Hate Speech: ಭಾರತದಲ್ಲಿ ಯಾವುದೇ ಕಾರಣಕ್ಕೂ ದ್ವೇಷ ಭಾಷಣವನ್ನು ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ

ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌

ಒಬ್ಬ ವ್ಯಕ್ತಿ ಪೊಲೀಸರ ಬಳಿ ಬಂದು ನಾನು ಟೋಪಿ ಧರಿಸಿ ಗಡ್ಡ ಬಿಟ್ಟ ಕಾರಣಕ್ಕೆ ಧರ್ಮದ ಹೆಸರಿನಲ್ಲಿ ನನ್ನ ಗಡ್ಡವನ್ನು ಎಳೆದು ನಿಂದಿಸಲಾಗಿದೆ ಎಂದು ಹೇಳಿದಾಗ ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ ಎಂದಾದರೆ ಖಂಡಿತಾ ಅದು ಒಪ್ಪತಕ್ಕದಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

  • Share this:

ನವ ದೆಹಲಿ: ಇತ್ತೀಚೆಗೆ ದೇಶದಲ್ಲಿ ದ್ವೇಷ ಭಾಷಣದ (Hate Speech) ಬಗ್ಗೆ ಸಹಮತದ ಅಭಿಪ್ರಾಯ ಮೂಡುತ್ತಿದ್ದು, ಭಾರತದಂತಹ ಜಾತ್ಯಾತೀತ ದೇಶದಲ್ಲಿ (Secular Country) ಧರ್ಮದ ಆಧಾರದ ಮೇಲೆ ನಡೆಯುವ ದ್ವೇಷದ ಅಪರಾಧಗಳಿಗೆ ಯಾವುದೇ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಸ್ಪಷ್ಟಪಡಿಸಿದೆ.


ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಾಡಿದ ದ್ವೇಷ ಭಾಷಣ ಪ್ರಕರಣದ ವಿಚಾರಣೆ ವೇಳೆ ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದ್ವೇಷದ ಭಾಷಣದ ಬಗ್ಗೆ ಒಮ್ಮತ ಬೆಳೆಯುತ್ತಿರುವುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ. ದ್ವೇಷ ಭಾಷಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ದ್ವೇಷ ಭಾಷಣದ ಸಮಸ್ಯೆ ಇರುವುದನ್ನು ರಾಜ್ಯವು ಒಪ್ಪಿಕೊಂಡರೆ ಮಾತ್ರ ಪರಿಹಾರವನ್ನು ಕಂಡುಹಿಡಿಯಬಹುದು, ಅಂತಹ ಯಾವುದೇ ದ್ವೇಷದ ಅಪರಾಧಗಳಿಂದ ತನ್ನ ನಾಗರಿಕರನ್ನು ರಕ್ಷಿಸುವುದು ಆಯಾ ರಾಜ್ಯದ ಆದ್ಯ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ: SC Collegium: ಕೊನೆಗೂ ಸುಪ್ರೀಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಪದೋನ್ನತಿಗೆ ಅನುಮೋದನೆ ನೀಡಿದ ಕೇಂದ್ರ


ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ಪೀಠವು, ದ್ವೇಷದ ಅಪರಾಧಗಳ ವಿರುದ್ಧ ತಕ್ಷಣ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳದಿದ್ದಾಗ ನಾವು ಅದನ್ನು ಬೆಳೆಸಿದಂತಾಗುತ್ತದೆ. ಇದು ಅತ್ಯಂತ ಅಪಾಯಕಾರಿ. ಅದನ್ನು ನಮ್ಮ ಜೀವನದಿಂದಲೇ ಕಿತ್ತೊಗೆಯಬೇಕಾಗಿದೆ. ದ್ವೇಷದ ಭಾಷಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿದೆ ಹೇಳಿದೆ.


ಬೇರು ಸಮೇತ ಕಿತ್ತೊಗೆಯಬೇಕು


ಕಳೆದ 2021ರ ಜುಲೈ 4ರಂದು ಮುಸ್ಲಿಂ ವ್ಯಕ್ತಿಯೊಬ್ಬರು ನೋಯ್ಡಾದಿಂದ ಆಲಿಘರ್‌ಗೆ ಹೋಗಲು ಕಾರ್‌ ಹತ್ತಿದಾಗ 'ಸ್ಕ್ರೂ ಡ್ರೈವರ್ ಗ್ಯಾಂಗ್‌' ಒಂದು ಅವರಿಗೆ ಧರ್ಮದ ಹೆಸರಿನಲ್ಲಿ ನಿಂದನೆ ಮಾಡಿ ಹಲ್ಲೆ ನಡೆಸಿತ್ತು. ವಿಪರ್ಯಾಸ ಅಂದ್ರೆ ಈ ಘಟನೆಯ ಬಗ್ಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದರು. ಹೀಗಾಗಿ ಪ್ರಕರಣದ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ.ಎಂ.ನಟರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣದ ಬಗ್ಗೆ ಒಮ್ಮತ ಬೆಳೆಯುತ್ತಿದೆ. ಭಾರತದಂತಹ ಜಾತ್ಯತೀತ ದೇಶದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷದ ಅಪರಾಧಗಳಿಗೆ ಅವಕಾಶವಿಲ್ಲ. ಇದನ್ನು ಬೇರುಸಹಿತ ಕಿತ್ತೊಗೆಯಬೇಕು ಮತ್ತು ಅಂತಹ ಯಾವುದೇ ಅಪರಾಧಗಳಿಂದ ತನ್ನ ನಾಗರಿಕರನ್ನು ರಕ್ಷಿಸುವುದು ರಾಜ್ಯದ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಸೂಚಿಸಿದೆ.


ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ


ಒಬ್ಬ ವ್ಯಕ್ತಿ ಪೊಲೀಸರ ಬಳಿ ಬಂದು ನಾನು ಟೋಪಿ ಧರಿಸಿ ಗಡ್ಡ ಬಿಟ್ಟ ಕಾರಣಕ್ಕೆ ಧರ್ಮದ ಹೆಸರಿನಲ್ಲಿ ನನ್ನ ಗಡ್ಡವನ್ನು ಎಳೆದು ನಿಂದಿಸಲಾಗಿದೆ ಎಂದು ಹೇಳಿದಾಗ ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ ಎಂದಾದರೆ ಖಂಡಿತಾ ಅದು ಒಪ್ಪತಕ್ಕದಲ್ಲ ಎಂದಿರುವ ನ್ಯಾಯಪೀಠ, ರಾಜ್ಯದ ಪ್ರತಿ ಅಧಿಕಾರಿಯೂ ಕಾನೂನಿನ ಗೌರವವನ್ನು ಹೆಚ್ಚಿಸಬೇಕು, ಇಲ್ಲದಿದ್ದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತವೆ. ದ್ವೇಷದ ಅಪರಾಧಗಳು ನಡೆಯುತ್ತಿದ್ದರೂ ನೀವು ಅದನ್ನು ಒಪ್ಪಿಕೊಳ್ಳದೆ ರತ್ನಗಂಬಳಿಯ ಅಡಿಯಲ್ಲಿ ಗುಡಿಸಿ ಹಾಕುತ್ತೀರಿ ಎಂದ ಪೀಠ, ನಾವು ಬೇರೆ ಏನೇನೂ ಹೇಳುತ್ತಿಲ್ಲ. ಆದರೆ ನಾವು ನಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಪೀಠ ಚಾಟಿ ಬೀಸಿತು.


ಇದನ್ನೂ ಓದಿ: Supreme Court: ಒಬ್ಬ ಅಭ್ಯರ್ಥಿ ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು: ಸುಪ್ರೀಂ ಕೋರ್ಟ್‌


ಅರ್ಜಿದಾರ ಕಾಜೀಂ ಅಹ್ಮದ್ ಶೇರ್ವಾನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು, ಜನವರಿ 13ರಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಈ ಪ್ರಕರಣದ ವರದಿಯನ್ನು ಹಾಜರುಪಡಿಸುವಂತೆ ತಿಳಿಸಿತ್ತು. ಆದರೆ ಪೊಲೀಸರು ಎರಡು ವರ್ಷಗಳ ನಂತರ ಒಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಅಪರಾಧಗಳಿಗೆ ಜಾಮೀನು ನೀಡಬಹುದಾದ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ತಪ್ಪನ್ನು ಒಪ್ಪಿಕೊಂಡ ಉ.ಪ್ರ ಸರ್ಕಾರ


ಆಗ ಉತ್ತರ ಪ್ರದೇಶ ಪೊಲೀಸರ ಯಡವಟ್ಟುಗಳನ್ನು ಒಪ್ಪಿಕೊಂಡ ಕೆಎಂ ನಟರಾಜ್,  ಪೊಲೀಸ್ ಅಧಿಕಾರಿಗಳ ಎಡವಟ್ಟುಗಳನ್ನು ಒಪ್ಪಿಕೊಂಡಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಎಸಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.




ಆಗ ನ್ಯಾಯಪೀಠವು, ನೀವು ಅಂತಹ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದರೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಕಾನೂನು ಕ್ರಮ ತೆಗೆದುಕೊಂಡು ಉದಾಹರಣೆ ಸಮೇತ ತೋರಿಸಿ. ಇಂತಹ ಘಟನೆಗಳ ವಿರುದ್ಧ ನೀವು ಕ್ರಮ ಕೈಗೊಂಡಾಗ ಮಾತ್ರ ನಾವು ಅಭಿವೃದ್ಧಿ ಹೊಂದಿದ ರಾ‍ಷ್ಟ್ರಗಳಿಗೆ ಸರಿಸಮಾನರಾಗುತ್ತೇವೆ. ಇಲ್ಲಿ ಸ್ಪಷ್ಟವಾಗಿ ಲೋಪ ಉಂಟಾಗಿದೆ. ಹಾಗಾಗಿ ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಪೀಠ ಹೇಳಿತು.

Published by:Avinash K
First published: