ನವದೆಹಲಿ(ಮಾ. 24): ಮುಂದಿನ ತಿಂಗಳು 23 ರಂದು ನಿವೃತ್ತರಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರು ತಮ್ಮ ಉತ್ತರಾಧಿಕಾರಿಯಾಗಲು ಆಂಧ್ರ ಮೂಲದ ಹಿರಿಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರವು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರನ್ನ ಕೇಳಿಕೊಂಡಿತ್ತು. ಹಾಲಿ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ಮುನ್ನ ಉತ್ತರಾಧಿಕಾರಿ ಹೆಸರನ್ನು ಸೂಚಿಸುವುದು ಸಂಪ್ರದಾಯ ಕೂಡ ಹೌದು. ಹಾಗೆಯೇ, ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದೂ ಕೂಡ ಸಾಂಪ್ರದಾಯಿಕ ಕ್ರಮವಾಗಿದೆ.
ಸಿಜೆಐ ಶರದ್ ಅರವಿಂದ್ ಬೋಬ್ಡೆ ಬಳಿಕ ನ್ಯಾ| ಎನ್ ವಿ ರಮಣ ಅವರೇ ಸುಪ್ರೀಂ ಕೋರ್ಟ್ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ನ್ಯಾ| ರಮಣ ಅವರ ಸೇವಾವಧಿ 2022, ಆಗಸ್ಟ್ 26ರವರೆಗೂ ಇದೆ. 1957, ಆಗಸ್ಟ್ 27ರಂದು ಜನಿಸಿದ ನ್ಯಾ| ರಮಣ ಅವರು 2000ರ ಜೂನ್ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಅದಾದ ಬಳಿಕ ಅವರ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನಂತರ 2014, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರನ್ನ ನೇಮಕ ಮಾಡಲಾಯಿತು.
ಇದನ್ನೂ ಓದಿ: ಎಲ್ಲಾ 224 ಶಾಸಕರದ್ದೂ ತನಿಖೆಯಾಗಲಿ, ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಗೊತ್ತಾಗಲಿ: ಡಾ. ಸುಧಾಕರ್
ಉನ್ನತ ಹಂತದ ನ್ಯಾಯಾಲಯಗಳಿಗೆ ನೇಮಕ ಮಾಡಲು ನಿಯಮಾವಳಿಗಳಿವೆ. ಅದರಂತೆ, ಸುಪ್ರೀಂ ಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಸಿಜೆಐ ಪೀಠ ಅಲಂಕರಿಸಲು ಸಮರ್ಥರಿದ್ದರೆ ಅವರನ್ನೇ ಆರಿಸಬೇಕೆಂದಿದೆ. ಇಲ್ಲಿ ಅವರು ಆ ಹುದ್ದೆಗೆ ಸಮರ್ಥರಿದ್ಧಾರೆ ಎಂಬುದನ್ನು ನಿರ್ಧರಿಸುವುದಷ್ಟೇ ಪ್ರಭಾವ ಬೀರುವ ಬಾಹ್ಯ ಅಂಶವಾಗಿದೆ.
ನಿಯಮಾವಳಿ ಪ್ರಕಾರ, ಹಾಲಿ ಸಿಜೆಐ ಅವರು ನಿವೃತ್ತರಾಗುವ ಮುನ್ನ ಕಾನೂನು ಸಚಿವರು ಮುಂದಿನ ಸಿಜೆಐ ಸ್ಥಾನಕ್ಕೆ ಹೆಸರನ್ನು ಸೂಚಿಸುವಂತೆ ಕೇಳಿಕೊಳ್ಳುತ್ತಾರೆ. ಸಿಜೆಐ ಶಿಫಾರಸು ಬಂದ ನಂತರ ಕಾನೂನು ಸಚಿವರು ಅದನ್ನು ಪ್ರಧಾನಿಗಳ ಗಮನಕ್ಕೆ ತರುತ್ತಾರೆ. ನಂತರ ಪ್ರಧಾನಿಗಳು ಆ ವಿಚಾರದಲ್ಲಿ ರಾಷ್ಟ್ರಪತಿಗಳಿಗೆ ಸಲಹೆ ನೀಡುತ್ತಾರೆ. ಆ ಸಲಹೆಯೇ ಬಹುತೇಕ ಅಂತಿಮವಾಗಿರುತ್ತದೆ. ಪ್ರಧಾನಿಗಳ ಸಲಹೆಯಂತೆ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ ಮಾಡಿ ಆದೇಶ ಹೊರಡಿಸುತ್ತಾರೆ.
ಒಂದು ವೇಳೆ, ಸಿಜೆಐ ಸ್ಥಾನಕ್ಕೆ ಸೂಚಿಸಲಾದ ನ್ಯಾಯಮೂರ್ತಿಗಳು ಸಮರ್ಥರಲ್ಲ ಎಂಬ ಸಂಶಯ ಇದ್ದರೆ ಸರ್ವೋಚ್ಚ ನ್ಯಾಯಾಲಯದ ಇತರ ನ್ಯಾಯಮೂರ್ತಿಗಳನ್ನ ಸಮಾಲೋಚಿಸಿದ ಬಳಿಕ ಸಿಜೆಐ ನೇಮಕಾತಿ ನಡೆಯುತ್ತದೆ.
ಮಹಾರಾಷ್ಟ್ರ ಮೂಲದ ಹಾಲಿ ಸಿಜೆಐ ಎಸ್ ಎ ಬೋಬ್ಡೆ ಅವರು 2019ರ ನವೆಂಬರ್ನಲ್ಲಿ ಭಾರತದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ನ್ಯಾ| ರಂಜನ್ ಗೊಗೋಯ್ ಅವರು ಸಿಜೆಐ ಆಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ