ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ್ಗೆ 1 ರೂ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಟೀಕೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದ ಪ್ರಶಾಂತ್ ಭೂಷಣ್ ಅವರಿಗೆ 6 ತಿಂಗಳವರೆಗೆ ಜೈಲುಶಿಕ್ಷೆ ವಿಧಿಸುವ ಅವಕಾಶ ಇತ್ತು. ಆದರೆ, ಅಂತಿಮವಾಗಿ ನ್ಯಾಯಪೀಠವು 1 ರೂ ದಂಡ ಮಾತ್ರ ವಿಧಿಸಿ ತೀರ್ಪು ನೀಡಿದೆ.
ನವದೆಹಲಿ(ಆ. 31): ಭಾರತೀಯ ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸಿ ನ್ಯಾಯಾಂಗ ನಿಂದನೆ ಆರೋಪ ಎದುರಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಒಂದು ರೂಪಾಯಿ ದಂಡ ವಿಧಿಸಿ ಬಿಟ್ಟುಕಳುಹಿಸಿದೆ. ನ್ಯಾ| ಅರುಣ್ ಮಿಶ್ರ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ತೀರ್ಪು ನೀಡಿದೆ. ಒಂದು ವೇಳೆ ಭೂಷನ್ ಅವರು ನಿಗದಿತ ಅವಧಿಯೊಳಗೆ 1 ರೂ ದಂಡ ಪಾವತಿ ಮಾಡದಿದ್ದರೆ 3 ತಿಂಗಳು ಸೆರೆಮನೆವಾಸಕ್ಕೆ ಹೋಗಬೇಕಾಗಬಹುದು..
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರನ್ನ ಟೀಕಿಸಿ ಪ್ರಶಾಂತ್ ಭೂಷಣ್ ಎರಡು ಟ್ವೀಟ್ ಪೋಸ್ಟ್ ಮಾಡಿದ್ದರು. ಇವು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ನ್ಯಾ| ಅರುಣ್ ಮಿಶ್ರಾ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಪ್ರಶಾಂತ್ ಭೂಷಣ್ ದೋಷಿ ಎಂದು ತೀರ್ಮಾನಿಸಿತ್ತು. ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರುವಂತೆ ಪ್ರಶಾಂತ್ ಭೂಷಣ್ಗೆ ಮೂರು ದಿನ ಕಾಲಾವಕಾಶವನ್ನೂ ಕೋರ್ಟ್ ನೀಡಿತ್ತು.
ಆದರೆ, 63 ವರ್ಷದ ಪ್ರಶಾಂತ್ ಭೂಷಣ್ ತಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಿದರೆ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಂತೆ. ನೀವು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆಯೇ ಹೊರತು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕಳೆದ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ಅವರನ್ನ ಕ್ಷಮಿಸಿಬಿಡುವಂತೆ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದು ಕುತೂಹಲ ಮೂಡಿಸಿತು. ಪ್ರಶಾಂತ್ ಭೂಷಣ್ ಬಹಳಷ್ಟು ಮಂದಿಗೆ ನೆರವಾಗಿದ್ದಾರೆ. ಅದನ್ನು ಪರಿಗಣಿಸಿ ಅವರಿಗೆ ಎಚ್ಚರಿಕೆ ಕೊಟ್ಟು ಕ್ಷಮಿಸುವುದು ಉತ್ತಮ ಎಂಬ ಸಲಹೆ ನೀಡಿದ್ದರು. ಆದರೆ, ನ್ಯಾಯಪೀಠ ಇದಕ್ಕೆ ಸಮಾಧಾನಗೊಳ್ಳಲಿಲ್ಲ. ಪ್ರಶಾಂತ್ ಭೂಷಣ್ ತಮ್ಮ ತಪ್ಪನ್ನೇ ಒಪ್ಪಿಕೊಳ್ಳುತ್ತಿಲ್ಲ ಎಂದು ತನ್ನ ಅಸಮಾಧಾನ ತೋರ್ಪಡಿಸಿತು.
ಇವತ್ತೂ ಕೂಡ ಪ್ರಶಾಂತ್ ಭೂಷಣ್ ಅವರು ಕ್ಷಮೆ ಕೋರುವ ಅವಕಾಶ ಹೊಂದಿದ್ದರು. ಅವರಿಗೆ 6 ತಿಂಗಳವರೆಗೆ ಸರಳ ಸೆರೆಮನೆವಾಸದ ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ, ಅಥವಾ ಎರಡನ್ನೂ ಅವರಿಗೆ ನೀಡುವ ಅವಕಾಶವನ್ನ ಸರ್ವೋಚ್ಚ ನ್ಯಾಯಾಲಯ ಹೊಂದಿತ್ತು. ಆದರೆ, ಅಂತಿಮವಾಗಿ ಒಂದು ರೂ ದಂಡ ವಿಧಿಸಿ ಬಿಟ್ಟುಕಳುಹಿಸಲು ಕೋರ್ಟ್ ನಿರ್ಧಾರ ಮಾಡಿತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ