ನವದೆಹಲಿ: ವ್ಯಕ್ತಿಯೊಬ್ಬ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಚುನಾವಣೆಗೆ (Election Contestant) ಸ್ಪರ್ಧಿಸುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ ವಜಾಗೊಳಿಸಿದೆ. ಅಲ್ಲದೇ, ಎರಡು ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ (Contesting 2 Seats in One Poll) ಆಯ್ಕೆಯನ್ನು ನೀಡುವ ಮೂಲಕ ರಾಜಕೀಯ ಪ್ರಜಾಪ್ರಭುತ್ವವನ್ನು ಮುಂದುವರಿಸುವುದೇ ಅಂತಿಮವಾಗಿ ಸಂಸತ್ತಿನ ಆಯ್ಕೆ ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶವನ್ನು ನೀಡಿದ್ದು, ಇದು ಶಾಸಕಾಂಗ ನೀತಿ ಮತ್ತು ಸಂಸದೀಯ ಸಾರ್ವಭೌಮತೆಗೆ ಸೇರಿದ ವಿಚಾರ ಆಗಿರುವುದರಿಂದ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
'ಸಂಸತ್ ನಿರ್ಧಾರ ತೆಗೆದುಕೊಳ್ಳಬೇಕು'
ಹಿರಿಯ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಹಲವು ಕಾರಣಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇರುತ್ತದೆ. ಸಂವಿಧಾನದಲ್ಲೂ ಕೂಡ ಅಂತಹ ಅವಕಾಶವನ್ನು ಹಿಂದೆಯೇ ಕಲ್ಪಿಸಲಾಗಿದೆ. ಎಲ್ಲದಕ್ಕಿಂತ ಈ ವಿಚಾರದಲ್ಲಿ ಸಂಸತ್ ನಿರ್ಧಾರ ತೆಗೆಕೊಳ್ಳುವ ಅಗತ್ಯ ಇದೆ ಎಂದು ನ್ಯಾಯಾಲಯ ಹೇಳಿದೆ.
ಬೊಕ್ಕಸಕ್ಕೆ ಆರ್ಥಿಕ ಹೊರೆ
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಗೋಪಾಲ್ ಶಂಕರ್ ನಾರಾಯಣನ್, ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಒಬ್ಬ ಅಭ್ಯರ್ಥಿ ಸ್ಪರ್ಧಿಸಿ ಎರಡರಿಂದಲೂ ಆಯ್ಕೆಯಾದರೆ ಒಂದು ಕ್ಷೇತ್ರವನ್ನು ತೆರವು ಮಾಡಬೇಕಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದರಿಂದ ಮತ್ತೆ ಉಪ ಚುನಾವಣೆ ಮಾಡಬೇಕಾಗುತ್ತದೆ. ಹೀಗಾಗಿ ಇದು ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಇದು ಸಂವಿಧಾನದ 19 ಮತ್ತು 21 ನೆಯ ವಿಧಿಯ ಉಲ್ಲಂಘನೆ ಎಂದು ಹೇಳಿದರು.
ಇದನ್ನೂ ಓದಿ: Border Conflict: ಇಂದು ಸುಪ್ರೀಂ ಕೋರ್ಟ್ನಲ್ಲಿ ಬೆಳಗಾವಿ ಗಡಿ ವಿವಾದ ಕೇಸ್ ವಿಚಾರಣೆ; ಕುತೂಹಲಕ್ಕೆ ಇಂದೇ ಬೀಳಲಿದ್ಯಾ ತೆರೆ?
ಮುಂದುವರಿದು ಮಾತನಾಡಿದ ಅವರು, 1996ರ ತಿದ್ದುಪಡಿಗೆ ಮೊದಲು ಚುನಾವಣೆಗೆ ಸ್ಪರ್ಧಿಸುವಂತಹ ಅಭ್ಯರ್ಥಿಗಳಿಗೆ ಕ್ಷೇತ್ರಗಳ ಸಂಖ್ಯೆಗೆ ನಿರ್ಬಂಧ ಇರಲಿಲ್ಲ. ಯಾರು ಎಲ್ಲೂ ಬೇಕಾದರೂ ಸ್ಪರ್ಧಿಸಬಹುದಾಗಿತ್ತು. ಬಳಿಕ ಕಾಯ್ದೆಯನ್ನು ತಿದ್ದುಪಡಿ ಮಾಡಿ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರಗಳ ಮಿತಿಯನ್ನು 2ಕ್ಕೆ ಸೀಮಿತಗೊಳಿಸಲಾಗಿತ್ತು. ಚುನಾವಣಾ ಆಯೋಗದ ಆಯುಕ್ತರು ಕೂಡ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 33(7)ನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾನೂನು ಆಯೋಗದ 255ನೇ ವರದಿಯಲ್ಲಿ ಅಭ್ಯರ್ಥಿಗಳನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡದಂತೆ ನಿರ್ಬಂಧ ವಿಧಿಸಲು ಸಲಹೆ ನೀಡಿದೆ ಎಂದು ಹೇಳಿ ನ್ಯಾಯಪೀಠದ ಗಮನ ಸೆಳೆದರು.
ಎರಡು ಕಡೆ ಸ್ಪರ್ಧೆ ಮಾಡಿದರೆ ತಪ್ಪೇನು?
ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಾಗ ಎಲ್ಲಿಂದ ಗೆಲ್ಲಬಹುದು ಎಂದು ನಿಮಗೆ ತಿಳಿದಿರುವುದಿಲ್ಲ. ಹೀಗಾಗಿ ಎರಡು ಕಡೆ ಸ್ಪರ್ಧೆ ಮಾಡಿದರೆ ತಪ್ಪೇನು? ಇದೆಲ್ಲ ಪ್ರಜಾಪ್ರಭುತ್ವದ ವ್ಯವಸ್ಥೆಯ ಚುನಾವಣೆಯ ಒಂದು ಭಾಗ. ಅಷ್ಟಕ್ಕೂ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ? ಇಲ್ಲವೇ ಎಂಬುವುದನ್ನು ನಿರ್ಧರಿಸಬೇಕಾಗಿರುವುದು ಪಾರ್ಲಿಮೆಂಟ್‌ನ ಕೆಲಸ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ