ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಸುಪ್ರೀಂಕೋರ್ಟ್​ನಲ್ಲಿ ಇಬ್ಬರು ಅತ್ಯಾಚಾರಿಗಳ ಶುಶ್ರೂಷಾ ಅರ್ಜಿ ವಜಾ

ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ, ಮುಖೇಶ್ ಸಿಂಗ್ ಕ್ಷಮಾಪಣೆ ನೀಡುವಂತೆ ಕೋರಿ ಅರ್ಜಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಜ. 22ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವುದು ಖಚಿತವಾಗಿದೆ.

Sushma Chakre | news18-kannada
Updated:January 14, 2020, 2:29 PM IST
ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಸುಪ್ರೀಂಕೋರ್ಟ್​ನಲ್ಲಿ ಇಬ್ಬರು ಅತ್ಯಾಚಾರಿಗಳ ಶುಶ್ರೂಷಾ ಅರ್ಜಿ ವಜಾ
ಸುಪ್ರೀಂಕೋರ್ಟ್​
  • Share this:
ನವದೆಹಲಿ (ಜ. 14): ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸುಪ್ರೀಂಕೋರ್ಟ್​ನಲ್ಲಿ ಇಂದು ಕ್ಯುರೇಟಿವ್ ಅರ್ಜಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ, ಮುಖೇಶ್  ಸುಪ್ರೀಂಕೋರ್ಟ್ ಎದುರು ಕ್ಷಮಾಪಣೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನ್ಯಾ. ಎನ್.ವಿ. ರಮಣ್, ನ್ಯಾ. ಅರುಣ್ ಮಿಶ್ರಾ, ನ್ಯಾ. ಆರ್.ಎಫ್. ನಾರಿಮನ್, ನ್ಯಾ. ಭಾನುಮತಿ ಹಾಗೂ ನ್ಯಾ. ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಇಂದು ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ಈ ಮೂಲಕ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಮೇಲ್ಮನವಿ ಅರ್ಜಿಗಳೂ ವಜಾಗೊಂಡಂತಾಗಿದೆ. ಜ. 22ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನ ನಿಗದಿಗೊಳಿಸಲಾಗಿದೆ. ಇಂದಿನ ತೀರ್ಪಿನಿಂದಾಗಿ ನಾಲ್ವರು ಅಪರಾಧಿಗಳಿಗೆ ಕಾನೂನಿನ ಎಲ್ಲ ಬಾಗಿಲುಗಳೂ ಮುಚ್ಚಿದ್ದು, ಗಲ್ಲು ಶಿಕ್ಷೆ ಖಚಿತವಾದಂತಾಗಿದೆ.

ಇದನ್ನೂ ಓದಿ: ಪ್ರಯಾಣಿಕರೇ ಎಚ್ಚರ! ಮೈಸೂರಿನಿಂದ ಬೆಂಗಳೂರಿಗೆ ಡ್ರಾಪ್ ನೀಡುವ ಆಮಿಷವೊಡ್ಡಿ ಹಣ, ಚಿನ್ನ ದೋಚಿದ ಕಳ್ಳರು

ಏನಿದು ಘಟನೆ?:
ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ರಾತ್ರಿ ತನ್ನ ಗೆಳೆಯನೊಂದಿಗೆ ಹೊರಟಿದ್ದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ 5 ಜನ ಹಲ್ಲೆ ನಡೆಸಿದ್ದರು. ಚಲಿಸುತ್ತಿದ್ದ ಬಸ್​ನಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಗೆಳೆಯನನ್ನು ಬಸ್​ನಿಂದ ಹೊರಗೆ ದಬ್ಬಿದ್ದರು. 23 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ ಕಬ್ಬಿಣದ ಸರಳಿನಿಂದ ಆಕೆಯ ತಲೆ, ಗುಪ್ತಾಂಗಗಳಿಗೆ ದಾಳಿ ನಡೆಸಿ ಬಸ್​ನಿಂದ ಹೊರಗೆ ತಳ್ಳಿದ್ದರು. ಈ ಕೃತ್ಯದಿಂದ ಆಕೆಯ ಕರುಳು, ಗುಪ್ತಾಂಗಗಳಿಗೆ ತೀವ್ರ ಹಾನಿಯಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಆಕೆ ಬದುಕುಳಿಯಲಿಲ್ಲ. ಡಿ. 29ರಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ತನ್ನ ಈ ಸ್ಥಿತಿಗೆ ಕಾರಣರಾದವರ ವಿರುದ್ಧ ಹೋರಾಡಲೇಬೇಕೆಂದು 13 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ಆ ಯುವತಿಯ ಪ್ರಕರಣಕ್ಕೆ ನಿರ್ಭಯಾ ಎಂದು ಹೆಸರಿಟ್ಟು ಆಕೆಯ ಸಾವಿಗೆ ನ್ಯಾಯ ದೊರಕಿಸಲೇಬೇಕೆಂದು ದೇಶಾದ್ಯಂತ ಒಕ್ಕೊರಲಿನ ಬೇಡಿಕೆ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಒಬ್ಬ ಬಾಲಾಪರಾಧಿ ಎಂದು ಬಿಡುಗಡೆಯಾಗಿದ್ದ. ಇನ್ನು ನಾಲ್ವರಿಗೆ ಗಲ್ಲು ಶಿಕ್ಷೆಯಾಗಿತ್ತು.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ