Shaheen Bagh : ಜಹಾಂಗೀರಪುರಿ ಬಳಿಕ ಶಾಹೀನ್ ಬಾಗ್​​ನಲ್ಲಿ ಬುಲ್ಡೋಜರ್ ಡ್ರೈವ್: ವಿರೋಧಕ್ಕೆ ಕಾರಣವೇನು?

ಶೀಘ್ರವೇ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಬರಲಿದ್ದು, ಅದೇ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಲೆಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ ಡ್ರೈವ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಎಎನ್​ಐ ಚಿತ್ರ

ಎಎನ್​ಐ ಚಿತ್ರ

  • Share this:
ನವದೆಹಲಿ, (ಮೇ 9): ಜಹಾಂಗೀರಪುರಿ ಬಳಿಕ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ - ಎಸ್‌ಡಿಎಂಸಿ (South Delhi Municipal Corporation -SDMC) ಶಾಹೀನ್ ಬಾಗ್ ಬಳಿಯ ಕಾಳಿಂದಿ ಕುಂಜ್-ಜಾಮಿಯಾ ನಗರ ಪ್ರದೇಶದಲ್ಲಿ ಹಂತ-ಹಂತವಾಗಿ ಕೆಡವುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ದಿಢೀರ್ ಬೆಳವಣಿಗೆಯನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಬುಲ್ಡೋಜರ್‌ಗಳ ಸುತ್ತಲೂ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್‌ಡಿಎಂಸಿ ಸಿಬ್ಬಂದಿಗಳ‌ ಬುಲ್ಡೋಜರ್ ಡ್ರೈವ್ (Bulldozer Drive) ಗೆ ಸಹಾಯ ಮಾಡಲು ನಿಯೋಜಿಸಲಾದ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಾಗರಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಬುಲ್ಡೋಜರ್ ಡ್ರೈವ್ ಗೆ ಭಾರೀ ವಿರೋಧ
ಇದೇ ತಿಂಗಳ 5ನೇ ತಾರೀಖು ನಿಗದಿಯಾಗಿದ್ದ 'ಒತ್ತುವರಿ ತೆರವು ಕಾರ್ಯಾಚರಣೆ ಅತಾರ್ಥ್ ಬುಲ್ಡೋಜರ್ ಡ್ರೈವ್ ಪೊಲೀಸ್ ಪಡೆಯ ಅಲಭ್ಯತೆಯಿಂದಾಗಿ ರದ್ದುಗೊಂಡಿತ್ತು. ಇಂದು ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆಯೊಂದಿಗೆ ಎಸ್‌ಡಿಎಂಸಿ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರಾದರೂ ಸಾರ್ವಜನಿಕರಿಂದ ತೀವ್ರವಾದ ಪ್ರತಿರೋಧ ಎದುರಿಸಬೇಕಾಯಿತು. ಬುಲ್ಡೋಜರ್‌ಗಳ ಸುತ್ತ ಸೇರಿದ ಜನ 'ಮೊದಲು ನಮ್ಮನ್ನು ಸಾಯಿಸಿ, ನಂತರ ನಮ್ಮ ಮನೆ ಕೆಡವಿ' ಎಂದು ಆಗ್ರಹಿಸಿದರು.

ಇದನ್ನು ಓದಿ: ಎರಡು ವರ್ಷಗಳ ಬಳಿಕ ಹಜ್​ ಯಾತ್ರೆ ಆರಂಭ; 80 ಸಾವಿರ ಯಾತ್ರಾರ್ಥಿಗಳಿಂದ ಪ್ರವಾಸ

ನಿರ್ದಿಷ್ಟ ಸಮುದಾಯ ಗುರಿಯಾಗಿಸಿಕೊಂಡು ಬುಲ್ಡೋಜರ್ ಡ್ರೈವ್
ಜಹಂಗೀರಪುರಿಯ ಬಳಿಕ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಬುಲ್ಡೋಜರ್ ಡ್ರೈವ್ ಬಗ್ಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.‌ 'ಬುಲ್ಡೋಜರ್ ಡ್ರೈವ್ ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಜಹಂಗೀರಪುರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿದ್ದರೂ ಶಾಹೀನ್ ಬಾಗ್ ಬಳಿಯ ಕಾಳಿಂದಿ ಕುಂಜ್-ಜಾಮಿಯಾ ನಗರ ಪ್ರದೇಶದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ ಡ್ರೈವ್ ಮಾಡಲಾಗುತ್ತಿದೆ ಎಂದು ದಕ್ಷಿಣ ಮುನ್ಸಿಪಲ್ ಕಾರ್ಪೊರೇಶನ್ ನಡೆಯ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಶೀಘ್ರವೇ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಬರಲಿದ್ದು, ಅದೇ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಲೆಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ ಡ್ರೈವ್ ಮಾಡಲಾಗುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನು ಓದಿ: ಶ್ರೀಲಂಕಾದಲ್ಲಿ ತೀವ್ರಗೊಂಡ ಪ್ರತಿಭಟನೆಗಳು, ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ನಮ್ಮನ್ನು ಕೋಮುವಾದಿಗಳನ್ನಾಗಿ ನೋಡುತ್ತಿದ್ದಾರೆ: ಗುಪ್ತಾ
ಬುಲ್ಡೋಜರ್ ಡ್ರೈವ್ ಬಗ್ಗೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ನ್ಯೂಸ್ 18 ಜೊತೆ ಮಾತನಾಡಿ 'ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸಮಸ್ಯೆಯನ್ನು ಕೋಮುವಾದಿಯಾಗಿ ಪರಿವರ್ತಿಸುತ್ತಿವೆ. ಬುಲ್ಡೋಜರ್ ಡ್ರೈವ್ ಕೇವಲ ಅತಿಕ್ರಮಣ ವಿರೋಧಿ ಪ್ರಕ್ರಿಯೆಯಾಗಿದೆ. ಇದು ಕೋಮುವಾದ ಏನೂ ಅಲ್ಲ. ನಮ್ಮನ್ನು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರು ಕೋಮುವಾದಿಗಳನ್ನಾಗಿ ನೋಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ರೋಹಿಂಗ್ಯಾಗಳು, ಬಾಂಗ್ಲಾದೇಶಿಗಳು ಮತ್ತು ಸಮಾಜವಿರೋಧಿಗಳ ಅತಿಕ್ರಮಣವನ್ನು ತೆಗೆದುಹಾಕಲು ಬುಲ್ಡೋಜರ್ ಡ್ರೈವ್ ಮಾಡುವಂತೆ ಏಪ್ರಿಲ್ 20ರಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಬಿಜೆಪಿ ಆಡಳಿತ ಇರುವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಮೇಯರ್‌ಗಳಿಗೆ ಪತ್ರ ಬರೆದಿದ್ದರು. ನಂತರ ಮುನ್ಸಿಪಲ್ ಕಾರ್ಪೊರೇಶನ್ ಅತಿಕ್ರಮಣ ಅಭಿಯಾನಗಳನ್ನು ಕೈಗೆತ್ತಿಕೊಂಡಿದೆ. ಮೇ 4ರಂದು ತುಘಲಕಾಬಾದ್ ಬಳಿಯ ಕರ್ಣಿ ಶೂಟಿಂಗ್ ರೇಂಜ್‌ನಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಿತ್ತು. ಅಲ್ಲಿ 13 ತಾತ್ಕಾಲಿಕ ಅಂಗಡಿಗಳು ಮತ್ತು ಇತರೆ ಕಟ್ಟಡಗಳನ್ನು ಕೆಡವಿತ್ತು. ಮುಸ್ಲಿಂರು ಹೆಚ್ಚಿರುವ ಜಹಾಂಗೀರ್​ಪುರಿ ಸಿ ಬ್ಲಾಕ್​ನಲ್ಲಿ ಮುಸ್ಲಿಂ ಮಸೀದಿಯ ಮುಂಭಾಗದ ಮುಂದೆ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಸುಪ್ರೀಂ ಕೋರ್ಟ್​ ಆದೇಶದ ನಂತರವೂ ಈ ಹಿಂದೆ ಒಂದೂವರೆಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.
Published by:Seema R
First published: