ಸರ್ವೋಚ್ಛ ನ್ಯಾಯಾಲಯವು (Supreme Court) ಕಳೆದ ಸೋಮವಾರದಂದು ಲಕ್ಷದ್ವೀಪ ಆಡಳಿತಕ್ಕೆ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದಲ್ಲಿ ಚಿಕನ್ ಸೇರಿದಂತೆ ಮಾಂಸದ ಉತ್ಪನ್ನಗಳನ್ನು (Meat Product) ಸೇರಿಸುವಂತೆ ನಿರ್ದೇಶಿಸಿದೆ. ಈ ವೇಳೆ ಕೇರಳ ಹೈಕೋರ್ಟ್ ನೀಡಿರುವ ಆದೇಶವನ್ನು ಮುಂದುವರೆಸುವಂತೆ ಸೂಚಿಸಿದೆ.
ಈ ನಡುವೆ ಲಕ್ಷದ್ವೀಪ ಆಡಳಿತವು ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಡೈರಿ ಉತ್ಪನ್ನ ಹಾಗೂ ಚಿಕನ್ ಸೇರಿದಂತೆ ಮಾಂಸದ ಉತ್ಪನ್ನಗಳನ್ನು ಊಟದಲ್ಲಿ ನೀಡುವುದನ್ನು ತೆಗೆದುಹಾಕಿತ್ತು ಹಾಗೂ ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಲಾಗಿತ್ತು. ಈ ಅರ್ಜಿಯನ್ನು ಆಲಿಸಿದ ಸರ್ವೋಚ್ಛ ನ್ಯಾಯಾಲಯವು ಈ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಊಟದ ವಿಚಾರದಲ್ಲಿ ನ್ಯಾಯಾಲಯ ಮೊರೆ
ಇದಕ್ಕೂ ಮುಂಚೆ ಈ ಬಗ್ಗೆ ಕೇರಳ ಹೈಕೋರ್ಟ್ ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು . ಕೇರಳ ಹೈಕೋರ್ಟ್ ರದ್ದು ಪಡಿಸಿತ್ತು. ತದನಂತರ ಈ ಬಗ್ಗೆ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯದ ಮೊರೆ ಹೊಗಿತ್ತೆನ್ನಲಾಗಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಭಾರತ ಒಕ್ಕೂಟ ಹಾಗೂ ಲಕ್ಷದ್ವೀಪದ ಕೇಂದ್ರಾಡಳಿತಕ್ಕೆ ಈ ವಿಚಾರವಾಗಿ ನೋಟಿಸ್ ಸಹ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ. ಎ ಎಸ್ ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು ಈ ಸೂಚನೆ ನೀಡಿದೆ.
ಆದೇಶಕ್ಕೆ ತಡೆ
ಏತನ್ಮಧ್ಯೆ, ಜೂನ್ 22, 2021 ರಂದು ಕೇರಳ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನೇ ಮುಂದುವರೆಸುವಂತೆ ಕೋರ್ಟ್ ಸೂಚಿಸಿದೆ. ಜೂನ್ 22, 2021 ರಂದು ಕೇರಳ ಹೈಕೋರ್ಟ್, ಲಕ್ಷದ್ವೀಪ ಜಾರಿ ಮಾಡಿದ್ದ ಡೈರಿ ಫಾರ್ಮ್ ಮುಚ್ಚುವಿಕೆ ಹಾಗೂ ಮಧ್ಯಾಹ್ನದ ಊಟದಲ್ಲಿ ಚಿಕನ್ ಸೇರಿದಂತೆ ಮಾಂಸೋತ್ಪನ್ನಗಳನ್ನು ತೆಗೆದುಹಾಕುವ ಆದೇಶಕ್ಕೆ ತಡೆ ನೀಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರ
ತದನಂತರ, ಸೆಪ್ಟೆಂಬರ್ 2021 ರಂದು ಕರವಟ್ಟಿ ಪ್ರದೇಶ ನಿವಾಸಿಯಾಗಿರುವ ಅಜ್ಮಲ್ ಅಹ್ಮದ್ ಎಂಬುವವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಅವರು ತಮ್ಮ ಅರ್ಜಿಯಲ್ಲಿ, ಲಕ್ಷದ್ವೀಪ ಆಡಳಿತಾಧಿಕಾರವನ್ನು ಡಿಸೆಂಬರ್ ನಿಂದ ಪಡೆದಿದ್ದ ಪ್ರಫುಲ್ ಖೋಡಾ ಪಟೇಲ್ ಅವರು ಪ್ರದೇಶದಲ್ಲಿರುವ ಪಶುಸಂಗೋಪನಾ ಇಲಾಖೆಯಿಂದ ನಡೆಸಲಾಗುತ್ತಿರುವ ಎಲ್ಲ ಡೈರಿ ಫಾರ್ಮ್ ಗಳನ್ನು ಮುಚ್ಚಿದ್ದು ದ್ವೀಪವಾಸಿಗಳ ಶತಮಾನಗಳಿಂದ ಬಂದಿರುವ ಆಹಾರ ಅಭ್ಯಾಸಗಳ ಮೇಲೆ "ಆಕ್ರಮಣ" ಮಾಡಿದ್ದಾರೆಂದು ಆಕ್ಷೇಪಿಸಿದ್ದರು. ಇದನ್ನು ಹೈಕೋರ್ಟ್ ರದ್ದುಗೊಳಿಸಿತ್ತೆನ್ನಲಾಗಿದೆ.
ಇದನ್ನು ಓದಿ: Covid ಸಾವುಗಳ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ: ರಾಹುಲ್ ಗಾಂಧಿ ಟೀಕೆ
ಅಜ್ಮಲ್ ಅವರು ತಮ್ಮ ಅರ್ಜಿಯಲ್ಲಿ, ಪಶುಸಂಗೋಪನಾ ಇಲಾಖೆಯು ತನ್ನ ಮೇ 21, 2021 ರ ಆದೇಶದಲ್ಲಿ ಎಲ್ಲ ಡೈರಿ ಫಾರ್ಮ್ ಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಮುಂದುವರೆಯುತ್ತ ಅರ್ಜಿಯಲ್ಲಿ ಅವರು ಈ ಆದೇಶವನ್ನು ಇಲಾಖೆಯು ಗೋವು, ಕರುಗಳು ಹಾಗೂ ಎತ್ತುಗಳ ವಧೆಯನ್ನು ನಿಷೇಧಿಸುವ ಪ್ರಸ್ತಾವಿತ ಪ್ರಾಣಿ ಸಂರಕ್ಷಣಾ ಕಾಯಿದೆ 2021ರ ಅನುಷ್ಠಾನ ಆಗುವಂತೆ ಉದ್ದೇಶಪೂರ್ವಕವಾಗಿ ಮಾಡಿದೆ ಎಂದು ಆರೋಪಿಸಿದ್ದರು.
ಶಾಲಾ ವಿದ್ಯಾರ್ಥಿಗಳ ಊಟದ ವಿಚಾರವಾಗಿ ಪ್ರಶ್ನೆ
ಅಜ್ಮಲ್ ಅವರು, ಇಲಾಖೆಯು ಈ ಅದೇಶದ ಮೂಲಕ ದ್ವೀಪವಾಸಿಗಳು ಹಾಲಿನ ಉತ್ಪನ್ನಗಳಿಂದ ವಂಚಿತರಾಗುವಂತೆ ಮಾಡುವುದಲ್ಲದೆ ಹಾಲಿನ ಪೂರೈಕೆಗಾಗಿ ಗುಜರಾತ್ ನಿಂದ ಆಮದು ಮಾಡಿಕೊಳ್ಳುವಂತೆ ಮಾಡಿದೆ ಎಂದು ತಮ್ಮ ಅರ್ಜಿಯಲ್ಲಿ ವಿವರಿಸಿದ್ದರೆನ್ನಲಾಗಿದೆ. ಅರ್ಜಿದಾರರು ಶಾಲಾ ವಿದ್ಯಾರ್ಥಿಗಳಿಗಾಗಿರುವ ಮಧ್ಯಾಹ್ನದ ಊಟದಲ್ಲಿ ಚಿಕನ್ ಸೇರಿದಂತೆ ಮಾಂಸೋತ್ಪನ್ನಗಳನ್ನು ತೆಗೆದು ಹಾಕಿರುವುದನ್ನೂ ಸಹ ಪ್ರಶ್ನಿಸಿದ್ದರೆನ್ನಲಾಗಿದೆ.
ಇದನ್ನು ಓದಿ: ಬಿಗಿ ಭದ್ರತೆಯಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ
ಸಮಿತಿಯಿಂದ ತೆಗೆದುಕೊಂಡ ನಿರ್ಧಾರದ ಅನುಗುಣವಾಗಿ ಜನವರಿ 27, 2021 ರಂದು ನಡೆದಿದ್ದ ಸಭೆಯಲ್ಲಿ ಚಾಲ್ತಿಯಲ್ಲಿದ್ದ ದ್ವೀಪದ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಮೆನುವನ್ನು ತಿರುಚಲಾಗಿದೆ ಎಂದು ಅಜ್ಮಲ್ ತಮ್ಮ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದೆ.
ಸದ್ಯ, ಈಗ ಸರ್ವೋಚ್ಛ ನ್ಯಾಯಾಲಯವು ಕೇರಳದ ಮೊದಲು ನೀಡಿದ್ದ ಆದೇಶ ಮುಂದುವರೆಯುವಂತೆ ಸೂಚಿಸಿದ್ದು ಮಧ್ಯಾಹ್ನದ ಊಟದಲ್ಲಿ ಮಾಂಸದ ಉತ್ಪನ್ನಗಳನ್ನು ಸೇರಿಸುವಂತೆ ಲಕ್ಷದ್ವೀಪ ಆಡಳಿತಕ್ಕೆ ನಿರ್ದೇಶನ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ