2019 Supreme Court Major Judgement | ಸುಪ್ರೀಂಕೋರ್ಟ್ ನೀಡಿದ ಹತ್ತು ಮಹತ್ವದ ತೀರ್ಪುಗಳು

2019 ಹತ್ತು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾದ ವರ್ಷ. ಅದರಲ್ಲೂ ನ್ಯಾಯಾಂಗ ಕ್ಷೇತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದ ವರ್ಷ ಎಂದರೂ ತಪ್ಪಾಗಲಾರದು. ಆಯೋಧ್ಯೆ ಪ್ರಕರಣ ಸೇರಿದಂತೆ ದಶಕಗಳ ಕಾಲ ಬಗೆಹರಿಯದ ಹಲವು ಸೂಕ್ಷ್ಮ ಪ್ರಕರಣಗಳ ತೀರ್ಪನ್ನು ಸುಪ್ರೀಂಕೋರ್ಟ್ ಈ ವರ್ಷ ಪ್ರಕಟಿಸಿದೆ. ಅವುಗಳಲ್ಲಿ ಹತ್ತು ಪ್ರಮುಖ ಆದೇಶಗಳ ಪೂರ್ಣ ಮಾಹಿತಿ ಇಲ್ಲಿದೆ.

HR Ramesh | news18-kannada
Updated:December 31, 2019, 8:25 PM IST
2019 Supreme Court Major Judgement | ಸುಪ್ರೀಂಕೋರ್ಟ್ ನೀಡಿದ ಹತ್ತು ಮಹತ್ವದ ತೀರ್ಪುಗಳು
ಸುಪ್ರೀಂಕೋರ್ಟ್.
  • Share this:
ಸಿಬಿಐ ವರ್ಸಸ್ ಸಿಬಿಐ - ಜನವರಿ 8

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಉಪನಿರ್ದೇಶಕ ರಾಕೇಶ್ ಅಸ್ತಾನ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಸಿಬಿಐ ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರ ರಾತ್ರೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐಗೆ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್​ ರಾವ್ ಅವರನ್ನು ನೇಮಿಸಿತು. ಈ ಕ್ರಮವನ್ನು ಪ್ರಶ್ನಿಸಿ ಅಲೋಕ್​ ವರ್ಮಾ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ವರ್ಮಾ ಅವರನ್ನು ಮತ್ತೆ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿ, ಕೇಂದ್ರ ಸರ್ಕಾರದ ರಜೆ ಆದೇಶವನ್ನು ರದ್ದುಗೊಳಿಸಿತು. ಅಲೋಕ್​ ವರ್ಮಾ ಹುದ್ದೆಯಲ್ಲಿ ಮುಂದುವರೆಯಲಿದ್ದು, ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಹಾಗೂ ಹೊಸ ತನಿಖೆ ಆರಂಭಿಸದಂತೆಯೂ ಸೂಚನೆಯನ್ನೂ ನೀಡಿತ್ತು.

ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ; ರಾಜ್ಯ ಸರ್ಕಾರದ ಕಾಯ್ದೆಗೆ ಅಸ್ತು - ಮೇ 10

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎಸ್​ಸಿ, ಎಸ್​ಟಿ  ಬಡ್ತಿ ಮೀಸಲಾತಿ ಕಾಯ್ದೆ 2002ನ್ನು ಸುಪ್ರೀಂಕೋರ್ಟ್ ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ. ಇದರೊಂದಿಗೆ ಸರ್ಕಾರ ಮೇಲುಗೈ ಸಾಧಿಸಿದಂತಾಗಿದೆ. ಎಸ್​ಸಿ- ಎಸ್​ಟಿ ​ಸರ್ಕಾರಿ ನೌಕರರಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ ತರಲು ಉದ್ದೇಶಿಸಿದ್ದ ಬಡ್ತಿ ಮೀಸಲಾತಿ ಕಾಯ್ದೆಯನ್ನು ಅನೇಕ ವಿರೋಧಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರಲ್ಲಿ ಸುಗ್ರೀವಾಜ್ಞೆ ಮೂಲಕ  ಜಾರಿಗೆ ತಂದಿದ್ದರು. ಆದರೆ, ಈ ಕಾಯ್ದೆಯ ಮೂಲಕ ಬಡ್ತಿ ವಿಚಾರದಲ್ಲಿ ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು  ಪ್ರಶ್ನಿಸಿ ಬಿ.ಕೆ. ಪವಿತ್ರ ಹಾಗೂ ಎಂ. ನಾಗರಾಜ್ ಎಂಬುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಡ್ತಿ ಮೀಸಲಾತಿ ಕುರಿತು ಸಲ್ಲಿಕೆಯಾಗಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಪರಿಣಾಮ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬಿ.ಕೆ. ಪವಿತ್ರ ಅವರಿಗೆ ಹಿನ್ನಡೆಯಾಗಿದೆ.

ಶರವಣ ಭವನ ಮಾಲೀಕ ರಾಜಗೋಪಾಲ್ ಪ್ರಕರಣ - ಜುಲೈ 3

ಶರವಣ ಭವನದ ನೌಕರನಾಗಿದ್ದ ಶಾಂತಕುಮಾರ್ ಹೆಂಡತಿಯನ್ನು ಮೂರನೇ ಮದುವೆಯಾಗಲು ಭವನದ ಮಾಲೀಕ ರಾಜಗೋಪಾಲ್ ಬಯಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನೌಕರನನ್ನು ಅಪಹರಿಸಿ 2001ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ರಾಜಗೋಪಾಲ್ ಅವರಿಗೆ ಮದ್ರಾಸ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್, ಜುಲೈ 7ರೊಳಗೆ ಶರಣಾಗುವಂತೆ ಸೂಚನೆ ನೀಡಿತ್ತು.

ಹರೇನ್ ಪಾಂಡ್ಯ ಕೊಲೆ ಪ್ರಕರಣ - ಜುಲೈ 05ಗುಜರಾತ್ ಮಾಜಿ ಗೃಹ ಸಚಿವ ಹರೇಣ್ ಪಾಂಡ್ಯ ಕೊಲೆ ಪ್ರಕರಣದಲ್ಲಿ 12 ಆರೋಪಿಗಳು ದೋಷಿಗಳು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ. ನ್ಯಾ.ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಈ ತೀರ್ಪು ಪ್ರಕಟಿಸಿದೆ. ಈ ಮುನ್ನ ಭಯೋತ್ಪಾದಕ ಚಟುವಟಿಕೆಗಳ ತಡೆಗಟ್ಟುವಿಕೆ ನ್ಯಾಯಾಲಯ 2007ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಈ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿ, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹರೇಣ್ ಪಾಂಡ್ಯ ಅವರು ಗೃಹ ಸಚಿವರಾಗಿದ್ದರು. 2003ರ ಮಾರ್ಚ್ 26ರಂದು ಅಹಮದಾಬಾದ್ ಸಮೀಪ ಲಾ ಗಾರ್ಡನ್​ನಲ್ಲಿ ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಅಯೋಧ್ಯೆ ತೀರ್ಪು- ನವೆಂಬರ್ 9

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇರುವ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬ ಬಹು ಹಳೆಯ ಅಯೋಧ್ಯೆ ಬಾಬ್ರಿ-ರಾಮ ಜನ್ಮ ಭೂಮಿ ಪ್ರಕರಣಕ್ಕೆ ಇಂದು ಮುಕ್ತಿ ಸಿಕ್ಕಿದೆ. ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ ಮಸೀದಿ ನಿರ್ಮಾಣ ಮಾಡಿದ್ದ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದವಾಗಿತ್ತು. ಇದು ಸುಳ್ಳು. ಬಾಬ್ರಿ ಮಸೀದಿ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಅಂದಿನ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ಇಂದು ತೀರ್ಪು ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿ ವಿವಾದಿತ ಜಾಗವನ್ನು ರಾಮ ಮಂದಿರ ನಿರ್ಮಾಣ ಮಾಡಲು ಹಿಂದೂಗಳಿಗೆ ನೀಡಲಾಗಿದೆ. ಅಲ್ಲದೇ, ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕೆ ಬದಲಿ ಜಾಗವನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್​ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ.

ಅನರ್ಹ ಶಾಸಕರ ಪ್ರಕರಣ - ನವೆಂಬರ್ 13

17 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಗೊಂಡಿತ್ತು. ಆದರೆ, ರಾಜೀನಾಮೆ ನೀಡಿದ್ದ ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಈ ಕ್ರಮ ಪ್ರಶ್ನಿಸಿ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, 17 ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿತ್ತು. ಮತ್ತು ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಮಾಡಿಕೊಡುವ ಮೂಲಕ ಅನರ್ಹಶಾಸಕರಿಗೆ ಸರ್ವೋಚ್ಛ ನ್ಯಾಯಾಲ ದೊಡ್ಡ ರಿಲೀಫ್​ ನೀಡಿತ್ತು.

ಆರ್​ಟಿಐ ವ್ಯಾಪ್ತಿಗೆ ಸಿಜೆಐ ಕಚೇರಿ - ನವೆಂಬರ್ 13

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿ ಸಹ ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. 2010ರಲ್ಲಿಯೇ ಸುಪ್ರೀಂಕೋರ್ಟ್ ಸಾರ್ವಜನಿಕ ಉತ್ತರದಾಯಿತ್ವ ಹೊಂದಿದ್ದು, ಸಿಜೆಐ ಕಚೇರಿ ಕೂಡ ಆರ್​ಐಟಿ ಅಡಿ ಬರಬೇಕಾಗಿದೆ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೆ, ಕೆಲವು ಷರತ್ತುಗಳನ್ನು ಸಾಂವಿಧಾನಿಕ ಪೀಠ ವಿಧಿಸಿದೆ.

 ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಪ್ರಕರಣ- ನವೆಂಬರ್ 14

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಅಪೆಕ್ಸ್​ ಕೋರ್ಟ್​ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. 2018ರ ಸೆಪ್ಟೆಂಬರ್​ನಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಅಥವಾ ಮಾರ್ಪಾಟು ಸೂಚಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಪಂಚಸದಸ್ಯ ನ್ಯಾಯಪೀಠ ಈ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ವಿಸ್ತೃತ ನ್ಯಾಯಪೀಠ ವಿಚಾರಣೆ ಮುಗಿಸಿ, ತೀರ್ಪು ನೀಡುವವರೆಗೂ ಹಿಂದಿನ ತೀರ್ಪು ಊರ್ಜಿತದಲ್ಲಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ರಫೇಲ್ ಪ್ರಕರಣ - ನವೆಂಬರ್ 14

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ.  ಪ್ರಕರಣದಲ್ಲಿ ಕೇಂದ್ರಕ್ಕೆ ನೀಡಿರುವ ಕ್ಲೀನ್​ ಚಿಟ್​ಗೆ ಸಂಬಂಧಿಸಿದಂತೆ ಮತ್ತೆ ಪರಿಶೀಲನೆ ನಡೆಸಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ, ಮತ್ತು ವಕೀಲ ಪ್ರಶಾಂತ್ ಭೂಷನ್ ಅರ್ಜಿ ಸಲ್ಲಿಸಿದ್ದರು. ಆದರೆ, ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿತು.

ಮಹಾರಾಷ್ಟ್ರ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಗಡುವು - ನವೆಂಬರ್ 26

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಒಂದು ತಿಂಗಳ ಮಹಾ ಹೈ ಡ್ರಾಮಾವೇ ನಡೆದಿದ್ದು. ಈ ವೇಳೆ ಬಿಜೆಪಿ ಮೈತ್ರಿ ತೊರೆದು ಬಂದ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿತ್ತು. ಏತನ್ಮಧ್ಯೆ, ಬಹುಮತ ಇಲ್ಲದಿದ್ದರೂ ಬೆಳ್ಳಂಬೆಳಗ್ಗೆಯೇ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ಕೊಶ್ಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಾಳೆ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಸರ್ಕಾರಕ್ಕೆ​​ ಸೂಚಿಸಿತು.  ನ್ಯಾಯಾಂಗ ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಕೆಲ ವಿಶೇಷ  ಸಂದರ್ಭಗಳಲ್ಲಿ ನಿಗಾವಹಿಸಬೇಕಾಗುತ್ತದೆ. ಅಧಿಕಾರಗಳ ಮೊಟಕಾದಾಗ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದಿರುವ ಕೋರ್ಟ್​, ಹಂಗಾಮಿ ಸ್ಪೀಕರ್​ ನೇಮಿಸಿ ನಾಳೆಯೇ ವಿಶ್ವಾಸಮತ ಯಾಚಿಸಲು ನಿರ್ದೇಶಿಸಿತು. ಬಳಿಕ ಮರುದಿನ ವಿಶ್ವಾಸಮತ ಸಾಬೀತು ಮುನ್ನ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದವು.

ಪಿ.ಚಿದಂಬರಂಗೆ ಜಾಮೀನು - ಡಿಸೆಂಬರ್ 04

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂಗೆ ಇಂದು ಸುಪ್ರೀಂಕೋರ್ಟ್​ 2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. 106 ದಿನಗಳ ಬಳಿಕ ತಿಹಾರ್ ಜೈಲಿನಿಂದ ಹೊರಬಂದಿರುವ ಪಿ. ಚಿದಂಬರಂಗೆ ಐಎನ್​ಎಕ್ಸ್​ ಪ್ರಕರಣದ ಕುರಿತು ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದಾಗಲೀ ಅಥವಾ ಸುದ್ದಿಗೋಷ್ಠಿ ನಡೆಸುವುದಾಗಲಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅನುಮತಿ ಇಲ್ಲದೆ ದೇಶ ಬಿಡುವಂತಿಲ್ಲ ಎಂಬ ಷರತ್ತನ್ನೂ ವಿಧಿಸಿದೆ.  ಐಎನ್​ಎಕ್ಸ್​​ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಿ. ಚಿದಂಬರಂ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದೆ.
Published by: HR Ramesh
First published: December 31, 2019, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading