru
First published: