ಎನ್​ಡಿಎ ಪರೀಕ್ಷೆ ಬರೆಯಲು ಮಹಿಳೆಯರಿಗೆ ಕೋರ್ಟ್ ಅನುಮತಿ; ಸೇನೆಗೆ ಬಿಸಿಮುಟ್ಟಿಸಿದ ನ್ಯಾಯಾಲಯ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗಳನ್ನ ಬರೆಯಲು ಮಹಿಳೆಯರಿಗೆ ಅವಕಾಶ ನೀಡುವಂತೆ ಸರ್ಕಾರ ಮತ್ತು ಸೇನೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ನಿರ್ದೇಶನ ನೀಡಿದೆ. ಸೆ. 5ರಂದು ಅಕಾಡೆಮಿ ಪರೀಕ್ಷೆಗಳು ನಡೆಯಲಿವೆ.

ಮಹಿಳಾ ಸೇನಾಧಿಕಾರಿಗಳು

ಮಹಿಳಾ ಸೇನಾಧಿಕಾರಿಗಳು

  • News18
  • Last Updated :
  • Share this:
ನವದೆಹಲಿ, ಆ. 18: ಕೇವಲ ಪುರುಷರಿಗಷ್ಟೇ ಅವಕಾಶ ಇರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA – National Defence Academy) ಪರೀಕ್ಷೆಯನ್ನ ಮಹಿಳೆಯರಿಗೂ ಬರೆಯಲು ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಸುಪ್ರೀಂ ಕೋರ್ಟ್ ಇಂದು ನೀಡಿದ ಮಧ್ಯಂತರ ಆದೇಶದಲ್ಲಿ ಈ ಆದೇಶ ಹೊರಡಿಸಿದೆ. ಆದರೆ, ಅಂತಿಮ ಆದೇಶ ಬರುವವರೆಗೂ ಎನ್ ​ಡಿ ಎ ಪರೀಕ್ಷೆಯ ಫಲಿತಾಂಶವನ್ನು ಬಹಿರಂಗಪಡಿಸದಂತೆಯೂ ನ್ಯಾ| ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಸರ್ವೋಚ್ಚ ನ್ಯಾಯಪೀಠ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 5ರಂದು ಎನ್​ಡಿಎ ಪರೀಕ್ಷೆಗಳು ನಡೆಯಲಿವೆ. ಕುಶ್ ಕಾಲ್ರಾ ಎಂಬುವವರು ಎನ್​ಡಿಎ ಪರೀಕ್ಷೆಯನ್ನ ಮಹಿಳೆಯರೂ ಬರೆಯುವಂತೆ ಅವಕಾಶ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ, ಸೇನೆಯಲ್ಲಿರುವ ಲಿಂಗ ತಾರತಮ್ಯ ಧೋರಣೆಯನ್ನ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

“ನ್ಯಾಯಾಂಗದ ಮಧ್ಯ ಪ್ರವೇಶ ಇಲ್ಲದೆಯೇ ಸೇನೆ ಸ್ವಂತವಾಗಿ ಮಾಡುವ ಅಭ್ಯಾಸ ಹೊಂದಿಲ್ಲ. ಪ್ರತೀ ಬಾರಿಯೂ ನೀವು ನ್ಯಾಯಾಂಗದ ಮಧ್ಯಪ್ರವೇಶವಾಗುವಂತೆ ಮಾಡಬೇಡಿ. ನಿಮ್ಮ ಸೇನಾ ವ್ಯವಸ್ಥೆಯ ಸೂಕ್ಷ್ಮ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಲು ಆಗದೇ ಹೋಗಬಹುದು. ಆದರೆ, ನೀವು ಲಿಂಗ ತಾಟಸ್ಥ್ಯತೆಯ ವಿಚಾರವನ್ನ (Gender Neutrality) ಅರ್ಥ ಮಾಡಿಕೊಂಡು ನಿಮ್ಮ ವ್ಯವಸ್ಥೆಯಲ್ಲಿ ಅದನ್ನ ಅಳವಡಿಕೆ ಮಾಡಿಕೊಳ್ಳಬೇಕು. ನಾವು ಆದೇಶ ಹೊರಡಿಸುವುದು ಸರಿಹೋಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿತು.

ಇದನ್ನೂ ಓದಿ: Shashi Tharoor- ಪತ್ನಿ ಸುನಂದಾ ಸಾವು ಪ್ರಕರಣ: ಶಶಿ ತರೂರ್​ಗೆ ಕ್ಲೀನ್ ಚಿಟ್; ಏಳು ವರ್ಷದ ಯಾತನೆಗೆ ಕೊರಗಿದ ಸಂಸದ

ಎನ್​ಡಿಎ ಪರೀಕ್ಷೆಯನ್ನ ಪುರುಷರಿಗಷ್ಟೇ ಸೀಮಿತಗೊಳಿಸುವುದು ಸೇನಾ ನೀತಿಯ ನಿರ್ಧಾರ ಮಾತ್ರ ಎಂದು ಸೇನೆ ಪರ ವಕೀಲರು ಕೋರ್ಟ್ ವಿಚಾರಣೆ ವೇಳೆ ವಾದಿಸಿದರು. ಸೇನೆಯ ನೀತಿ ವಿಚಾರವಾಗಿರುವುದರಿಂದ ಕೋರ್ಟ್ ಇದರಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕೂಡ ಸಮರ್ಥನೆ ಮಾಡಿಕೊಂಡಿತ್ತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಬರೆದು ಆಯ್ಕೆಯಾಗುವ ಪುರುಷರಿಗೆ ಅವರ ವೃತ್ತಿಯಲ್ಲಿ ಏಳ್ಗೆಯಾಗಲು ಮಹಿಳೆಯರಿಗಿಂತ ವಿಶೇಷ ಅವಕಾಶವೇನೂ ಇರುವುದಿಲ್ಲ. ಎನ್​ಡಿಎ ಪರೀಕ್ಷೆ ಬರೆಯಲಿಲ್ಲವೆಂದಾಕ್ಷಣ ಮಹಿಳೆಯರು ಸೇನಾ ವೃತ್ತಿಯಲ್ಲಿ ಮೇಲೇರಲು ಕಷ್ಟಸಾಧ್ಯ ಎಂಬಂತಿಲ್ಲ. ಹೀಗಾಗಿ, ಎನ್​ ಡಿ ಎ- ಡಿಫೆನ್ಸ್ ಅಕಾಡೆಮಿ ಪರೀಕ್ಷೆಯ ವಿಚಾರವನ್ನು ಸೇನಾ ನೀತಿಗೆ ಬಿಟ್ಟುಬಿಡಬೇಕೆಂದು ಕೇಂದ್ರ ವಾದ ಮುಂದಿಟ್ಟಿತು. ಆದರೆ, ಈ ನೀತಿಯು ಲಿಂಗ ತಾರತಮ್ಯತೆಯ ಆಧಾರಿತವಾಗಿದೆ ಎಂದು ಕೋರ್ಟ್ ಛೀಮಾರಿ ಹಾಕಿದರು.

ಸದ್ಯ ಮಹಿಳೆಯರು ಸೇನೆಗೆ ಸೇರಬೇಕೆಂದರೆ ಎಸ್ ಎಸ್ ಸಿ (ಶಾರ್ಟ್ ಸರ್ವಿಸ್ ಕಮಿಷನ್) ಪರೀಕ್ಷೆಯೊಂದೇ ದಾರಿಯಾಗಿದೆ. ಇದರಲ್ಲೂ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಸ್ಥಾನ ಸಿಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಎಸ್ ಎಸ್ ಸಿಯ ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಪರ್ಮನೆಂಟ್ ಕಮಿಷನ್ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: