ಕೋವಿಡ್ - 19 ಬಗ್ಗೆ ಕೆಲ ಫೇಸ್ಬುಕ್ ಪೋಸ್ಟ್ ಮಾಡಿದ್ದಕ್ಕೆ ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟ ಮಣಿಪುರ ಮೂಲದ ರಾಜಕೀಯ ಕಾರ್ಯಕರ್ತ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಅವರ ನಿರಂತರ ಬಂಧನವು ಅವರ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದು, ಅವರನ್ನು ಒಂದು ರಾತ್ರಿ ಸಹ ಜೈಲಿಗೆ ಹಾಕಲು ಸಾಧ್ಯವಿಲ್ಲ, ಇಂದು ಸಂಜೆ 5 ರೊಳಗೆ ಅವರನ್ನು ಮುಕ್ತಗೊಳಿಸಬೇಕು ಎಂದು ಆದೇಶ ನೀಡಿತ್ತು.
ಲೈಚೋಂಬಮ್ ಎರೆಂಡ್ರೊರನ್ನು "ತಕ್ಷಣ" ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದ ಕೆಲವೇ ಗಂಟೆಗಳ ನಂತರ, ಮಣಿಪುರಿ ರಾಜಕೀಯ ಕಾರ್ಯಕರ್ತ ಸೋಮವಾರ ಸಂಜೆ ಸಾಜಿವಾದ ಮಣಿಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ -19 ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಹಸುವಿನ ಸಗಣಿ ಮತ್ತು ಗೋ ಮೂತ್ರವು ಪರಿಣಾಮಕಾರಿಯಾಗಿದೆ ಎಂಬ ವಿಚಾರವನ್ನು ಫೇಸ್ಬುಕ್ನಲ್ಲಿ ಟೀಕಿಸಿದ್ದಕ್ಕೆ ಅವರು ಮಾಡಿದ ಕಾಮೆಂಟ್ಗಳ ಆಧಾರದ ಮೇಲೆ ಎರೆಂಡ್ರೊರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಗಿತ್ತು.
ಈ ಬಂಧನವನ್ನು ವಿರೋಧಿಸಿ ಎರೆಂಡ್ರೊ ತಂದೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. 1,000 ರೂ. ವೈಯಕ್ತಿಕ ಬಾಂಡ್ ನೀಡಿ ಬಿಡುಗಡೆ ಮಾಡುವಂತೆಯೂ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಸಂಬಂಧ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡುವಂತೆ ಸರ್ವೋಚ್ಛ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದರು. ಅಲ್ಲದೆ, ಕೋರ್ಟ್ ಸೂಚನೆಯ ವಿರುದ್ಧ ನಾವು ವಾದ ಮಾಡಲ್ಲ. ಬಿಡುಗಡೆಯ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ ನಂತರ ಡಿ.ವೈ. ಚಂದ್ರಚೂಡ್ ಹಾಗೂ ಎಂ. ಆರ್. ಶಾ ನೇತೃತ್ವದ ನ್ಯಾಯಪೀಠ ಮಂಗಳವಾರಕ್ಕೆ ಈ ಅರ್ಜಿಯನ್ನು ಮುಂದೂಡಿತ್ತು.
ಅಲ್ಲದೆ, ಸೋಮವಾರ ಸಂಜೆ 5 ಗಂಟೆಯೊಳಗೆ ಆತನ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಆದೇಶವನ್ನು ಮಣಿಪುರ ಜೈಲು ಅಧಿಕಾರಿಗಳಿಗೆ ತಕ್ಷಣ ತಿಳಿಸುವಂತೆ ಉನ್ನತ ನ್ಯಾಯಾಲಯ ನಿರ್ದೇಶಿಸಿತ್ತು. ಹಾಗೂ, ಎರೆಂಡ್ರೊ ನಿರಂತರ ಬಂಧನವು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.
ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಸಾವಿನ ಬಗ್ಗೆ ಪ್ರತಿಕ್ರಿಯೆಯನ್ನು ಪ್ರಕಟಿಸಿದ್ದಕ್ಕಾಗಿ 37 ವರ್ಷದ ಕಾರ್ಯಕರ್ತ ಹಾಗೂ ಪತ್ರಕರ್ತ ಕಿಶೋರ್ ಚಂದ್ರ ವಾಂಗ್ಖೇಮ್ ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. "ಹಸು ಮತ್ತು ಹಸುವಿನ ಮೂತ್ರವು ಕೆಲಸ ಮಾಡುವುದಿಲ್ಲ" ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡಿದ್ದರು.
ಬಿಜೆಪಿ ನಾಯಕರು ಗೋವು ಮತ್ತು ಹಸುವಿನ ಮೂತ್ರವನ್ನು ಕೋವಿಡ್ - 19ಗೆ ಚಿಕಿತ್ಸೆ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದು ಕಾರ್ಯಕರ್ತ ಟೀಕಿಸಿದ್ದಾರೆ ಅಷ್ಟೇ. ಇದಕ್ಕೆ ಯಾವುದೇ ದಂಡವಿಲ್ಲದೆ ಬಿಡುಗಡೆ ಮಾಡಬೇಕೆಂದು ಎರೆಂಡ್ರೊ ತಂದೆ ಪರ ವಾದ ಮಾಡಿದ್ದ ವಕೀಲ ಕೋರ್ಟ್ನಲ್ಲಿ ವಾದ ಮಾಡಿದ್ದರು.
ಆದರೆ, ಕೇಂದ್ರ ಸರ್ಕಾರದ ಉನ್ನತ ವಕೀಲ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಮಾರ್ಗಸೂಚಿಗಳೊಂದಿಗೆ ಈ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ವಾದಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ