ನವದೆಹಲಿ(ಆ. 31): ನ್ಯಾಯಾಂಗ ಆದೇಶ ಉಲ್ಲಂಘಿಸಿ ತಮ್ಮ ಮಕ್ಕಳಿಗೆ ಹಣ ಕಳುಹಿಸಿದ ಕಾರಣಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದ ವಿಜಯ್ ಮಲ್ಯ ಇದೀಗ ಆ ಪ್ರಕರಣದಿಂದ ಹೊರಬರಲು ವಿಫಲಯತ್ನ ನಡೆಸಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂದು 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ನ್ಯಾ| ಯು.ಯು. ಲಲಿತ್ ಮತ್ತು ನ್ಯಾ| ಅಶೋಕ್ ಭೂಷಣ್ ಅವರಿದ್ದ ಸುಪ್ರೀಂ ನ್ಯಾಯಪೀಠ, “ಈ ಮನವಿಯಲ್ಲಿ ಯಾವುದೇ ಹುರುಳಿಲ್ಲ. ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ತೀರ್ಪು ನೀಡಿತು.
ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡದೇ ದೇಶದಿಂದ ಹೊರಹೋಗಿದ್ದ ವಿಜಯ್ ಮಲ್ಯಾ ಅವರು ತಮ್ಮ ಖಾತೆಗಳಿಂದ ಹಣ ವರ್ಗಾವಣೆ ಮಾಡಬಾರದು ಎಂದು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಆದೇಶ ಮಾಡಿದ್ದರು. ಆದರೂ ಕೂಡ ಮಲ್ಯ ಅವರು ಬ್ರಿಟನ್ ದೇಶದ ಡಿಯಾಜಿಯೋ ಸಂಸ್ಥೆಯಿಂದ ಬಂದಿದ್ದ 40 ಮಿಲಿಯನ್ ಡಾಲರ್ ಹಣವನ್ನು ತಮ್ಮ ಮಕ್ಕಳಿಗೆ ವರ್ಗಾವಣೆ ಮಾಡಿದ್ದರು. ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಎಸ್ಬಿಐ ಸೇರಿದಂತೆ ಭಾರತೀಯ ಬ್ಯಾಂಕುಗಳ ಗುಂಪು ಸುಪ್ರೀಂ ಕೋರ್ಟ್ನಲ್ಲಿ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ 2017 ಮೇ 9ರಂದು ಮಲ್ಯ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿತ್ತು.
ಆ ತೀರ್ಪನ್ನು ಪ್ರಶ್ನಿಸಿ ವಿಜಯ್ ಮಲ್ಯ ಮರುಪರಿಶೀಲನಾ ಅರ್ಜಿ ಹಾಕಿದ್ದರು. ಅದರ ವಾದ ಪ್ರತಿವಾದ ವಿಚಾರಣೆ ಮುಕ್ತಾಯಗೊಂಡು ಆಗಸ್ಟ್ 27ರಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತನ್ನ ತೀರ್ಪು ಕಾಯ್ದಿರಿಸಿತ್ತು. ಇದೀಗ, ಮಲ್ಯ ಅರ್ಜಿ ವಜಾ ಮಾಡಿ ತೀರ್ಪು ಪ್ರಕಟಿಸಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ