ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಬಣದ ಮಧ್ಯೆ ನಡೆಯುತ್ತಿದ್ದ ಶಿವಸೇನೆಯ (Shiv Sena) ಪಕ್ಷದ ಗುರುತಿನ ಕಾದಾಟದಲ್ಲಿ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದೆ. ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತಿನ ಚಿಹ್ನೆಯ ಸ್ವಾಧೀನಕ್ಕಾಗಿ ಶಿಂಧೆ ಮತ್ತು ಠಾಕ್ರೆ ಬಣದ ಮಧ್ಯೆ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಸಿಎಂ ಏಕನಾಥ್ ಶಿಂದೆ ಬಣಕ್ಕೆ ಗೆಲುವಾಗಿದ್ದು, ಉದ್ಧವ್ ಠಾಕ್ರೆ ಅವರಿಗೆ ಮುಖಭಂಗವಾಗಿದೆ.
ಈ ಹಿಂದೆ ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಸಿಎಂ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ನಿರ್ಧಾರ ಘೋಷಿಸಿತ್ತು. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಬಣ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಏಕನಾಥ್ ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಗುರುತಿಸಿರುವ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಠಾಕ್ರೆ ಬಣಕ್ಕೆ ಹಿನ್ನಡೆ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕೇಂದ್ರ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ ಉದ್ಧವ್ ಠಾಕ್ರೆ ಗುಂಪಿನ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹೆಸರು ಮತ್ತು ಚಿಹ್ನೆ ಟಾರ್ಚ್ ಅನ್ನು ಉಳಿಸಿಕೊಳ್ಳಲು ನ್ಯಾಯ ಪೀಠ ಅವಕಾಶ ಮಾಡಿಕೊಟ್ಟಿದೆ. ಇದೇ ಫೆಬ್ರವರಿ 26ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಉಪ ಚುನಾವಣೆಯ ದೃಷ್ಟಿಯಿಂದ ಕೇಂದ್ರ ಚುನಾವಣಾ ಆಯೋಗ ಮಧ್ಯಂತರ ವ್ಯವಸ್ಥೆಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: Uddhav Thackeray: ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯ ಗುಲಾಮ: ಉದ್ಧವ್ ಠಾಕ್ರೆ ಆಕ್ರೋಶ
ಶಿಂಧೆ ಬಣಕ್ಕೆ ನೋಟಿಸ್ ಜಾರಿ
ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತ್ರಿ ಸದಸ್ಯ ಪೀಠ, ನಿಮ್ಮ ಮತ್ತು ಇತರ ಕಡೆಯ ವಾದವನ್ನು ಆಲಿಸದೆ ನಾವು ಯಾವುದೇ ನಿರ್ಧಾರವನ್ನು ನೀಡಲು ಸಾಧ್ಯವಿಲ್ಲ. ಆದರೆ ಶಿವಸೇನೆಯ ಚಿಹ್ನೆ ಮತ್ತು ಹೆಸರನ್ನು ಬಳಸುವ ಹಕ್ಕು ಸದ್ಯಕ್ಕೆ ಏಕನಾಥ್ ಶಿಂಧೆ ಬಣಕ್ಕೆ ಇರುತ್ತದೆ ಎಂದು ಹೇಳಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪೀಠವು ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ನಂತರ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.
ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉದ್ಧವ್ ಠಾಕ್ರೆ ಬಣ, ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಏಕನಾಥ್ ಶಿಂಧೆ ತಂಡ ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ಬಳಸದಂತೆ ತಡೆಯಬೇಕು ಎಂದು ಆಗ್ರಹಿಸಿತ್ತು. ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆಗ ಉದ್ಧವ್ ಠಾಕ್ರೆ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣಾ ಆಯೋಗದ ನಿರ್ಧಾರದ ಆಧಾರ ದುರ್ಬಲವಾಗಿದೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ತಡೆ ನೀಡಬೇಕು. ಚುನಾವಣಾ ಆಯೋಗದ ಈ ನಿರ್ಧಾರ ತೀವ್ರ ಕಳವಳ ಮೂಡಿಸಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ